ಬೆಂಗಳೂರು: ರಾಜ್ಯ ಅಭಿಯೋಜನ ನಿರ್ದೇಶನಾಲಯ ಹಾಗೂ ಸರ್ಕಾರಿ ಕಾರ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ರಾಜ್ಯ ಅಭಿಯೋಜಕರ ಸಂಘ ಮತ್ತು ಅಭಿಯೋಗ ಮತ್ತು ಸರ್ಕಾರಿ ಕಾರ್ಯಗಳ ಇಲಾಖೆಯಿಂದ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 16ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ 700 ಅಭಿಯೋಜನಾಧಿಕಾರಿಗಳು ಬೇಕಾಗಿದ್ದು, 400 ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಖಾಲಿ ಉಳಿದ ಹುದ್ದೆಗಳನ್ನು ತುಂಬಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಅನೇಕ ಸಾಕ್ಷ್ಯಗಳನ್ನು ನೀಡಿ, ವಿಚಾರಣೆ ನಡೆಸಿ ಶಿಕ್ಷೆ ಕೊಡಿಸುವ ಕೆಲಸ ಅಭಿಯೋಜನ ನಿರ್ದೇಶನಾಲಯ ಮಾಡುತ್ತಿದೆ. ಇಲಾಖೆಯಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಬೇಕಾದ ಅಗತ್ಯವಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಇಳಿಸಲು ಸರ್ಕಾರದ ಪಾತ್ರ ಅತಿ ಅಗತ್ಯವಿದೆ. ಈ ಇಲಾಖೆಯ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಯಾವುದೇ ಪ್ರಕರಣಗಳಿದ್ದರೂ, ಸಂಪೂರ್ಣವಾಗಿ ಅಧ್ಯಯನ ಮಾಡಿ, ಸೂಕ್ತ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಾದ ಮಂಡಿಸಬೇಕು. ವಾದ ಮಂಡಿಸುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜವಾಬ್ದಾರಿ ಹೆಚ್ಚಾದಾಗ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತದೆ ಎಂದರು. ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.