Advertisement

ಪದವಿ ಸೇರಿ 18+ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ : ಡಿಸಿಎಂ

05:12 PM Jun 24, 2021 | Team Udayavani |

ಬೆಂಗಳೂರು: ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಅವರು, ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಕಾಲೇಜು ಆರಂಭಕ್ಕೆ ಮೊದಲೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿರುವ ಅವರು ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇವರೆಲ್ಲರೂ ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡೆಲ್‌ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಲಸಿಕೀಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಇರುತ್ತದೆ. ಅದರಂತೆಯೇ ಲಸಿಕೀಕರಣ ನಡೆಸಲಾಗುವುದು. ಅಲ್ಲದೆ, ನೋಡೆಲ್‌ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಹಾಗೂ ಅದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

Advertisement

ಲಸಿಕೀಕರಣದ ನಂತರ ನೇರ ತರಗತಿ:

ಈ ವಿಭಾಗದ ಎಲ್ಲರಿಗೂ ಮೊದಲ ಡೋಸ್‌ ಲಸಿಕೆ ಹಾಕಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಕಲಾನಿಧಿ-2021 ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು, ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಡಿಜಿಟಲ್‌ ವೇದಿಕೆಯಲ್ಲಿ ಕಲಿಕೆ ಮುಂದುವರಿದಿದೆ. ವ್ಯಾಕ್ಸಿನ್‌ ಪಡೆದ ಮೇಲೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‌ಲೈನ್‌ ಕ್ಲಾಸ್‌ ಹಾಜರಾಗಬಹುದು. ಹಾಜರಾತಿ ಮಾತ್ರ ಕಡ್ಡಾಯ ಎಂದರು.

ಮೊದಲ ಡೋಸ್‌ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಾರಂಭಿಸುತ್ತದೆ. ಒಂದು ವೇಳೆ ನೇರ ತರಗತಿಗೆ ಹಾಜರಾದ ನಂತರವೂ ಸೋಂಕು ಬಂದರೆ ಜೀವಕ್ಕೆ ಹಾನಿ ಆಗುವುದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿ, ಸಿಬ್ಬಂದಿ ಲಸಿಕೆ ಪಡೆಯಬೇಕು ಎಂದು ಅವರು ಕೋರಿದರು.

ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ ಪತ್ತೆಯಾಗಿದ್ದರೂ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಯಾವುದಕ್ಕೂ ಕೊರತೆ ಇಲ್ಲ. ಸದ್ಯಕ್ಕೆ ನಮ್ಮಲ್ಲಿ ಲಭ್ಯ ಇರುವ ಲಸಿಕೆಗಳು ಡೆಲ್ಟಾ ಪ್ಲಸ್‌ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಶಕ್ತಿ ಹೊಂದಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next