ವಡಗೇರಾ: ತಾಲೂಕಿನಲ್ಲಿ ಮಂಗಳವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ವಡಗೇರಾ ವ್ಯಾಪ್ತಿಯ ಗ್ರಾಮಗಳಲ್ಲಿ ಅಂದಾಜು 250 ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆ ನಾಶವಾಗಿದೆ. ವಡಗೇರಾ ವ್ಯಾಪ್ತಿಯಲ್ಲಿ ಗುಡುಗು- ಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದಾಗಿ ಭತ್ತದ ಪೈರು ನೆಲಕಚ್ಚಿದೆ. ಕ್ಯಾತನಾಳ, ಹಂಚಿನಾಳ, ಐಕೂರ, ಅನಕಸೂಗರ, ಕುರಿಯಾಳ, ಕೊಂಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಕಟಾವು ಹಂತದಲ್ಲಿದ್ದ ಬೆಳೆ ಇದೀಗ ಮಳೆಗೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಬೆಳೆ ಕಟಾವಿಗೆ ಬಂದಿದ್ದರೂ ಇಲ್ಲಿಯ ವರೆಗೆ ಮಾರುಕಟ್ಟೆ ದೊರೆಯದೇ ಕಂಗಾಲಾಗಿದ್ದ ರೈತರಿಗೆ ಏಕಾಏಕಿ ಸುರಿದ ಆಲಿಕಲ್ಲು ಮಳೆ ರೈತರನ್ನು ಮತ್ತಷ್ಟು ಸಂದಿಗ್ಧತೆಗೆ ತಳ್ಳಿದೆ.
ಅಧಿಕಾರಿಗಳ ಪರಿಶೀಲನೆ: ಹಾನಿಯಾಗಿರುವ ಜಮೀನುಗಳಿಗೆ ಕಂದಾಯ ಹಾಗೂ ಕೃಷಿ ಇಲಾಖೆ ಅ ಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಐಕೂರ ಗ್ರಾಪಂ ವ್ಯಾಪ್ತಿಯಲ್ಲಿ 38 ಮಿ.ಮೀ. ಮಳೆಬಿದ್ದಿದ್ದು, ಭತ್ತದ ಪೈರಿನ ಬೀಜಗಳು ಉದುರಿವೆ. ಈ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅ ಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕಂದಾಯ ನಿರೀಕ್ಷಕ ಬಸಯ್ಯ ಸ್ವಾಮಿ, ಕೃಷಿ ಇಲಾಖೆ ಅಧಿಕಾರಿ ಅತೀಕ್ ಉಲ್ಲಾ, ಸಹಾಯಕ ಅಧಿಕಾರಿ ಅಮರೇಶ ಸೇರಿದಂತೆ ಸಿಬ್ಬಂದಿಗಳು, ರೈತರು ಇದ್ದರು.
ಮಳೆಯಿಂದ ಅನಕಸೂಗರ ಗ್ರಾಮದಲ್ಲಿ 250 ಎಕರೆ ಬೆಳೆ ಸಂಪೂರ್ಣ ನಾಶವಾಗಿದೆ. ಕಟಾವು ಹಂತಕ್ಕೆ ಬಂದಿದ್ದ ಭತ್ತ ಮಳೆಯಿಂದ ಸಂಪೂರ್ಣ ನೆಲಕಚ್ಚಿದೆ. ಈ
ಬಗ್ಗೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೇನೆ.
ಮಲ್ಲಿಕಾರ್ಜುನ ರಡ್ಡಿ,
ರೈತ, ಅನಕಸೂಗರ