Advertisement

ಇಂದು ಶ್ರೀ ವಾದಿರಾಜ ತೀರ್ಥರ ಆರಾಧನೆ; ಶ್ರೀ ವಾದಿರಾಜರ ಅಪೂರ್ವ ಕೃತಿ ಭೂಗೋಳ ವರ್ಣನೆ

02:59 PM Mar 21, 2022 | Team Udayavani |

ಭಾವೀ ಸಮೀರ, ಶ್ರೀ ವಾದಿರಾಜತೀರ್ಥರು ಬ್ರಹ್ಮ ಪದಾರ್ಹ ನೂರುಜನ ಋಜುಗಳಲ್ಲಿ 98ನೆಯ, ಲಾತವ್ಯ ಋಜುಗಳು. ದ್ವಾಪರದಲ್ಲಿ ಸುದೇವ ಎಂಬ ಬ್ರಾಹ್ಮಣನಾಗಿ, ಕಲಿಯುಗದಲ್ಲಿ ಭೂವರಾಹ, ಬಳಿಕ ಶ್ರೀ ವಾದಿರಾಜತೀರ್ಥರಾಗಿ ಸೋದೆ ಮಠವನ್ನು ಪರಂಪರೆಯಲ್ಲಿ 20ನೆಯವರಾಗಿ ಅಲಂಕರಿಸಿ ಮಧ್ವ ವೇದಾಂತ ಸಾಮ್ರಾಜ್ಯವನ್ನು ಮೆರೆಯಿಸಿದ ಮಹಾತಪಸ್ವಿ, ಪವಾಡಯೋಗಿ. ಅವರ ಪವಾಡಗಳು, ಲೋಕೋದ್ಧಾರಕ ಕಾರ್ಯಗಳು ಅಪರಿಮಿತ. ಮಾಧ್ವಯತಿಗಳಲ್ಲಿ ಮೊದಲ ಬಾರಿಗೆ ಸಶರೀರ ವೃಂದಾವನಸ್ಥರಾದವರು ಶ್ರೀ ವಾದಿರಾಜರು. (71 ವರ್ಷಗಳ ಬಳಿಕ ಶ್ರೀ ರಾಘವೇಂದ್ರತೀರ್ಥರು). ಅವರ ಸನ್ಯಾಸ ಜೀವನವೇ 112 ವರ್ಷಗಳಷ್ಟು ಸುದೀರ್ಘ‌ವಾಗಿದ್ದು ಇದೂ ಒಂದು ದಾಖಲೆಯೇ.

Advertisement

ಶ್ರೀ ವಾದಿರಾಜರು ಸುಮಾರು 8 ಟೀಕಾಗ್ರಂಥಗಳು, 5 ಟಿಪ್ಪಣಿ ಗ್ರಂಥಗಳು, ಸುಮಾರು 20 ಸ್ವತಂತ್ರ ಗ್ರಂಥಗಳು, 4 ಸ್ವತಂತ್ರ ಕಾವ್ಯಗಳು, ಸ್ತೋತ್ರ ಗ್ರಂಥಗಳು ಸುಮಾರು 55 ಮತ್ತು 23 ಕನ್ನಡ ಕೃತಿಗಳು, ತುಳು ಭಾಷೆ ಹಾಡುಗಳು, ಮೇರು ಕೃತಿ ಸ್ವಾಪ್ನವೃಂದಾವನಾಖ್ಯಾನ ಮತ್ತು ತೆಲುಗಿನಲ್ಲೂ ಕೃತಿಗಳನ್ನು ರಚಿಸಿದ್ದಾರೆ.

ಭೂಗೋಳ ವರ್ಣನೆ: ಇವರು ರಚಿಸಿದ ಸ್ವತಂತ್ರ ಗ್ರಂಥಗಳಲ್ಲಿ “ಭೂಗೋಳ ನಿರ್ಣಯ’ ಅಥವಾ “ಭೂಗೋಳ ವರ್ಣನೆ’, ವಿದ್ವಾಂಸರನ್ನು ಮತ್ತು ಆಧುನಿಕರನ್ನೂ ಗಮನ ಸೆಳೆದ ಒಂದು ಆಧ್ಯಾತ್ಮಿಕ – ವೈಜ್ಞಾನಿಕ ಕೃತಿ. ನಮ್ಮ ಋಷಿಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ವಿಶ್ವವನ್ನು ನಿರೀಕ್ಷಿಸಿ ನಮ್ಮ ಕಣ್ಣಿಗೆ ಅಗೋಚರವಾದ ಪ್ರಪಂಚವನ್ನು ವಿವೇಚಿಸಿದ್ದಾರೆ. ನಮ್ಮ ಪ್ರಾಚೀನ ಗ್ರಂಥಗಳನ್ನು ಅವಲೋಕಿಸಿದಾಗ ಆಧುನಿಕ ಭೌತಿಕ ವಿಜ್ಞಾನಿಗಳು ಕಂಡು ಹಿಡಿದ ಪ್ರಕೃತಿ ರಹಸ್ಯಗಳನ್ನು ಅದಕ್ಕಿಂತ ಎಷ್ಟೋ ವರ್ಷಗಳ ಮೊದಲೇ ನಮ್ಮ ಗ್ರಂಥಕಾರರು ಕಂಡಿದ್ದಾರೆ ಎಂಬುದು ಸ್ಪಷ್ಟ. ನ್ಯೂಟನ್‌ನ ಆಕರ್ಷಣ ಶಕ್ತಿ ನಮ್ಮ ಜೋತಿಷದಲ್ಲಿ ಉಲ್ಲೇಖವಾಗಿದೆ. ವಿಜ್ಞಾನಿಗಳ ಉಪಕರಣಗಳಿಗೆ ನಿಲುಕದ ಅನೇಕ ಸಂಗತಿಗಳನ್ನು ನಮ್ಮ ಋಷಿಗಳು ಅತೀಂದ್ರಿಯ ದೃಷ್ಟಿಯಿಂದ ನೋಡಿದ್ದರು ಎಂದು ಶ್ರೀ ವಿಶ್ವೇಶತೀರ್ಥರು, ಶ್ರೀ ಬಾದರಾಯಣಮೂರ್ತಿ 1989ರಲ್ಲಿ ಬರೆದ “ಭೂಗೋಳ ನಿರ್ಣಯ’ದ ಕನ್ನಡ ಅನುವಾದ ಗ್ರಂಥದ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಪುಟ್ಟ ಗ್ರಂಥದಲ್ಲಿ ಶ್ರೀ ವಾದಿರಾಜರು ಬ್ರಹ್ಮಾಂಡ, ಭೂಭಾಗದ ವಿವರಣೆ, ಪಾತಾಳಾದಿ ಅಧೋಲೋಕಗಳು, ನರಕಗಳ ಸ್ಥಾನ, ಆಧಾರರೂಪಗಳು, ವೈಕುಂಠಲೋಕ, ಧಾಮತ್ರಯ, ನವಾವರಣಗಳು, ಜಂಬೂದ್ವೀಪ, ಸಪ್ತದ್ವೀಪ – ಸಪ್ತಸಾಗರಗಳು, ಕಾಲಚಕ್ರ, ಸೂರ್ಯರಥ, ಗ್ರಹಗಳ ಸಂಚಾರ, ಬ್ರಹ್ಮಾಂಡದ ನವಾವರಣಗಳು ಇತ್ಯಾದಿ ವಿಷಯಗಳನ್ನು ಪ್ರಸ್ತಾವಿಸಿದ್ದಾರೆ. ವೃಂದಾವನಾಖ್ಯಾನವನ್ನು ಮೂಕನಲ್ಲಿ ಹೇಳಿಸಿದ ಶ್ರೀ ವಾದಿರಾಜರು ಸ್ವರ್ಗಾದಿಲೋಕಗಳನ್ನು, ಶ್ವೇತಾದಿ ದ್ವೀಪಗಳನ್ನು ಸಂಚರಿಸಿ ಬಂದವರಾದ್ದರಿಂದ ಅವರು ಬರೆದ ಕೃತಿ “ಭೂಗೋಳ ವರ್ಣನೆ ‘ ಕೇವಲ ಒಂದು ಗ್ರಂಥವಲ್ಲ. ಸ್ವಾನುಭವದ ಕೃತಿಯಾಗಿದೆ. ವಾದಿರಾಜರು ಪುರಾಣ ಕಾಲದವರಲ್ಲ. ನಮ್ಮ ಕಾಲದಲ್ಲಿದ್ದವರು. ಆದ್ದರಿಂದ ಕೃತಿಯಲ್ಲಿ ಹೇಳಿದ ಎಲ್ಲ ವಾಕ್ಯಗಳು ನಂಬಲರ್ಹ ಮತ್ತು ವೈಜ್ಞಾನಿಕವೂ ಹೌದು ಎಂದಿದ್ದಾರೆ ಅನುವಾದಕರು.

ಬ್ರಹ್ಮಾಂಡದ ಬಗ್ಗೆ ವಿವರಣೆಯಲ್ಲಿ ಬ್ರಹ್ಮಾಂಡ ವೆಂಬುದು ಚಿಪ್ಪಿನಂತೆ ಗಟ್ಟಿಯಾಗಿದ್ದು ಚೆಂಡಿನಂತೆ ದುಂಡಾಕಾರವಾಗಿದೆ. ಈ ಪೃಥ್ವೀಮಂಡಲವು ಮೇರುವಿನ ಸುತ್ತಲೂ ಸಪ್ತದ್ವೀಪ ಸಪ್ತಸಾಗರಗಳಿಂದ ಕೂಡಿದೆ. ಇದರಲ್ಲಿ ಅರ್ಧಭಾಗ ನೀರಿನಿಂದ ಕೂಡಿದೆ, ನೀರು ಘನದ ರೂಪದಲ್ಲಿರುವುದರಿಂದ ಘನೋದಕವಾಗಿದೆ. ಇದನ್ನು ಸಮುದ್ರ ಅಥವಾ ಗಭೋìದಕ ಎಂತಲೂ ಕರೆಯಬಹುದು. ಇದರಲ್ಲಿ ಅರ್ಧದಷ್ಟು ತಮೋಭಾಗ, ಅದರ ಅರ್ಧದಷ್ಟು ಭೂಮಿಯಿದೆ. ಭೂಭಾಗ, ತಮೋಭಾಗ ಮತ್ತು ಘನೋದಕ ಭಾಗಗಳ ವಿಸ್ತೀರ್ಣ 50 ಕೋಟಿ ಯೋಜನ. ಇದರಲ್ಲಿ ಭೂಮಿಯ ವಿಸ್ತಾರ 7 ಕೋಟಿ ಯೋಜನ. ತಮೋಭಾಗ 14 ಕೋ.ಯೋಜನ. ಘನೋದಕ 28 ಕೋ.ಯೋ., ಉಳಿದ 1 ಕೋ.ಯೋಜನವನ್ನು ಗರಿಷ್ಠದಿಂದ ಅತ್ಯಂತ ಕನಿಷ್ಠ ಮಾಪನದಲ್ಲಿ ಹಂಚಲಾಗಿದ್ದು 50 ಕೋಟಿ ಯೋಜನಗಳನ್ನು ಪೂರ್ಣವಾಗಿ ಹಂಚಲಾಯಿತು. ಇದು ಅಳತೆಗಳ ವೈದಿಕ ಪದ್ಧತಿ. ಶ್ರೀ ವೇದವ್ಯಾಸ ರೂಪಿ ಶ್ರೀ ಹರಿಯು ತಿಳಿಸಿದ ಬ್ರಹ್ಮಾಂಡದ ಅಳತೆ.

Advertisement

ಭೂಭಾಗದ ವಿಸ್ತಾರ‌ವನ್ನು ಯೋಜನ, ಕ್ರೋಶ, ದಂಡ, ಹಸ್ತ, ಅಂಗುಲ, ವ್ರಿàಹಿ ಮತ್ತು ಸರ್ಷಪ ಎಂಬ ಹೆಸರಿನ ಕೋಷ್ಟಕದಿಂದ ಅಳೆಯಲಾಗಿದೆ. ಬ್ರಹ್ಮಾಂಡದ ವಿಂಗಡಣೆಯನ್ನು ಯೋಜನದಿಂದ ಕನಿಷ್ಠ ಕೋಷ್ಟಕ ಸರ್ಷಪದವರೆಗೆ ನಿಖರವಾಗಿ ಲೆಕ್ಕಹಾಕಿದ ಶ್ರೀ ವಾದಿರಾಜರು ವೈದಿಕ ಗಣಿತ ಶಾಸ್ತ್ರಜ್ಞರೇ ಆಗಿರಬೇಕು. ಶ್ರೀ ವಾದಿರಾಜರು ಆಧುನಿಕ ಶಿಕ್ಷಣದಲ್ಲಿನ ಲೆಕ್ಕ ಕಲಿತವರಲ್ಲ! ಭೂಮಂಡಲದ ವ್ಯಾಸ 5 ಕೋಟಿ 7 ಲಕ್ಷ ಯೋಜನಗಳು ಎಂದು ಉಲ್ಲೇಖೀಸುತ್ತಾರೆ.

ಭರತವರ್ಷ!: ಭರತವರ್ಷ ಎಂದರೆ ಹಿಮಾಲಯದಿಂದ ಕನ್ಯಾಕುಮಾರಿ ನಡುವಣ 2,000 ಮೈಲು ವಿಸ್ತಾರವುಳ್ಳ ಪ್ರದೇಶ ಎಂಬುದು ನಮ್ಮ ಸಾಮಾನ್ಯ ತಿಳಿವಳಿಕೆ. ದಕ್ಷಿಣ ಸಮುದ್ರ ಎಂದರೆ ಹಿಂದೂ ಮಹಾಸಾಗರ. ಆದರೆ ಪುರಾಣಗಳಲ್ಲಿ ಭರತವರ್ಷ ಅಂದರೆ ಗಂಗಾ ಉಗಮಸ್ಥಾನದಿಂದ ಕನ್ಯಾಕುಮಾರಿಯವರೆಗೆ, ವಿಸ್ತಾರ 1 ಸಾವಿರ ಯೋಜನ, ಪುನಃ ಅದರ ವಿಸ್ತಾರ 9 ಸಾವಿರ ಯೋಜನ ಎಂದು ಮೂರು ಬಗೆಯಾಗಿ ವರ್ಣಿಸಿದ್ದಾರೆ. 2,000 ಸಾವಿರ ಮೈಲು ದಕ್ಷಿಣೋತ್ತರದ ಅಳತೆಯಿರುವ ಭಾರತ ದೇಶ. ಅಂದರೆ 333 ಯೋಜನ. ಇದು ಭಾರತದ ಪ್ರಮುಖ ಭಾಗ. ಭಗವಂತನು ಏಳು ಅವತಾರಗಳನ್ನೆತ್ತಿದ್ದು ಇಲ್ಲೇ. ಜಂಬೂದ್ವೀಪದ ರಾಜಧಾನಿ ಹಸ್ತಿನಾವತಿ ಇಲ್ಲಿದೆ.(ಈಗಿನ ಹಳೆದಿಲ್ಲಿ) ಕಾಶಿ, ಬದರಿ, ಮಥುರಾ, ದ್ವಾರಕಾ, ವೆಂಕಟಾದ್ರಿ ಕೇದಾರಾದಿ ಪುಣ್ಯಕ್ಷೇತ್ರಗಳಿರುವುದು ಇಲ್ಲಿ. ಮೇಲೆ ತಿಳಿಸಿದ 1 ಸಾವಿರ ಯೋಜನ ಪ್ರದೇಶ ಭರತ ಭೂಮಿಯೇ ಆಗಿದೆ. ಆಫ್ರಿಕಾ, ಅಮೆರಿಕ, ಆಸ್ಟ್ರೇಲಿಯಾ ಎಲ್ಲವೂ ಕರ್ಮಭೂಮಿಯೇ ಎನ್ನುತ್ತಾರೆ.

ಶಾಸ್ತ್ರೋಕ್ತ ಆಚರಣೆಗಳ ಸಂಕಲ್ಪದಲ್ಲಿ ಸಾಮಾನ್ಯ ವಾಗಿ ನಾವು ಭರತವಷೇì, ಭರತಖಂಡೇ, ಜಂಬೂ ದ್ವೀಪೇ ಎಂದು ಹೇಳುತ್ತೇವೆ. ಇದು ತಪ್ಪು. ಜಂಬೂ ದ್ವೀಪೇ, ಭರತವಷೇì, ಭರತಖಂಡೇ, ದಂಡಕಾರಣ್ಯೇ ಎನ್ನುವುದು ಸರಿ ಎಂದು ಶ್ರೀ ವಾದಿರಾಜರು ಹೇಳುತ್ತಾರೆ.

ಕಾಲಚಕ್ರ! ಮಹಾಕಾಲವನ್ನು ಘಳಿಗೆ, ಹಗಲು, ರಾತ್ರಿ, ಪಕ್ಷ, ಮಾಸ, ಋತು, ಆಯನ ಮತ್ತು ವರ್ಷಗಳೆಂದು ಕಾಲವಿಭಾಗ ಮಾಡಲಾಗಿದೆ. ಮನುಷ್ಯನಿಗೆ ಗಣಿಸಲು ಉಪಯೋಗವಾಗುವಂತೆ, ನವಗ್ರಹಗಳು, ರಾಶಿ, ನಕ್ಷತ್ರ, ಸಪ್ತರ್ಷಿಗಳು ಹೀಗೆ ಯೋಜನಗಳನ್ನು ನೀಡಲಾಗಿದ್ದು ವರ್ತುಲ ರೂಪದಲ್ಲಿ ಚಲಿಸುತ್ತವೆ. ಚಲಿಸುವ ಪಥಗಳಲ್ಲಿ, ನವಗ್ರಹಗಳೆಂಬ 9 ಪಥಗಳು, ನಕ್ಷತ್ರಪಥ, ರಾಶಿಗಳ ಪಥ, ಹೀಗೆ ಒಟ್ಟು 12. ಇವುಗ ಳನ್ನೇ ಆಕಾಶಕಾಯಗಳೆಂದು ಕರೆಯುವುದು ವಾಡಿಕೆ. ಆಕಾಶಕಾಯಗಳ ಚಲನೆಯ ಯೋಜನವೇ ಕಾಲಚಕ್ರ. ವಸ್ತು ಎಂದರೆ ಕೇವಲ ಪಂಚೇಂದ್ರಿಯಗಳಿಗೆ ಗೋಚರ ವಾಗುವ ಜಡವಸ್ತುಗಳು ಮಾತ್ರವಲ್ಲ. ಮನಸ್ಸಿನಿಂದ ಗ್ರಹಿಸಿ ಹೆಸರಿಸುವ ಆ ಮನೋಗ್ರಾಹ್ಯ ವಸ್ತುವೂ ವಸ್ತು ಎಂದೇ ಪರಿಗಣಿಸಬಹುದೆಂದು ಶಾಸ್ತ್ರಗಳ ಉಲ್ಲೇಖ. ಕಾಲ ಎಂಬುದು ಮನೋಗ್ರಾಹ್ಯ ವಸ್ತು.

ಬ್ರಹ್ಮಾಂಡವು ನವಾವರಣಗಳಿಂದ ಕೂಡಿದೆ. ಅವೆಂದರೆ ಬ್ರಹ್ಮಾಂಡ ಖರ್ಪರ, ಅದನ್ನು ಸುತ್ತವರಿದು, ಜಲತಣ್ತೀದ ಆವರಣ, ತೇಜಸ್‌ ತಣ್ತೀದಾವರಣ, ವಾಯುತಣ್ತೀದಾವರಣ, ಅಹಂಕಾರತಣ್ತೀದಾವರಣ, ಮಹಾತಣ್ತೀದಾವರಣ, ತಮೋಗುಣಾವರಣ, ಸತ್ವಗುಣಾವರಣ, ಬ್ರಹ್ಮಾಂಡದ ಒಳಗಿನ ವಿಶ್ವದ ವಿಸ್ತಾರ, ಬ್ರಹ್ಮಾಂಡವೆಂಬ ಪೃಥ್ವೀ ಆವರಣ. ಹೀಗೆ ಒಟ್ಟು ದಶಾವರಣಯುಕ್ತ. ಭೂಮಿ ಸೌರವ್ಯೂಹದ ಗ್ರಹವಲ್ಲ, 30 ಕೋಟಿ ಮೈಲಿ ವಿಸ್ತಾರವಾದ ಭೂಮಂಡಲದ ಕೇಂದ್ರ, ಮೇರು ಪರ್ವತ. ಅದನ್ನು ಪ್ರದಕ್ಷಿಣೆಯಾಗಿ ಸುತ್ತುವ ಸೂರ್ಯ ಗ್ರಹರಾಜನೂ, ನಕ್ಷತ್ರಗಳ ಜನಕನೂ ಹೌದು.

– ಜಲಂಚಾರು ರಘುಪತಿ ತಂತ್ರಿ ಉಡುಪಿ
ಕೃಪೆ : ಬಾದರಾಯಣಮೂರ್ತಿ

 

Advertisement

Udayavani is now on Telegram. Click here to join our channel and stay updated with the latest news.

Next