Advertisement

ವಾಡಿ ಗೂಡಿನಲ್ಲಿ ಹಂದಿಗಳೇ ಹೆಚ್ಚು!

12:48 PM Sep 27, 2019 | Naveen |

„ಮಡಿವಾಳಪ್ಪ ಹೇರೂರು
ವಾಡಿ:
ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರತಿಯೊಂದು ಬಡಾವಣೆಯಲ್ಲಿ ನೂರಾರು ಹಂದಿಗಳ ಹಿಂಡು ಪ್ರತ್ಯೇಕವಾಗಿ ಹರಿದಾಡುತ್ತಿದ್ದು, ಸ್ವಚ್ಛ ಭಾರತ ಅಭಿಯಾನ ಯೋಜನೆಗೆ ಇದು ಮಾರಕವಾಗಿದೆ. ರಸ್ತೆಗಳ ಮೇಲೆ ನಿರ್ಭಯವಾಗಿ ಸಂಚರಿಸುವ ಈ ಹಂದಿಗಳ ಸೈನ್ಯ, ಪಾದಚಾರಿಗಳನ್ನು ಕಂಡರೆ ದುರುಗುಟ್ಟುತ್ತವೆ. ಬೆದರಿಸಿ ಓಡಿಸಲು ಪ್ರಯತ್ನಿಸಿದರೆ ಬೆನ್ನಟ್ಟಿ ಬರುತ್ತವೆ!

Advertisement

ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಪುರಸಭೆ ಆಡಳಿತವು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ . ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಮೂಲಕ ಬೀದಿ ಬದಿಯ ಕಸದ ತೊಟ್ಟಿಗಳೇ ಇಲ್ಲದಂತೆ ಕ್ರಮ ಕೈಗೊಂಡಿದೆ.

ಇಂದಿನ ಕಸ ಇಂದೇ ವಿಲೇವಾರಿ ಮಾಡಲು ಪಣತೊಟ್ಟು ಹರಸಾಹಸ ಮಾಡಲಾಗುತ್ತಿದೆ. ಆದರೆ ನಗರದಲ್ಲಿ ಸ್ವಚ್ಛತೆ ಹಾಳುಮಾಡುವ ಜತೆಗೆ 4000ಕ್ಕೂ ಹೆಚ್ಚು ಹಂದಿಗಳು ಸಾರ್ವಜನಿಕರ ನೆಮ್ಮದಿ ಕದಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಡಾವಣೆಗಳ ಸಂದಿಗೊಂದಿಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಹಾಗೂ ವಿವಿಧ ರಸ್ತೆಗಳಲ್ಲಿ ಗುಂಪು-ಗುಂಪಾಗಿ ಕೊಬ್ಬಿದ ಹಂದಿಗಳ ಹಿಂಡು ಸಾರ್ವಜನಿಕ ಬದುಕಿಗೆ ಹಿಂಸೆ ನೀಡುತ್ತಿದೆ. ಕಸದ ತಿಪ್ಪೆಯಲ್ಲಿ
ಮತ್ತು ಚರಂಡಿಗಳ ಗಲೀಜು ನೀರಿನಲ್ಲಿ ಮೈ ತಂಪಾಗಿಸಿಕೊಳ್ಳುವ ಮೂಲಕ ಕೊಳೆಯನ್ನೆಲ್ಲಾ ರಸ್ತೆಗೆ ಹರಡಿ ಆಸ್ವತ್ಛತೆಗೆ ಕಾರಣವಾಗುತ್ತಿವೆ. ಇದರ ಮಧ್ಯೆ ಸತ್ತು ಬೀಳು ಹಂದಿಗಳು ಬೀದಿಪಾಲಾಗಿ ದುರ್ವಾಸನೆ ಹಬ್ಬುತ್ತಿದೆ.

ಪಟ್ಟಣದಲ್ಲಿ ತೆರೆದ ಶೌಚಾಲಯ ಮತ್ತು ಬಯಲು ಶೌಚಾಲಯಕ್ಕೆ ಕಡಿವಾಣ ಬಿದ್ದರೂ ಹಂದಿ ಸಾಕಾಣಿಕೆಗೆ ಮಾತ್ರ ಹೇಳಿ ಮಾಡಿಸಿದ ಜಾಗವಾಗಿದೆ. ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಸ್ಥಳೀಯರು ದೂರು ನೀಡುತ್ತಿದ್ದಂತೆ ಸಾಕಾಣಿಕೆದಾರ
ಮತ್ತಷ್ಟು ಹಂದಿಗಳನ್ನು ತಂದು ನಗರದಲ್ಲಿ ಬಿಡುವ ಮೂಲಕ ಆಡಳಿತಕ್ಕೆ ಸವಾಲು ಹಾಕಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next