ಹುಬ್ಬಳ್ಳಿ: ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ವಿಚಾರದಲ್ಲಿ ವಾಸ್ತವ ಅರಿಯದೆ ಅನೇಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಕೇಂದ್ರ-ರಾಜ್ಯ ಸರಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ ದೊರೆಯುವುದು ಖಚಿತ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕಿಮ್ಸ್ ಆವರಣದಲ್ಲಿ ವೇದಾಂತ ಕಂಪೆನಿ ನಿರ್ಮಿಸಿರುವ ಕೋವಿಡ್ ನಿರ್ವಹಣೆಯ ಆಸ್ಪತ್ರೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜಕೀಯ ಆರೋಪಗಳಿಗೆ ಕಾಲ ಇದಲ್ಲ. ಸಂಕಷ್ಟ ಸ್ಥಿತಿಯಲ್ಲಿ ಸಹಕಾರ-ಪ್ರೋತ್ಸಾಹ ನೀಡುವ ಬದಲು ಸರಕಾರಗಳು ಏನು ಮಾಡಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ವಾಸ್ತವದ ಸ್ಥಿತಿ ಅರಿತು ಮಾತನಾಡಬೇಕು. ರಚನಾತ್ಮಕ ಸಲಹೆ ನೀಡುವುದು ಸಹ ವಿಪಕ್ಷಗಳ ಗುರುತರ ಜವಾಬ್ದಾರಿಯಾಗಿದೆ ಎಂದರು.
ಕೋವಿಡ್ ಕುರಿತ ಯಾವುದೇ ತಜ್ಞರ ಸಮಿತಿಯೂ ಎರಡನೇ ಅಲೆ ಈ ಪ್ರಮಾಣದಲ್ಲಿ ಬರುತ್ತದೆ, ಇಂತಿಷ್ಟು ಆಕ್ಸಿಜನ್ ಗೆ ಬೇಡಿಕೆ ಬರುತ್ತದೆ ಎಂದು ಹೇಳಿರಲಿಲ್ಲ. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಕೊರೊನಾ ವ್ಯಾಪಿಸಿತು. ಸುಮಾರು 900-1000 ಮೆಟ್ರಿಕ್ ಟನ್ ಬೇಡಿಕೆ ಇದ್ದ ವೈದ್ಯಕೀಯ ಬಳಕೆ ಆಕ್ಸಿಜನ್ ಕೆಲವೇ ದಿನಗಳಲ್ಲಿ 17 ಸಾವಿರ ಮೆಟ್ರಿಕ್ ಟನ್‌ಗೆ ಹೆಚ್ಚಿದಾಗ ಎಲ್ಲಿಂದ ತರುವುದು. ಸಂಕಷ್ಟ ಸ್ಥಿತಿಯಲ್ಲಿಯೇ ಕೇವಲ 10-12 ದಿನಗಳಲ್ಲಿಯೇ ದೇಶದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು 9000-9,500 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಯಿತು. ವಿದೇಶಗಳಿಂದ ವಿಮಾನಗಳಲ್ಲಿ ಆಕ್ಸಿಜನ್ ತರಿಸಲಾಯಿತು ಎಂದು ಹೇಳಿದರು.
ವಿಶೇಷ ರೈಲುಗಳ ಮೂಲಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ 28,470 ಮೆಟ್ರಿಕ್ ಟನ್‌ನಷ್ಟು ಆಕ್ಸಿಜನ್ ಪೂರೈಸಲಾಗಿದೆ. ಆಕ್ಸಿಜನ್ ಉತ್ಪಾದನೆಯಾದರೂ, ಸಾಗಣೆಗೆ ವಾಹನಗಳ ವ್ಯವಸ್ಥೆ ಸಮಸ್ಯೆ ಎದುರಾಗಿತ್ತು ಎಂದರು. ಕೋವಿಡ್ ನಿರ್ವಹಣೆಗೆ ಸಿಎಸ್‌ಆರ್ ನಿಧಿ ಯಲ್ಲಿ ಆಸ್ಪತ್ರೆ ಆರಂಭಿಸುವಂತೆ ತಾವು ಮಾಡಿದ ಮನವಿಗೆ ವೇದಾಂತ ಕಂಪೆನಿ ಚೇರ¾ನ್ ಅನಿಲ್ ಅಗರ್‌ವಾಲ್ ಅವರು ಸ್ಪಂದಿಸಿ ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಆರಂಭಿಸಿದ್ದಾರೆ. ಹುಬ್ಬಳ್ಳಿಯಲ್ಲಿ 100 ಹಾಸಿಗೆ ಆಸ್ಪತ್ರೆಯನ್ನು ಕಂಪೆನಿಯೇ ನಿರ್ವಹಣೆ ಮಾಡಲಿದ್ದು, ರೋಗಿಗಳಿಗೆ ಊಟವನ್ನು ಸಹ ನೀಡಲಿದ್ದಾರೆ. ಕಿಮ್ಸ್‌ನಿಂದ ವೈದ್ಯರು, ಸಿಬ್ಬಂದಿ ನೀಡಿದರೆ ಸಾಕು ಎಂದು ಹೇಳಿದರು. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ ಇನ್ನಿತರರಿದ್ದರು.