ಲಕ್ನೋ(ಉತ್ತರಪ್ರದೇಶ): ಭಾರತೀಯ ವಾಯುಪಡೆಯ(Indian Air Force) ಫೈಟರ್ ಜೆಟ್ ಮಿಗ್(Fighter MiG) 29 ಹಾರಾಟ ನಡೆಸುತ್ತಿರುವಾಗಲೇ ಏಕಾಏಕಿ ಬೆಂಕಿ ಹೊತ್ತಿಕೊಂಡು ಪತನವಾದ ಘಟನೆ ಸೋಮವಾರ (ನ.04) ಆಗ್ರಾದಲ್ಲಿ ನಡೆದಿದ್ದು, ಪೈಲಟ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.
ಮಿಗ್ 29ಗೆ ಬೆಂಕಿ ಹೊತ್ತಿಕೊಂಡು ಪತನವಾಗಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಬೆಂಕಿ ಹೊತ್ತಿಕೊಂಡ ಮಿಗ್ ಸುತ್ತಲೂ ಗ್ರಾಮಸ್ಥರು ನೆರದಿರುವುದು ಸೆರೆಯಾಗಿದೆ.
ವರದಿ ಪ್ರಕಾರ, ಮಿಗ್ 29 ವಿಮಾನ ಸೋಮವಾರ ಪಂಜಾಬ್ ನ ಅದಾಂಪುರ್ ವಾಯು ನೆಲೆಯಿಂದ ಟೇಕ್ ಆಫ್ ಆಗಿತ್ತು. ನಂತರ ಆಗ್ರಾದತ್ತ ತೆರಳುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಬೆಂಕಿಹೊತ್ತುಕೊಂಡು ಸುಟ್ಟುಹೋದ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಮಿಗ್ ಗೆ ಬೆಂಕಿ ಹಿಡಿಯುತ್ತಿದ್ದಂತೆಯೇ ಪೈಲಟ್ ಪ್ಯಾರಚೂಟ್ ಬಳಸಿ ಸುರಕ್ಷಿತವಾಗಿ ಹೊರಜಿಗಿದು ಪ್ರಾಣ ಉಳಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.