ಪ್ರಪಂಚ ಸಾವಿರಾರು ಅದ್ಭುತ ಸೃಷ್ಟಿಗಳ ಬೀಡು. ಪ್ರತೀ ಸೃಷ್ಟಿಗೂ ಅದರದ್ದೆ ಆದ ಕಾರಣ, ಕರ್ತವ್ಯವಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ಸೃಷ್ಟಿ ಗಳನ್ನು ನೋಡಿ, ಆಲಿಸಿ, ಆಘ್ರಾ ಣಿಸಿ, ಸ್ಪರ್ಶಿಸಿ, ಸವಿದು ಅನುಭವಿಸ ಲೆಂದೇ ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮ ಎಂಬ ಪಂಚೇಂದ್ರಿಯ ಗಳು ಹುಟ್ಟಿ ಕೊಂಡಿವೆ. ಮಾನವನು ಸೇರಿ ಅನೇಕ ಜೀವಿಗಳ ದೇಹಗಳಲ್ಲಿ ಪಂಚೇಂದ್ರಿಯಗಳು ಪ್ರಮುಖ ಸ್ಥಾನವನ್ನು ಪಡೆದಿವೆ. ಅವುಗಳಲ್ಲಿಯೂ ಅತೀ ಸೂಕ್ಷ¾, ಸುಂದರ, ಅದ್ಭುತವಾದ ರಚನೆ ಕಣ್ಣು.
ಭಾವನಾರೂಪಿಯಾದ ಮನುಷ್ಯನಿಗೆ ಕಣ್ಣು ಕೇವಲ ಸೃಷ್ಟಿಯನ್ನು ನೋಡಿ ಆನಂದಿಸಲು ಇರುವ ಅಂಗವಲ್ಲ. ಭಾವನೆಗಳನ್ನು ವಿನಿಮಯ ಮಾಡಲು ಇರುವ ಅಪೂರ್ವ ಮಾಧ್ಯಮ. ಈ ಸೃಷ್ಟಿಯ ಸೌಂದರ್ಯವನ್ನು ನೋಡಿ ಅನುಭವಿಸಿದಾಗ ಆಗುವ ಸಂತೋಷ ಆ ಕ್ಷಣವೇ ಪ್ರತಿಬಿಂಬಿಸುವುದು ಕಣ್ಣುಗಳಲ್ಲಿ. ಹಾಗೆ ಮನಸ್ಸಿಗೆ ಬೇಸರವಾದಾಗಲು ಮೊದಲು ವ್ಯಕ್ತವಾಗುವುದು ಕಣ್ಣುಗಳಲ್ಲಿಯೇ. ನಮ್ಮ ಭಾವನೆಯನ್ನು ಮಾತಿನ ಮೂಲಕವೇ ಇನ್ನೊಬ್ಬರಿಗೆ ಹೇಳಬೇಕೆಂದಿಲ್ಲ. ಬದಲಾಗಿ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಕಂಡರೂ ಸಾಕು, ಎಲ್ಲವೂ ಅರ್ಥವಾಗಿ ಬಿಡುತ್ತದೆ. .
ನಮ್ಮ ಅಸ್ತಿತ್ವವು ಕೂಡ ಪ್ರತಿಬಿಂಬಿಸುವುದು ಕಣ್ಣಿನಲ್ಲಡಗಿದ ದೃಷ್ಟಿಯ ಮೂಲಕವೇ. ಉದಾಹರಣೆಗೆ, ತರಗತಿಯಲ್ಲಿ ಒಬ್ಬ ಶಿಕ್ಷಕನು ನಿಮ್ಮನ್ನು ನೋಡಿ ಪಾಠ ಮಾಡುತ್ತಿರುವಾಗ ಸುತ್ತಲೂ ನಿಶಬ್ಧ ಆವರಿಸಿರುತ್ತದೆ. ಅದೇ ಶಿಕ್ಷಕನು ಕರಿಹಲಗೆಯತ್ತ ತಿರುಗಿದೊಡನೆ ಪಿಸುಮಾತುಗಳು ಹೊರಡುತ್ತವೆ ಅಲ್ಲವೇ?
ಅದೇ ರೀತಿ, ಒಂದು ಜನಸಂದಣಿ ಜಾಗದಲ್ಲಿ ನೀವು ನಿಮ್ಮ ಪಾಡಿಗೆ ಕುಳಿತು ಕೆಲಸ ಮಾಡುತ್ತಿರುತ್ತೀರಿ. ಅದೇ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ನಿಮ್ಮನ್ನೇ ನೋಡುತ್ತಿರುವುದು ಗಮನಕ್ಕೆ ಬಂದಾಗ ನೀವು ನಿಮ್ಮ ನಡೆ, ನಿಮ್ಮ ಕೆಲಸದಲ್ಲಿ ಮತ್ತಷ್ಟು ಲಕ್ಷÂರಾಗಿಬಿಡುತ್ತೀರಿ. ಇದುವೇ ಒಬ್ಬ ವ್ಯಕ್ತಿಯ ದೃಷ್ಟಿಯು ಇನ್ನೊಬ್ಬರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಉದಾಹರಣೆಯಾಗಿದೆ.
ದಿನನಿತ್ಯ ನೀವು ಅದೆಷ್ಟು ಜನರನ್ನು ಭೇಟಿಯಾಗುತ್ತೀರಿ, ಅವರೊಂದಿಗೆ ಮಾತುಕತೆ ನಡೆಸುತ್ತೀರಿ. ಈ ಸಂದರ್ಭದಲ್ಲಿ ನೀವು ಮೊದಲು ಮುಂದಿರುವ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಆಧ್ಯತೆಯನ್ನು ನೀಡಿ. ಈ ನಡೆಯು ನೀವು ನಿಮ್ಮ ಮುಂದಿರುವ ವ್ಯಕ್ತಿಗೆ ನೀಡುವ ಗೌರವದ ಸಂಕೇತವಾಗಿದೆ. ಮಾತ್ರವಲ್ಲದೆ ನಿಮ್ಮ ಮಾತಿನ ಮೇಲೆ ನಿಮಗೆ ಇರುವ ವಿಶ್ವಾಸವನ್ನು ಕಣ್ಣಿನ ಮೂಲಕ ವ್ಯಕ್ತಪಡಿಸುವ ವಿಧಾನವೂ ಆಗಿದೆ. ಈ ನಡೆಯಿಂದ ಆ ವ್ಯಕ್ತಿಯು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ಗಮನಹರಿಸಿ ಕೇಳಿಸಿಕೊಳ್ಳುತ್ತಾನೆ ಹಾಗೂ ನಿಮ್ಮ ಮೇಲೆ ವಿಶ್ವಾಸವನ್ನು ಬೆಳೆಸುತ್ತಾನೆ.
ಒಂದು ನೋಟಕ್ಕೆ ಕಂತೆ ನೋಟಿಗಿರುವ ಶಕ್ತಿಯನ್ನು ಕುಗ್ಗಿಸುವ ಸಾಮರ್ಥ್ಯವಿದೆ, ಒಂದು ನೋಟಕ್ಕೆ ಸಾವಿನ ಮನೆ ಸೇರುವ ಜೀವವನ್ನು ಮತ್ತೆ ಬದುಕಿಸಬಲ್ಲ ಸಾಮರ್ಥ್ಯವಿದೆ, ಒಂದು ನೋಟಕ್ಕೆ ಮನಸ್ಸನ್ನು ವೈಫಲ್ಯದ ಕೋಪದಿಂದ ಯಶಸ್ಸಿನ ಹಾದಿಗೆ ತರುವ ಸಾಮರ್ಥ್ಯವಿದೆ, ಒಂದು ನೋಟಕ್ಕೆ ಬೆಟ್ಟದಷ್ಟು ಮಮತೆ, ಪ್ರೀತಿ, ಕಾಳಜಿಯನ್ನು ತೋರಿಸುವ ಸಾಮರ್ಥ್ಯವಿದೆ.
ಅದೇ ಒಂದು ನೋಟಕ್ಕೆ ಎದುರಾಳಿಯನ್ನು ತಲೆ ಕೂದಲಿನಿಂದ ಹಿಡಿದು ಕಾಲ ಕಿರುಬೆರಳ ತುದಿಯವರೆಗೂ ನಡುಗಿಸಬಲ್ಲ ಸಾಮರ್ಥ್ಯವು ಇದೆ. ಅದೇ ನೋಟದ ದೃಷ್ಟಿಕೋನವನ್ನು ಬದಲಿಸುವ ಸಾಮರ್ಥ್ಯ ಮನುಷ್ಯನ ಮನಸ್ಸಿಗೆ ಇದೆ. ಹೀಗಾಗಿ ಮನಸ್ಸಿನ ಭಾವನೆಯನ್ನು ದೃಷ್ಟಿ ನಿಯಂತ್ರಿಸಿದರೆ, ದೃಷ್ಟಿಯನ್ನು ಮನಸ್ಸು ನಿಯಂತ್ರಿಸುತ್ತದೆ. ಎಲ್ಲಿ ದೃಷ್ಟಿಯು ಭಾವನೆಗಳಿಗೆ ಸೋತು ಬೀರು ಬಿಟ್ಟಿವೆಯೋ ಅಲ್ಲಿ ನಮ್ಮ ಅಸ್ತಿತ್ವ ಇದ್ದೇ ಇರುತ್ತದೆ.
–
ಮಧುರ ಕಾಂಚೋಡು
ಜೆಎಸ್‌ಎಸ್ ವಿವಿ, ಮೈಸೂರು