ಪ್ರತಿ ವರ್ಷ ಪಿಯುಸಿ ಮಕ್ಕಳಿಗೆ ಕಾಲೇಜಿನಿಂದ ಟ್ರಿಪ್ ನಡೆಸಲಾಗುತ್ತಿತ್ತು. ಒಂದು ವರ್ಷ ನಮ್ಮ ಸರದಿಯೂ ಬಂತು. ನನ್ನ ಸಹಪಾಠಿಗಳೆಲ್ಲರೂ ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ದೂರದೂರುಗಳಿಗೆ ಹೋಗುವ ಪ್ಲಾನ್ ಮಾಡಿದ್ದೆ ಮಾಡಿದ್ದು.
ಆದರೆ ಅದಕ್ಕೆ ತಣ್ಣೀರು ಎರಚುವಂತೆ ನಮ್ಮ ಸರ್ ಬಂದು – ನಮ್ಮ ಊರಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ನಮ್ಮ ಊರಿನಲ್ಲಿ ನಮಗೆ ಗೊತ್ತಿರದ ಅನೇಕ ಸ್ಥಳಗಳು ಇರುತ್ತವೆ, ಅಲ್ಲಿಗೆ ಹೋಗೋಣ ಎಂದು ಹೇಳಿದರು.
ಬೇಸರವಾದರೂ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಆ ಮೇಲೆ ಫ್ರೆಂಡ್ಸ್ ಎಲ್ಲ ಕುಳಿತು ಚರ್ಚಿಸಿ ಕೊನೆಗೂ ಒಂದು ಸ್ಥಳ ಹುಡುಕಿದ್ದೆವು. ಅದುವೇ ನಮ್ಮ ದಿಡುಪೆಯ ಕಡಮ ಗುಂಡಿ ಫಾಲ್ಸ್! ಕೆಲವರಿಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲ.
ಕಾಲೇಜಿನ ಬಸ್ಸಿನಲ್ಲಿ ಫಾಲ್ಸ್ ಗೆ ಹೊರಟೆವು. ಆದರೆ ಫಾಲ್ಸ್ ತನಕ ಬಸ್ಸು ಹೋಗುವುದಿಲ್ಲ. ದಾರಿಹೋಕರಲ್ಲಿ ದಾರಿ ಕೇಳಿಕೊಂಡು ಕಾಲ್ನಡಿಗೆಯಲ್ಲಿ 2 ಕಿ.ಮೀ. ನಡೆದುಕೊಂಡು ಹೋದೆವು. ಅದು ಕೂಡ ಮಳೆಗಾಲದ ಸಮಯದಲ್ಲಿ. ಬಂಡೆಗಳೆಲ್ಲ ಪಾಚಿ ಕಟ್ಟಿದ್ದವು. ರಕ್ತ ಹೀರುವ ತಿಗಣೆ ಕಾಟ ಬೇರೆ. ಜತೆಗೆ ಸಣ್ಣಪುಟ್ಟ ತೊರೆಗಳನ್ನು ದಾಟಿ ಫಾಲ್ಸ್ ನ ಹತ್ತಿರ ಬಂದೆವು. ಆದರೆ ಅಲ್ಲಿಗೆ ಬಂದ ಮೇಲೆ ಅತ್ಯಂತ ಖುಷಿಯಾಯಿತು. ನಾವೆಲ್ಲರೂ ಮಂತ್ರಮುಗ್ಧರಾದೆವು. ಅಂಥ ನಿಸರ್ಗ ಸೌಂದರ್ಯ ಅಲ್ಲಿ ರಾಶಿಬಿದ್ದಿತ್ತು.
ಜೀವ ಸಂಕುಲವನ್ನು ತನ್ನ ಮಡಿಲಲ್ಲಿ ಮಲಗಿಸಿ ಜೋಗುಳವಾಡುತ್ತಿರುವ ಆ ಭೂತಾಯಿಯ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಆ ಸೊಬಗನ್ನು ಅನುಭವಿಸಿಯೇ ತಿಳಿಯಬೇಕಷ್ಟೆ.
ದಿಡುಪೆಯ ಕಡಮಗುಂಡಿಯಲ್ಲಿರುವ ಈ ಜಲಪಾತ ತಂಪಾದ ವಾತಾವರಣ, ಹಚ್ಚಹಸಿರಿನಿಂದ ಕಂಗೊಳಿಸುವ ವನಸಿರಿ, ವಿವಿಧ ಹಕ್ಕಿಗಳ ಚಿಲಿಪಿಲಿಗಳ ನಡುವೆ ಕಲ್ಲು ಬಂಡೆ ಹಾಗೂ ದಟ್ಟ ಕಾಡಿನಿಂದ ಸುತ್ತುವರಿಯಲ್ಪಟ್ಟಿದೆ.
ಈ ಜಲಪಾತವು ಸರಿ ಸುಮಾರು ಉಜಿರೆಯಿಂದ 30 ಕಿ.ಮೀ. ದೂರದಲ್ಲಿದ್ದು, ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಒಂದು ವೇಳೆ ಬೇರೆ ಕಡೆ ಹೋಗಿದ್ದರೆ ಇಲ್ಲಿ ಸಿಕ್ಕಿದಂಥ ಸಂತೋಷ ಸಿಗುತ್ತಿತ್ತೋ ಗೊತ್ತಿಲ್ಲ. ಆದರೆ ನಾವು ಈ ಫಾಲ್ಸ್ ನಲ್ಲಿ ತುಂಬಾ ಎಂಜಾಯ್ ಮಾಡಿದ್ದೆವು.
-ನೀಕ್ಷಿತಾ
ಎಸ್.ಡಿ.ಎಂ., ಉಜಿರೆ