ಯಾದಗಿರಿ: ಜಿಲ್ಲೆಯಲ್ಲಿ 15ರಿಂದ 18 ವರ್ಷ ವಯೋಮಾನದ ಪ್ರೌಢಶಾಲೆ ಮತ್ತು ಕಾಲೇಜಿನ 78 ಸಾವಿರ ವಿದ್ಯಾರ್ಥಿಗಳು ಲಸಿಕಾಕರಣಕ್ಕೆ ಅರ್ಹವಿದ್ದು, ಇಂದು 20 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ತಿಳಿಸಿದರು.
ಇಲ್ಲಿನ ಸರಕಾರಿ ಕನ್ಯಾಪ್ರೌಢ ಶಾಲೆ, ಜ್ಯೂನಿಯರ್ ಕಾಲೇಜು ಮೈದಾನದಲ್ಲಿ 15 ವರ್ಷದಿಂದ 18 ವರ್ಷ ವಯೋಮಾನದ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-19 ಲಸಿಕಾಕರಣಕ್ಕೆ ಸತತ ಒಂಭತ್ತು ತಿಂಗಳಿನಿಂದ ಜಿಲ್ಲಾಡಳಿತ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಲಸಿಕೆ ನೀಡುತ್ತಿದೆ. ಮೊದಲನೇ ಮಟ್ಟದಲ್ಲಿ ಫ್ರಂಟ್ ಲೈನ್ ವಾರಿಯರ್ಸ್‌ಗಳಿಗೆ ನಂತರ 18ರಿಂದ 45 ವಯಸ್ಸಿನವರಿಗೆ ಹಾಗೂ 60ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. ಇಂದಿನಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಶೇ. 97ರಷ್ಟು ಮೊದಲನೇ ಡೋಸ್ ಮತ್ತು ಶೇ. 74ರಷ್ಟು ಎರಡನೇ ಡೋಸ್ ಲಸಿಕಾಕರಣದ ಪ್ರಗತಿ ಸಾಧಿಸಿದ್ದು, ಕೋವಿಡ್ ಲಸಿಕಾಕರಣದಿಂದ ಇಲ್ಲಿಯವರೆಗೂ ಅಡ್ಡಪರಿಣಾಮ ಆಗಿರುವ ಪ್ರಕರಣಗಳೇ ಇಲ್ಲ. ಎಲ್ಲರೂ ಮಾಸ್ಕ್ ಧರಿಸಿ ಜಾಗೃತ ವಹಿಸಿ, ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಜಗತ್ತಿನಲ್ಲಿಯೇ ನಂಬರ್ ಒನ್ ಔಷಧಿ ಯಾಗಿದೆ. ಕೊರೊನಾ ರೂಪಾಂತರ ತಳಿ ಒಮೈಕ್ರಾನ್ ವೈರಸ್ ಎಲ್ಲೆಡೆ ಹರಡುತ್ತಿದೆ. ಇದನ್ನು ನಾವು ಎದುರಿಸಬೇಕಾಗಿದೆ. ಜನರು ತಪ್ಪು ಕಲ್ಪನೆಗಳಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕಾಕರಣದಿಂದ ಯಾವುದೇ ತೊಂದರೆಗಳಿಲ್ಲ. ಯಾರು ಹೆದರುವ ಅವಶ್ಯಕತೆಯಿಲ್ಲ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಶಿಲ್ಪಾಶರ್ಮಾ ಮಾತನಾಡಿ, ಶಿಕ್ಷಕರು ಅರ್ಹ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಬೇಕು. ವಿದ್ಯಾರ್ಥಿಗಳು ಲಸಿಕೆ ಪಡೆದು ನಿಮ್ಮ ಗೆಳೆಯ-ಗೆಳತಿಯರಿಗೆ ಲಸಿಕೆ ಹಾಕಿಕೊಳ್ಳಲು ಮನವೊಲಿಸಬೇಕು ಎಂದರು. ಮೂರನೇ ಅಲೆ ತಡೆಯಲು ಲಸಿಕಾಕರಣವೊಂದೇ ಅಸ್ತ್ರವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ನಗರ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಡಿಎಚ್‌ಒ ಡಾ| ಇಂದುಮತಿ ಪಾಟೀಲ್, ಆರ್.ಸಿ.ಎಚ್.ಒ ಲಕ್ಷ್ಮೀಕಾಂತ ಒಂಟಿಪೀರ, ಡಿಡಿಪಿಐ ಶಾಂತಗೌಡ ಪಾಟೀಲ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ವೈದ್ಯಾಧಿಕಾರಿ ಹಣಮಂತರೆಡ್ಡಿ ಇದ್ದರು.