ವಿದ್ಯಾರ್ಥಿ ಜೀವನದವರೆಗೂ ಕಲಿಕೆಗೆ ಸಂಬಂಧಿಸಿದ ಪರೀಕ್ಷೆ ಇದ್ದರೆ, ಈ ವಿದ್ಯಾರ್ಥಿ ಜೀವನ ಒಮ್ಮೆ ಮುಗಿದ ಮೇಲೆ ನೋಡಿ ನಿಜವಾದ ಪರೀಕ್ಷೆ ನಿರೀಕ್ಷೆಗೂ ಮೀರಿ ಬರುವ ಸಮಯ. ಕಳೆದದ್ದು ಪೆನ್- ಪೇಪರ್‌ನ ಪರೀಕ್ಷೆ, ಆದರೆ ಮುಂದೆ ಬರುವುದು ಬದುಕನ್ನು ಕಟ್ಟಲು ಹೊರಟಿರುವ ನಾವುಗಳಿಗೆ ಎದುರಾಗುವ ನಾನಾ ಸವಾಲುಗಳ ಪರೀಕ್ಷೆ.
ಈ ಬಾಳಲ್ಲಿ ಸಾಗರದ ಅಲೆಗಳಂತೆ ನಿರಂತರವಾಗಿ ಸವಾಲುಗಳು ಬದುಕಿನಲ್ಲಿ ಬಡಿಯಲಾರಂಭಿಸುತ್ತದೆ. ಅದು ಬಾಳೆನ್ನುವ ನೌಕೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸೇರಿಸುವ ಸಾಧಾರಣ ಅಲೆಯಾಗಿರಬಹುದು, ಇಲ್ಲವೇ ಜೀವನ ಎನ್ನುವ ನೌಕೆಯನ್ನೇ ಗಡಗಡನೆ ನಡುಗಿಸುವ ಅಲೆಯಾಗಿರಬಹುದು! ಅವರ ಅವರ ಜೀವನವು ನೌಕೆಯಂತಿರುವಾಗ ಸ್ವತಃ ಅವರೇ ನಾವಿಕನಾಗಿರುತ್ತಾರೆ.
ಎದುರಾಗುವ ನಾನಾ ಸವಾಲುಗಳನ್ನು ಎದುರಿಸಿ, ನೌಕೆಯನ್ನು ತಾನು ಅಂದುಕೊಂಡ ಗುರಿಯತ್ತ ಮುಟ್ಟಿಸುವ ಸಾಮರ್ಥ್ಯ ಅವನಿಗಿರಬೇಕು. ಇಲ್ಲದಿದ್ದರೆ ಅದನ್ನು ಬೆಳೆಸಿಕೊಳ್ಳಬೇಕು. ಎದುರಾದ ಸಮಸ್ಯೆಗಳಿಗೆ ಹೆದರದೆ ಮುನ್ನುಗ್ಗುವವನು ಸಾಹಸಿ. ಹೆದರಿ ಓಡಿ ಹೋದ ಹೇಡಿಯು ಸಾಧನೆಗೆ ಅನರ್ಹನಾಗುತ್ತಾನೆ. ಆತ ಹೆದರಿಕೆಯಿಂದಲೇ, ಜೀವನ ಎನ್ನುವ ಪರೀಕ್ಷೆಯಲ್ಲಿ ಉತ್ತೀರ್ಣನಾಗದೆ ಸೋಲುತ್ತಾನೆ.
ಈ ವಿದ್ಯಾರ್ಥಿ ಜೀವನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು, ಈ ಜೀವನವೆಂಬ ಪರೀಕ್ಷೆಯಲ್ಲಿ ವಿಫಲ ಹೊಂದಿದ ಉದಾಹರಣೆಗಳಿವೆ. ಅಂತೆಯೇ ವಿದ್ಯಾರ್ಥಿ ಜೀವನದ ಪರೀಕ್ಷೆಯಲ್ಲಿ ವಿಫಲವಾಗಿ ಜೀವನ ಎನ್ನುವ ಪರೀಕ್ಷೆಯಲ್ಲಿ ಸಫಲವಾದ ಉದಾಹರಣೆ ಕೂಡ ಇದೆ. ಆದರೆ ಎರಡೂ ಪರೀಕ್ಷೆಯಲ್ಲಿ ಗೆಲ್ಲಬೇಕೆನ್ನುವ ಆಸೆ ಪ್ರತಿಯೊಬ್ಬರದ್ದು.
ಪರೀಕ್ಷೆ ಎನ್ನುವುದು ಅದೃಷ್ಟ, ಪರಿಶ್ರಮದ ಮೇಲೆ ನಿಂತಿರುತ್ತದೆ. ಪರಿಶ್ರಮ ಈ ನಿಟ್ಟಿನಲ್ಲಿ ವಿಶೇಷ ಎಂದೆನಿಸುತ್ತದೆ. ಕಷ್ಟ ಪಟ್ಟು ದುಡಿದು ಇಷ್ಟವನ್ನು ಸಾಧಿಸು. ಸಾಧಿಸಿದವನಿಗೆ ಸಬಲವನ್ನೇ ನುಂಗಬಹುದು. ಸಾಧನೆಗೆ ಇಳಿದವನಿಗೆ ಹಾದಿ ಸುಗಮವಲ್ಲ, ಸುಗಮ ಹಾದಿಯಲ್ಲಿ ನಡೆದವ ಎಂದೂ ಸಾಧಕನಾಗಲಾರ.
-ಗಿರೀಶ್ ಪಿ.ಎ.
ವಿ. ವಿ. ಮಂಗಳೂರು