ದೇವಸ್ಥಾನಕ್ಕೆ ಹೋಗುವ ಮೂಲ ಉದ್ದೇಶ ಏನೆಂದು ಕೇಳಿದಾಗ ಕೆಲವರು ಕೊಡುವ ಉತ್ತರ, ನನ್ನ ಎಲ್ಲ ಸಂಕಷ್ಟಗಳನ್ನು ಬಗೆಹರಿಸಿ, ನನಗೆ ಯಾವುದೇ ರೀತಿಯ ತೊಂದರೆ ಕೊಡಬೇಡ, ನನಗೆ-ನನ್ನ ಕುಟುಂಬದವರಿಗೆ ಸುಖ ಶಾಂತಿ ಕರುಣಿಸಿ ಕಾಪಾಡೆಂದು ಬೇಡುವುದಕ್ಕಾಗಿ ಎಂದು. ಇನ್ನೂ ಕೆಲವರ ಉತ್ತರ ಇದೆಂಥ ಪ್ರಶ್ನೆ ರೀ… ಎಂದಾದರೆ, ಉಳಿದವರ ಉತ್ತರ, ದೇವಸ್ಥಾನದಲ್ಲಿರುವ ವಿಗ್ರಹವನ್ನು ಕಂಡಾಗ ನನ್ನ ಮೈ ರೋಮಾಂಚನವಾಗುತ್ತದೆ. ದೇವರ ಸನ್ನಿಧಿಯಲ್ಲಿ ನಿಂತು ಗರ್ಭಗುಡಿಯ ವಿಗ್ರಹವನ್ನು ನೋಡಿ ಕಣ್ತುಂಬಿಕೊಂಡು ಒಂದೆರಡು ನಿಮಿಷ ನನ್ನನ್ನು ನಾನೇ ಮರೆಯುತ್ತೇನೆ. ಅಂತಹ ಶಕ್ತಿ ಆ ವಿಗ್ರಹಕ್ಕೆ ಇದೆ ಎಂದು.
ಸರಿ, ಎರಡು ಉತ್ತರಗಳಲ್ಲಿಯೂ ಒಂದು ಸಕರಾತ್ಮಕ ಆಲೋಚನೆಯಿದೆ. ಎರಡು ಗುಂಪುಗಳಲ್ಲಿಯೂ ದೇವರ ಮೇಲೆ ಹಲವಾರು ನಂಬಿಕೆಗಳಿವೆ. ಆದರೆ ಜನರು ಇಷ್ಟು ನಂಬಿಕೆ ಇಟ್ಟು ಶ್ರದ್ಧೆ ಭಕ್ತಿಯಿಂದ ಕೈ ಮುಗಿಯುವ ವಿಗ್ರಹ ಮೊದಲು ಏನಾಗಿತ್ತು ಎಂದು ಯೋಚಿಸಿದಾಗ ಒಂದು ಸಾಮಾನ್ಯ ಕಲ್ಲು. ಇದು ಒಂದು ಕಡೆಯಾದರೆ, ದೇವಸ್ಥಾನದ ಒಳಗೆ ಹೋಗುವ ಮೊದಲು ನಾವು ಕಾಲಿಗೆ ನೀರೇರಚಿ, ನಮ್ಮ ಮತ್ತು ನಾವು ನಂಬುವ ಆರಾಧಿಸುವ ದೇವರ ವಿಗ್ರಹವನ್ನು ನೋಡುವುದರ ಮಧ್ಯೆ ಇರುವಂತಹ ಒಂದು ಸೇತುವೆ ರೂಪದಲ್ಲಿ ಇರುವಂತಹ ಮೆಟ್ಟಿಲು ಕೂಡ ಒಂದು ಕಲ್ಲು.
ಈಗ ನನ್ನ ಪ್ರಶ್ನೆ ಇಷ್ಟೇ, ದೇವಸ್ಥಾನದ ಒಳಗಡೆ ಇರುವಂತದ್ದು ಕಲ್ಲೇ ಹಾಗೆಯೇ ಹೊರಗಡೆ ಮೆಟ್ಟಿಲಾಗಿರುವುದೂ ಕಲ್ಲೇ ಆದರೆ ಎರಡಕ್ಕೂ ಬೇರೆ ಬೇರೆ ಹೆಸರು.
ಒಂದಕ್ಕೆ ವಿಗ್ರಹದ ಮೂರ್ತಿ, ಇನ್ನೊಂದಕ್ಕೆ ಕಲ್ಲಿನ ಮೆಟ್ಟಿಲು. ಇವೆರಡನ್ನೂ ಕೂಡ ಒಂದೇ ಶಿಲ್ಪಿ ಕೆತ್ತಿರುವಂತದ್ದು ಅಂದಮೇಲೆ ಎರಡು ಕಲ್ಲುಗಳಿಗೂ ಕೂಡ ಸಮಾನ ಪ್ರಾಮುಖ್ಯತೆ ಯಾಕಿಲ್ಲ? ಯಾಕೆ ಜನರು ಗರ್ಭದಗುಡಿಯಲ್ಲಿರುವ ಕಲ್ಲಿನ ವಿಗ್ರಹಕ್ಕೆ ಮಾತ್ರ ಹಾಲು, ತುಪ್ಪ, ಮೊಸರು, ಅರಶಿನ ಮತ್ತಿತರ ವಸ್ತುಗಳಿಂದ ಅಭಿಷೇಕ ಮಾಡಿ, ಹೂವಿನ ಅಲಂಕಾರ ಮಾಡಿ ಬೆಳ್ಳಿ, ಬಂಗಾರ, ವಜ್ರ, ವೈಡೂರ್ಯಗಳಿಂದ ಸಜ್ಜಿಸಿ ಭಕ್ತಿಯಿಂದ ಕೈ ಮುಗಿಯುತ್ತಾರೆ.
ಆದರೆ ಅದೇ ಕಲ್ಲಿನ ಮೆಟ್ಟಿಲಿಗೆ ಮಾತ್ರ ಚಪ್ಪಲಿಯಿಂದ ತುಳಿದು, ತಿಂದ ಬಾಳೆಹಣ್ಣಿನ ಸಿಪ್ಪೆಯನ್ನು ವರೆಸಿ, ಅದೇ ಕಲ್ಲಿನ ಮೇಲೆ ನಿಂತು ಫೋಟೋ ತೆಗೆಸಿ ಅದೇ ಕಲ್ಲಿಗೆ ತಮ್ಮ ಪಾದದ ಧೂಳನ್ನು ಸವರಿ ಹೋಗುತ್ತಾರೆ. ಇದು ಯಾವ ನ್ಯಾಯ. ಎರಡು ಕಲ್ಲನ್ನೂ ಒಂದೇ ರೀತಿಯಲ್ಲಿ ಯಾಕೆ ಕಾಣುವುದಿಲ್ಲ ಎಂದು ಪ್ರಶ್ನಿಸಿದರೆ. ನಿಮಗೇನು ಹುಚ್ಚೇನ್ರಿ , ಯಾರಾದ್ರೂ ಮೆಟ್ಟಿಲನ್ನ ಪೂಜಿಸ್ತಾರ ಎಂದು ನಮಗೆ ಬೈದು ತೆರಳುತ್ತಾರೆ.
ಇದರರ್ಥ ಎರಡು ಕೂಡ ಕಲ್ಲೇ, ಎರಡೂ ಒಂದೇ ಶಿಲ್ಪಿಯಿಂದ ಕೆತ್ತಿಸಲ್ಪಟ್ಟಿದ್ದು. ಆದರೆ, ಎರಡು ಕಲ್ಲುಗಳು ಕೂಡ ಪಡೆದುಕೊಂಡಂತಹ ರೂಪಗಳು ಬೇರೆ -ಬೇರೆ. ಶಿಲ್ಪಿಯಿಂದ ಹೆಚ್ಚು ಉಳಿ ಪೆಟ್ಟನ್ನು ತಿಂದ ಕಲ್ಲು ದೇವರ ಗರ್ಭಗುಡಿಯಲ್ಲಿದೆ, ಕಡಿಮೆ ಪೆಟ್ಟನ್ನು ತಿಂದ ಕಲ್ಲು ಆಚೆ ಇದೆ.
ಇದರಿಂದ ತಿಳಿಯುವುದು ಇಷ್ಟೇ, ಎಲ್ಲರಿಂದಲೂ ಗೌರವವನ್ನು, ಬೆಂಬಲವನ್ನು, ಒಳ್ಳೆಯದನ್ನು ಬಯಸಿದರೆ ಮೊದಲು ನಾವು ನಮ್ಮ ಜೀವನದಲ್ಲಿ ವಿಗ್ರಹದ ಮೂರ್ತಿಯಂತೆ ಬಾಳೆಂಬ ಶಿಲ್ಪಿಯ ಬಳಿ ಕಷ್ಟ, ನೋವು, ಅವಮಾನ, ಭಯ, ಅಸೂಹೆಗಳನ್ನು ತಿಂದು ತೇಗಿ ಜೀರ್ಣಿಸಿಕೊಂಡು ನಮ್ಮ ಜೀವನವನ್ನು ಸುಧಾರಿಸಿಕೊಳ್ಳುವಂತಹ ನಿರ್ಣಯ ನಮ್ಮದಾಗಬೇಕಾಗುತ್ತದೆ. ಇದರಿಂದ ತಿಳಿಯುವುದು ಇಷ್ಟೇ, ವಿಗ್ರಹವಾಗಿ ಪೂಜಿಸಿಕೊಳ್ಳುವುದು ಅಥವಾ ಮೆಟ್ಟಿಲ ಕಲ್ಲಾಗಿ ನಿಂದಿಸಿಕೊಳ್ಳುವ ಎರಡೂ ನಿರ್ಧಾರಗಳು ಕೂಡ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಆಯ್ಕೆಗಳನ್ನು ಮಾಡೋಣ.
– ವಿದ್ಯಾ
ಎಂ.ಜಿ.ಎಂ. ಕಾಲೇಜು, ಉಡುಪಿ