Advertisement

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

02:53 PM May 28, 2024 | Team Udayavani |

ಕಲಬುರಗಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಚಂದ್ರಶೇಖರ ಅವರ ಆತ್ಮಹತ್ಯೆ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.

Advertisement

ಪ್ರಕರಣ ಉನ್ನತ ಮಟ್ಟದ ತನಿಖೆಗೆ ಮುಂದಾಗುವುದರ ಜತೆಗೆ ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿಂದು ಆಗ್ರಹಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಒಂದು ಸುಳ್ಳು ನೂರು ಸಲ ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈಗೇಲ್ಲಿ ತಮ್ಮ ಪ್ರಮಾಣಿಕತೆ ಇದೆ? ಎಂಬುದನ್ನು ತಿಳಿಸಲಿ ಎಂದು ಪ್ರಶ್ನಿಸಿದರು.

ಹಿಂದೆ ನಮ್ಮ‌ ಸರಕಾರದ ಮೇಲೆ ಭ್ರಷ್ಡಾಚಾರದ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ ಭ್ರಷ್ಟಾಚಾರದ ನಿಜವಾದ ಪಿತಾಮಹ ಅಂದ್ರೆ ಅದು ಕಾಂಗ್ರೆಸ್ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದ ವಿಜಯೇಂದ್ರ, ಅಧಿಕಾರಿ ಚಂದ್ರಶೇಖರ ಸೂಸೈಡ್ ನೋಟ್ ನಲ್ಲಿ ಕೆಲ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿದ್ದಾರೆ. ಪ್ರಮುಖವಾಗಿ ನೂರಾರು ಕೋ.ರೂ ಭ್ರಷ್ಟಾಚಾರವಾಗಿದೆ ಎಂದರು.

ಹೀಗಾಗಿ ಸಂಬಂಧಿಸಿದ ಸಚಿವರ ಆದೇಶದ ಮೇಲೆ ನೂರಾರು ಕೋಟಿ ಅವ್ಯವಹಾರ ನಡೆದಿದೆ ಅಂತ ನೋಟ್ ನಲ್ಲಿ ಬರೆಯಲಾಗಿದೆ. ಹೀಗಾಗಿ ಸಚಿವ ನಾಗೇಂದ್ರರನ್ನ ಕೂಡಲೇ ಸಂಪುಟದಿಂದ ಕೈ  ಬಿಡಬೇಕು. ಜತೆಗೆ ಹಾಲಿ ಹೈಕೋರ್ಟ್ ಜಡ್ಜ್ ಅವರಿಂದ ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.

Advertisement

ಈ ಪ್ರಕರಣಕ್ಕೆ  ಸಿಎಂ ಉಡಾಫೆ ಉತ್ತರ ಕೊಡದೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಒಂದು ವೇಳೆ ಉನ್ನತ ಮಟ್ಟದ ತನಿಖೆಗೆ ಹಿಂದೇಟು ಹಾಕಿದರೆ ಬಿಜೆಪಿ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ ಆರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ಸಚಿವರನ್ನು ಮುಂದುವರೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ‌

ಹದಗೆಟ್ಟ ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಹೀಗಾಗಿ ಇದನ್ನು ನೋಡಿಕೊಂಡು ಬಿಜೆಪಿ ಕೈ ಕಟ್ಟಿ ಕೂಡುವುದಿಲ್ಲ ಎಂದು ಪುನರುಚ್ಚರಿಸಿದರು.

ಪ್ರಜ್ವಲ್ ಹೇಳಿಕೆ ಸ್ವಾಗತ: ಪ್ರಜ್ವಲ್ ರೇವಣ್ಣ 31 ರ ಬಳಿಕ ರಾಜ್ಯಕ್ಕೆ ಆಗಮಿಸಿ ಬಂದು ತನಿಖೆಗೆ ಒಳಗಾಗುತ್ತೇನೆ ಎಂದಿರುವುದನ್ನು ಸ್ವಾಗತಿಸುತ್ತೇನೆ. ಕಳೆದ ಒಂದು ತಿಂಗಳಿಂದ ನಾನಾ ರೀತಿಯ ವಿಷಯಗಳು ಹರಿದಾಡಿವೆ. ಹೀಗಾಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗಬೇಕು. ಖುದ್ದು ಪ್ರಜ್ವಲ್ ರೇವಣ್ಣ ಅವರೇ ಎಸ್ ಐಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ ಎಂದರು.

ಸಚಿವ ಮಧು ಬಂಗಾಪ್ಪನವರ ಹೇರ್ ಕಟಿಂಗ್ ವಿಚಾರವಾಗಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕನ್ನಡ ಬರಲ್ಲ ಅಂತ ಸಚಿವರೇ ಹೇಳಿದ್ದಾರೆ. ಶಿಕ್ಷಣ ಸಚಿವರಾಗಿ ಹೇಗೇ ಇರಬೇಕು ಎನ್ನೋದು ಹೇಳಿದ್ದನ್ನೆ ನಾನು ಹೇಳಿದ್ದೇನೆ. ಆದರೆ ಸಚಿವ ಮಧು ಬಂಗಾರಪ್ಪ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ ಅನ್ಸುತ್ತೆ‌. ಪ್ರಮುಖವಾಗಿ ಅವರಿಗೆ ಹಣಕಾಸಿನ ಸಮಸ್ಯೆ ಇದ್ರೆ ನಮ್ಮ ಯುವ ಮೋರ್ಚಾದವರಿಗೆ ಪ್ರತಿ ತಿಂಗಳು ಹೇರ್ ಕಟ್ ಗೆ ಹಣ ಕೊಡಿ ಅಂತ ಎಂದು ಹೇಳುತ್ತೇನೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಅಭಿವೃದ್ಧಿ ಶೂನ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಹನಿಮೂನ್ ಪಿರೇಡ್ ಮುಗಿದಿದೆ. ಆದರೆ ಸಾಧನೆ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರು.

ವರ್ಷದುದ್ದಕ್ಕೂ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯ ನೆರವೇರಿಸಿಲ್ಲ. ಜನಸಾಮಾನ್ಯರೇ ಸರ್ಕಾರದ ಸಾಧನೆ ಶೂನ್ಯ ಎನ್ನುತ್ತಿದ್ದಾರೆ ಎಂದರು.

ಭೀಕರ ಬರದಿಂದ ರಾಜ್ಯ ತತ್ತರಿಸಿದರೂ ಕೇಂದ್ರ ಅನುದಾನ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆದರು. ಆದರೆ ಕೇಂದ್ರ ನೆರವು ನೀಡಿದ್ದಾಗಿದೆ. ಆದರೂ ತಾಂತ್ರಿಕ ಕಾರಣವೊಡ್ಡಿ ಸರಕಾರ ರೈತರಿಗೆ ಪರಿಹಾರ ನೀಡುತ್ತಿಲ್ಲ. ಜತೆಗೆ ಬೆಳೆ ವಿಮೆ ಮತ್ತು ಪರಿಹಾರ ಎರಡೂ ಸಮರ್ಪಕವಾಗಿ  ಕೊಡುತ್ತಿಲ್ಲ ಎಂದು ಹೇಳಿದರು.

ಸರಕಾರಕ್ಕೆ ರೈತರ ಪರ ನೈಜ ಕಾಳಜಿ ಇಲ್ಲ.‌ ಕರ್ನಾಟಕದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ದೇಶದಲ್ಲಿಯೇ ಚರ್ಚೆ ಆಗುತ್ತಿದೆ. ಚನ್ನಗಿರಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದ ಘಟನೆ ನಡೆದಿದೆ. ಮಟಕಾ ದಂಧೆ ಯಥೇಚ್ಛವಾಗಿ ನಡೆಯುತ್ತಿದೆ.‌ ಅಕ್ರಮ ದಂಧೆಗಳು ಯಾರ ಭಯವೂ ಇಲ್ಲದೇ ನಡೆಯುತ್ತಿವೆ. ಸಾವಿರಾರು ಜನ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಹಾಗೂ ಸಿಎಂ,  ಗೃಹ ಸಚಿವರು ಇದಾರೋ ಇಲ್ಲವೋ ಎನ್ನುವ ಸ್ಥಿತಿ ಎದುರಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ ಎಂದು ವಿಜಯೇಂದ್ರ ಆತಂಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next