ಕೆಲವು ಕ್ಷೇತ್ರಗಳು ಹೊರಗಿನಿಂದ ನೋಡಲು ಶ್ರೀಮಂತ, ಸುಂದರ, ಕಲ್ಪನೆಗೂ ಮೀರಿದ ಕೌತುಕತೆಯನ್ನು ಕಟ್ಟಿಕೊಡುತ್ತವೆ. ಆದರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾದೆ ಮಾತಿನಂತೆ ದೂರದಿಂದ ಮಾತ್ರ ನೋಡಲು ಸುಂದರವಾಗಿ ಕಾಣುತ್ತದೆ, ಆದರೆ ಅದರ ಹತ್ತಿರ ಹೋದಾಗ ಬೆಟ್ಟದಲ್ಲಿರುವ ಮುಳ್ಳು, ಭಯಾನಕ ಕಣಿವೆ, ವಿಷಜಂತು ಪ್ರಾಣಿ ಪಕ್ಷಿಗಳು ಕಾಣಸಿಗುತ್ತದೆ. ಈ ಗಾದೆ ಮಾತಿಗೆ ಉತ್ತಮ ಉದಾಹರಣೆ ಎಂದರೆ ವಿಮಾನಯಾನ ಕ್ಷೇತ್ರ ಎಂದೇ ಹೇಳಬಹುದು.
ಪ್ರಸುತ್ತ ವಿಮಾನಯಾನ ಕ್ಷೇತ್ರ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುತ್ತಿದ್ದು, ದೇಶದ ಆದಾಯದಲ್ಲಿ ತನ್ನದೇ ಅದ ಕೊಡುಗೆಯನ್ನು ನೀಡುತ್ತಿದೆ. ಕೆಲವು ವಿಮಾನಯಾನ ಸಂಸ್ಥೆಗಳು ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು, ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ. ಇತ್ತೀಚೆಗೆ ತೆರೆಕಂಡ ಹಿಂದಿ ಚಲನಚಿತ್ರ “ಕ್ರಿವೂ’ ವಿಮಾನಯಾನ ಸಂಸ್ಥೆಗಳ ಸಮಸ್ಯೆಗಳ ಸುತ್ತ ಹಣೆದ ಕಥಾಹಂದರವಾಗಿದೆ. ರಾಜೇಶ್ ಎ. ಕೃಷ್ಣನ್ ನಿರ್ದೇಶನದ ಈ ಸಿನೆಮಾ ವಿಮಾನ ಸಂಸ್ಥೆಯ ಸಿಬಂದಿಯ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.
ಕ್ರಿವೂ ಚಿತ್ರ ಹೀರೊಯಿನ್ಸ್ ಪ್ರಾಧಾನ್ಯತೆಯ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಹಿರಿಯ ನಟಿಯಾರದ ಟಬು, ಕರೀನಾ ಕಪೂರ್ ಮತ್ತು ಕೃತಿ ಸನಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹಿನೂರ್ ಎಂಬ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖೀಯರಾಗಿ ಅಭಿನಯಿಸಿರುವ ಮೂವರು ನಾಯಕಿಯರು ಅದ್ಬುತವಾಗಿ ಅಭಿನಯಿಸಿದ್ದಾರೆ.
ಕ್ರಿವೂ ಚಿತ್ರದಲ್ಲಿ ಕೊಹಿನೂರ್ ವಿಮಾನ ಸಂಸ್ಥೆ ತನ್ನ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತಾ, ತನ್ನ ಸಿಬಂದಿಗೆ ಸರಿಯಾಗಿ ವೇತನ ನೀಡದೆ ವಂಚಿಸುವ ಸಂಸ್ಥೆಯಾಗಿರುತ್ತದೆ.
ಮಧ್ಯಮ ವರ್ಗಕ್ಕೆ ಸೇರಿದ ಚಿತ್ರದ ನಾಯಕಿಯರು ಉತ್ತಮ ಜೀವನವನ್ನು ನಡೆಸಲು ಕೊಹಿನೂರ್ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ನಡೆಸುತ್ತಿದ್ದ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಸೇರಿಕೊಳ್ಳುವುದು. ಅನಂತರ ತಮ್ಮ ತಪ್ಪಿನ ಅರಿವಾಗುವುದು. ಚಿನ್ನದ ಜತೆಗೆ ದೇಶದಿಂದ ಪರಾರಿಯಾಗಿದ್ದ ಕೊಹಿನೂರ್ ವಿಮಾನ ಸಂಸ್ಥೆಯ ಮುಖ್ಯಸ್ಥನನ್ನು ಹಿಡಿದುಕೊಂಡು ದೇಶಕ್ಕೆ ಕರೆತಂದು ಶಿಕ್ಷೆ ವಿಧಿಸುವುದೇ ಚಿತ್ರದ ಮುಖ್ಯ ಕಥೆಯಾಗಿದೆ.
ಚಿತ್ರದಲ್ಲಿ ಟಬು, ಕರೀನಾ ಕಪೂರ್‌ಗೆ ವಯಸ್ಸಾದರೂ ಅವರ ನಟನಾ ಕೌಶಲ ಕಡಿಮೆಯಾಗಿಲ್ಲ, ಕೃತಿ ಸನಾನ್ ತಮ್ಮ ಸೌಂದರ್ಯ, ನಟನಾ ಕೌಶಲ, ಸಂದರ್ಭಕ್ಕೆ ತಕ್ಕಂತೆ ಮುಖದ ಹಾವಬಾವವನ್ನು ವ್ಯಕ್ತಪಡಿಸುವ ಅವರ ನಟನೆಗೆ ಅವರೇ ಸಾಟಿ.
ಕ್ರಿವ್ಯೂ ಚಿತ್ರ ಕುಟುಂಬದ ಎಲ್ಲ ಸದಸ್ಯರು ಜತೆಯಾಗಿ ಕುಳಿತು ನೋಡುವ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡುವುದಂತೂ ಖಂಡಿತ.
–
ರಾಸುಮ ಭಟ್
ಕುವೆಂಪು ವಿವಿ, ಚಿಕ್ಕಮಗಳೂರು