Advertisement

Ayodhya ಕೇಸ್: ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಕಡಲೆಕಾಯಿ ತಿನ್ನುತ್ತಿದ್ರಾ?: ವಿ.ಸುದರ್ಶನ್

12:01 AM Jan 03, 2024 | Team Udayavani |

ಮಂಗಳೂರು: ಅಯೋಧ್ಯೆ ಕೇಸ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ್ನು ಟೀಕಿಸುತ್ತಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಬಿಜೆಪಿ ಸರಕಾರವಿದ್ದಾಗ ಗೃಹಸಚಿವರಾಗಿದ್ದರು. ಆಗ ಅವರು ಕಡಲೆಕಾಯಿ ತಿನ್ನುತ್ತಿದ್ರಾ ? ಅವರು ಯಾಕೆ ಆಗ ಅಯೋಧ್ಯೆಗೆ ಸಂಬಂಧಿಸಿದ ಗಲಭೆಯ ಆರೋಪಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿರಲಿಲ್ಲ? ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಸುದರ್ಶನ್ ಪ್ರಶ್ನಿಸಿದ್ದಾರೆ.

Advertisement

ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಗಲಭೆಗೆ ಸಂಬಂಧಿಸಿದ 31 ವರ್ಷಗಳ ಹಿಂದಿನ ಪ್ರಕರಣಗಳ ಇತ್ಯರ್ಥಕ್ಕಾಗಿ ಸಾಮಾನ್ಯವಾದ ಸುತ್ತೋಲೆ ಕಳುಹಿಸಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಪ್ರಕರಣಗಳ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ. ಇದರಲ್ಲಿ ಕಾಂಗ್ರೆಸ್‌ನ ರಾಜಕೀಯ ಉದ್ದೇಶವಿಲ್ಲ. ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕಿಸಿದರು.

ಆಂಜನೇಯ ಹೇಳಿಕೆ ವೈಯಕ್ತಿಕ
‘ಆಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ಧರಾಮಯ್ಯ’ ಎಂದು ಮಾಜಿ ಸಚಿವ ಎಚ್.ಆಂಜನೇಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುದರ್ಶನ್ ಅವರು, ‘ಆಂಜನೇಯ ಅವರು ನೀಡಿರುವ ಹೇಳಿಕೆ ಅವರದ್ದು ವೈಯಕ್ತಿಕ. ಆದರೆ ಸಿದ್ದರಾಮಯ್ಯ ಜನ ಸಮೂಹದ ನಾಯಕ ಎಂಬುದು ನಿಜ’ ಎಂದರು.

ಬದುಕಿನ ಪ್ರಶ್ನೆಗಳೂ ಇವೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಸುದರ್ಶನ್ ಅವರು, ನಾವು ಧಾರ್ಮಿಕ ವಿಚಾರಗಳನ್ನು ಗೌರವಿಸುತ್ತೇವೆ. ಯಾವುದೇ ಅವಹೇಳನ, ಅಗೌರವ ಮಾಡುವುದು ನಮ್ಮ ಧೋರಣೆಯಲ್ಲ. ಆದರೆ ದೇಶದಲ್ಲಿ ಅದೊಂದೇ ವಿಚಾರ ಇರುವುದಲ್ಲ. ಜನರ ಬದುಕಿನ ಪ್ರಶ್ನೆಗಳು ಕೂಡ ಇವೆ. ಕೇಂದ್ರ ಸರಕಾರ ಅಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ದೇಶದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Education: ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು; ಕಡ್ಡಾಯ ಶಿಕ್ಷಣ ಮಾಯ..

Advertisement

ಗ್ಯಾರಂಟಿಯಿಂದ ಬದುಕಿಗೆ ಅನುಕೂಲ
ಬಿಜೆಪಿ ಸರಕಾರ ಆಡಳಿತದಿಂದ ರಾಜ್ಯದ ಆರ್ಥಿಕ ದುಸ್ಥಿತಿ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅದನ್ನು ಸುಸ್ಥಿತಿಗೆ ತಂದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ಕೂಡ ನಡೆಯುತ್ತಿವೆ. ಬರಗಾಲದ ಸಂಕಷ್ಟದಲ್ಲಿ ಗ್ಯಾರಂಟಿಗಳು ಜನರ ಬದುಕಿಗೆ ಅನುಕೂಲವಾಗಿದೆ. ಗ್ಯಾರಂಟಿ ಫ‌ಲಾನುಭವಿಗಳ ಸಿಎಂ ಅವರು ಜಿಲ್ಲಾ ಸಮಾವೇಶ, ಸಂವಾದ ನಡೆಸಿ ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮತ್ತಷ್ಟು ಸದೃಢಗೊಳಿಸಬೇಕಾಗಿದೆ ಎಂದು ಸುದರ್ಶನ್‌ ಹೇಳಿದರು.

ಪ್ರಭಾಕರ ಭಟ್‌ ವಿರುದ್ಧ
ಕಾನೂನಿನಂತೆ ಕ್ರಮ
ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ಬಂಧಿಸದಿರುವ ಕುರಿತು ಪ್ರಶ್ನಿಸಿದಾಗ, ಕಾನೂನಿನಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಭಟ್‌ ವಿರುದ್ಧ ಈಗಾಗಲೇ ಎಫ್ಐಆರ್‌ ದಾಖಲಿಸಲಾಗಿದೆ. ಕಾಂಗ್ರೆಸ್‌ ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ ಎಂದು ಸುದರ್ಶನ್‌ ಹೇಳಿದರು.

ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಹಿಂದುಳಿದ ವರ್ಗಗಳ ವಿಭಾಗದ ವಿಶ್ವಾಸ್‌ ದಾಸ್‌, ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್‌ ಡಿ’ಸೋಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶುಭೋದಯ ಆಳ್ವ, ನೀರಜ್‌ ಪಾಲ್‌, ವಿಕಾಸ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next