Advertisement

Guarantee: ಶಕ್ತಿ ಯೋಜನೆ ಸೇರಿ ಯಾವುದೇ ಗ್ಯಾರಂಟಿಗಳನ್ನೂ ನಿಲ್ಲಿಸಲ್ಲ: ಡಿ.ಕೆ.ಶಿವಕುಮಾರ್‌

08:52 PM Oct 31, 2024 | Team Udayavani |

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯ ತಪ್ಪಾಗಿ ಅರ್ಥೈಸಿ ತಿರುಚಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಸ್ಪಷ್ಟನೆ  ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಶಕ್ತಿ ಯೋಜನೆ ಮರುಶೀಲನೆ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ವಿಚಾರದಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ. ಯೋಜನೆ ನಿಲ್ಲಿಸುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದರು.

ಯೋಜನೆ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ: 
ಆರ್ಥಿಕವಾಗಿ ಸದೃಢವಾಗಿರುವವರು, ಐಟಿ-ಬಿಟಿ ಸಂಸ್ಥೆಯವರು, ಎಂಎನ್ ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಡಿಸಿಎಂ ಶಿವಕುಮಾರ್‌ ತಿಳಿಸಿದರು.

ಸೌಲಭ್ಯ ಬೇಡ ಎನ್ನುವವರಿಗೆ ಬಲವಂತ ಮಾಡಲು ಸಾಧ್ಯವೇ?
ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವೇ? ಅವರ ಸಂಖ್ಯೆ ಶೇ. 7-8 ರಷ್ಟು ಇರಬಹುದು. ಹಿಂದೆ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸ್ವಇಚ್ಛೆಯಿಂದ ಸಬ್ಸಿಡಿ ತ್ಯಜಿಸುವವರಿಗೆ ಅವಕಾಶ ನೀಡಿದರು. ಆ ರೀತಿ ಆಲೋಚನೆ ಮಾಡುವುದಾಗಿ ಹೇಳಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next