Advertisement

Cricket: ವೈಭವ್‌ ಸೂರ್ಯವಂಶಿ 12ನೇ ವಯಸ್ಸಲ್ಲೇ ರಣಜಿ ಪದಾರ್ಪಣೆ

11:04 PM Jan 06, 2024 | Team Udayavani |

ಪಾಟ್ನಾ: ಬಿಹಾರದ ಎಡಗೈ ಆರಂಭಕಾರ ವೈಭವ್‌ ಸೂರ್ಯವಂಶಿ ಪ್ರಸಕ್ತ ರಣಜಿ ಋತುವಿನ ಮೊದಲ ದಿನವೇ ಸುದ್ದಿಯಾಗಿದ್ದಾರೆ. ಮುಂಬಯಿ ವಿರುದ್ಧ ರಣಜಿ ಪದಾರ್ಪಣೆಗೈದಾಗ ಇವರ ವಯಸ್ಸು ಕೇವಲ 12 ವರ್ಷ ಎಂಬುದು ತೀವ್ರ ಕೌತುಕಕ್ಕೆ ಕಾರಣವಾಗಿದೆ. ಅರ್ಥಾತ್‌, 7ನೇ ತರಗತಿಯಲ್ಲಿ ಓದಬೇಕಿರುವ ವಿದ್ಯಾರ್ಥಿಯೊಬ್ಬ ರಾಜ್ಯ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ ವಿಶಿಷ್ಟ ವಿದ್ಯಮಾನವಿದು!

Advertisement

ರಣಜಿ ಕ್ಯಾಪ್‌ ಧರಿಸುವಾಗ ವೈಭವ್‌ ಸೂರ್ಯವಂಶಿ ವಯಸ್ಸು 12 ವರ್ಷ, 284 ದಿನ. ರಣಜಿ ಇತಿಹಾಸದ 4ನೇ ಕಿರಿಯ ಆಟಗಾರನೆಂಬುದು ಇವರ ಹೆಗ್ಗಳಿಕೆ. ಶನಿವಾರದ ದ್ವಿತೀಯ ದಿನದಾಟದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ವೈಭವ್‌, 28 ಎಸೆತಗಳಿಂದ 19 ರನ್‌ ಗಳಿಸಿ ಶಿವಂ ದುಬೆ ಎಸೆತದಲ್ಲಿ ಔಟಾದರು. ಇದರಲ್ಲಿ 4 ಬೌಂಡರಿ ಸೇರಿತ್ತು.

ವೈಭವ್‌ ಸೂರ್ಯವಂಶಿ ಈ ಶತಮಾನದಲ್ಲಿ ರಣಜಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ.

ಕಿರಿಯ ರಣಜಿ ಕ್ರಿಕೆಟಿಗರು
ರಣಜಿ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ರಜಪೂತಾನ ತಂಡದ ಅಲಿಮುದ್ದೀನ್‌ ಅವರದ್ದಾಗಿದೆ. 1942-43ರಲ್ಲಿ ಬರೋಡ ವಿರುದ್ಧ ರಣಜಿಗೆ ಕಾಲಿಡುವಾಗ ಅಲಿಮುದ್ದೀನ್‌ ವಯಸ್ಸು 12 ವರ್ಷ, 73 ದಿನ. ಇದು ಕೇವಲ ಭಾರತೀಯ ದಾಖಲೆ ಆಗಷ್ಟೇ ಉಳಿದಿಲ್ಲ, ಪ್ರಥಮ ದರ್ಜೆ ಪಂದ್ಯವಾಡಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ದಾಖಲೆಯೂ ಆಗಿದೆ.
ಬಿಹಾರದ ಎಸ್‌.ಕೆ. ಬೋಸ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು 1959-60ರಲ್ಲಿ ಅಸ್ಸಾಮ್‌ ವಿರುದ್ಧ ರಣಜಿ ಆಡಲಿಳಿದಿದ್ದರು. ಆಗ ವಯಸ್ಸು 12 ವರ್ಷ, 76 ದಿನವಾಗಿತ್ತು.

1937-38ರಲ್ಲಿ ನಾರ್ದರ್ನ್ ಇಂಡಿಯಾದ ಮೊಹಮ್ಮದ್‌ ರಮ್ಜಾನ್‌ 12 ವರ್ಷ, 247ನೇ ದಿನದಲ್ಲಿ ಯುನೈಟೆಡ್‌ ಪ್ರಾವಿನ್ಸ್‌ ವಿರುದ್ಧ ರಣಜಿ ಆಡಲಿಳಿದಿದ್ದರು. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ವೈಭವ್‌ ಸೂರ್ಯವಂಶಿ 4ನೇ ಸ್ಥಾನದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next