Advertisement

UV Fusion: ರತ್ನ ಗರ್ಭಾ ಭಾರತಿ…

02:57 PM Aug 15, 2023 | Team Udayavani |

“ಭಾರತ ಎಂದರೆ ಬರಿ ಕಲ್ಲು ಮಣ್ಣಿನ ಭೂಮಿಯಲ್ಲ ಅದು ಜೀವಂತ ಜಾಗೃತ ರಾಷ್ಟ್ರ ಭೂಮಿ’ ಅಟಲ್‌ ಬಿಹಾರಿ ವಾಜಪೇಯಿ ಅವರ ಈ ಮಾತುಗಳನ್ನು ಕೇಳುವಾಗ ಇವತ್ತಿಗೂ ಮೈ ನವಿರೇಳುತ್ತದೆ. ಅದು ಭಾರತೀಯರ ಪರಂಪರೆ. ಭೂಮಿಯನ್ನು ತಾಯಿ ಎಂದು ಕರೆದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಭಾರತದ ಪ್ರಥಮ ರಾಷ್ಟ್ರ ಗೀತೆ ಎಂದು ಕರೆಯಲ್ಪಡುವ ಭೂಮಿಸೂಕ್ತದಲ್ಲಿ ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ ಎಂದು ಹೇಳಲಾಗುತ್ತದೆ. ಅಂದರೆ ಭೂಮಿ ನನ್ನ ತಾಯಿ ಮತ್ತು ನಾನದರ ಮಗು ಎಂದು.

Advertisement

ಇಂತಹ ಭಾರತ ಯಾವತ್ತಿಗೂ ಯಾರ ಮೇಲೂ ಯುದ್ಧ ಮಾಡಲು ಹೋಗಲಿಲ್ಲ. ಯಾರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಆಳ್ವಿಕೆ ಮಾಡಲು ಬಯಸಲಿಲ್ಲ. ಆದರೆ ಯಾವಾಗ ಭಾರತ ತನ್ನ ಮೇಲೆ ಆಕ್ರಮಣಗಳು ಆದವೋ ಆಗ ಸುಮ್ಮನೆ ಇರಲೂ ಇಲ್ಲ. ತನ್ನ ಅಜೇಯ ನಾಗಾಲೋಟವನ್ನು ಸಾರುತ್ತಲೇ ಬಂದಿದೆ. ಭಾರತ ಜಗತ್ತಿನ ಅತ್ಯಂತ ಸಮೃದ್ಧವಾದ ದೇಶ.

ಒಂದು ಕಾಲಕ್ಕೆ ಜಗತ್ತಿನ ಅತೀದೊಡ್ಡ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಶಕ್ತಿಯಾಗಿದ್ದ ಭಾರತದ ಮೇಲೆ ನಡೆದ ದಾಳಿಗಳು ಒಂದೇ ಎರಡೇ. ಭಾರತದ ಸಂಪತ್ತಿಗೆ ಆಸೆಪಟ್ಟು ಲೂಟಿ ಮಾಡಲು ಬಂದವರು ಒಂದು ಕಡೆಯಾದರೆ ಜಗತ್ತನ್ನೆಲ್ಲಾ ಗೆಲ್ಲಬೇಕು ಎಂದು ಬಂದವರು ಮತ್ತೊಂದು ಕಡೆ. ಆದರೆ ಯಾರಿಗೂ ಭಾರತ ದಕ್ಕಲಿಲ್ಲ. ಗ್ರೀಕರು, ಶಕರು, ಹೂಣರು, ಅರಬರು, ಅಫ್ಘಾನರು, ಮೊಘಲರು, ಸುಲ್ತಾನರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟೀಷರು ಹೀಗೆ ಸಾಲು ಸಾಲು ಆಕ್ರಮಣಗಳು. ಭಾರತ ಯಾವತ್ತಿಗೂ ಸೋಲಲಿಲ್ಲ.

ಭಾರತವನ್ನ ರತ್ನ ಗರ್ಭಾ ಭಾರತಿ ಎಂದು ಕರೆಯುತ್ತಾರೆ. ಅಂದರೆ ಭಾರತಮಾತೆ ಜನ್ಮ ನೀಡುವುದು ರತ್ನಗಳಿಗೆ ಎಂದು. ಆ ರತ್ನಗಳು ಯಾವಗೆಲ್ಲ ತಾಯಿಗೆ ಕಷ್ಟ ಬಂತೋ ಆಗೆಲ್ಲಾ ಅವಳಿಗಾಗಿ ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡಿದರು. ಅನೇಕರು ತಮ್ಮ ಜೀವವನ್ನೇ ತಾಯಿಗೆ ಅರ್ಪಿಸಿದ್ದರೆ, ಅನೇಕರು ತಮ್ಮ ಜೀವನವನ್ನೇ ತಾಯಿಗಾಗಿ ಮುಡಿಪಾಗಿಟ್ಟರು.

ಭಾರತವನ್ನು ಬಹಳವಾಗಿ ಕಾಡಿದ್ದು ಬ್ರಿಟೀಷರು. ನೂರಾರು ವರ್ಷಗಳ ಕಾಲ ಭಾರತವನ್ನು ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯದ ಭಾಗವಾಗಿರಿಸಿಕೊಂಡಿದ್ದಾಗ ಅವಳಿಗೆ ದಾಸ್ಯದಿಂದ ಮುಕ್ತಿನೀಡಲು ಬಲಿದಾನ ಗೈದವರು ಸಹಸ್ತ್ರಾರು ಮಂದಿ. ತಮ್ಮ ಜೀವಿತವನ್ನೆಲ್ಲಾ ಅವಳಿಗಾಗಿಯೇ ಕಳೆದವರು ಲಕ್ಷಾಂತರ ರತ್ನಗಳು. ಅವರಿಗೆ ಬ್ರಿಟೀಷರ ಆಡಳಿತದಲ್ಲಿ ಸುಖವಾಗಿ ಇರಬಹುದಿತ್ತು. ಅವರು ಕೊಟ್ಟ ಶಿಕ್ಷಣ, ಆಡಳಿತ, ತಂತ್ರಜ್ಞಾನದ ಜತೆಗೇ ಬದುಕಬಹುದಿತ್ತು ಆದರೆ ಅವರಿಗೆ ಅದಾವುದೂ ಲೆಕ್ಕಕ್ಕೇ ಬರಲಿಲ್ಲ. ಭರತ ಭೂಮಿಯನ್ನು ತನ್ನ ಸ್ವಂತ ತಾಯಿ ಎನ್ನುವ ಹಾಗೆ ಗ್ರಹಿಸಿ ಪ್ರಾಣತ್ಯಾಗ ಮಾಡಿದರು.

Advertisement

ರಾಮ್‌ ಪ್ರಸಾದ್‌ ಬಿಸ್ಮಿಲ್‌ ಗಲ್ಲಿಗೇರುವ ಹಿಂದಿನ ದಿನ ಅವನ ತಾಯಿ ಅವನನ್ನು ನೋಡಲು ಬರುತ್ತಾಳೆ. ತಾಯಿಯನ್ನು ಕಂಡು ಗಳ ಗಳನೆ ಅತ್ತ ರಾಮನನ್ನು ನೋಡಿ ಆ ತಾಯಿ ಆಡಿದ ಮಾತು ಛೇ! ನನ್ನ ಮಗ ವೀರ ಧೀರ ಎಂದು ಭಾವಿಸಿದ್ದೆ. ಅವನನ್ನು ಕಂಡು ಇಡೀಯ ಬ್ರಿಟಿಷ್‌ ಸರಕಾರ ಹೆದರುತ್ತದೆ. ಅವನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಅಂದುಕೊಂಡಿದ್ದೆ. ಆದರೆ ನನ್ನ ಮಗ ಸಾವಿಗೆ ಹೆದರುತ್ತಾನೆ ಎಂದು ತಿಳಿದಿರಲಿಲ್ಲ ಎಂದು. ಅದಕ್ಕೆ ರಾಮ್‌ ಪ್ರಸಾದ್‌ ನೀಡಿದ ಉತ್ತರ ಅಮ್ಮ ನಾನು ಸಾವಿಗೆ ಹೆದರುತ್ತಿಲ್ಲ ಕೊನೆಯ ಕಾಲದಲ್ಲಿ ನಿನ್ನ ಸೇವೆ ಮಾಡಲು ಸಾದ್ಯವಾಗಲಿಲ್ಲ ಎಂದು ಅಳುತ್ತಿದ್ದೇನೆ. ಆಗ ರಾಮನ ತಾಯಿ ಅಯ್ಯೋ ನೀನು ನಿನ್ನ ತಾಯಿಯ ಸೇವೆ ಮಾಡದೇ ಹೋದರೆ ಏನಾಯ್ತು ಭಾರತ ಮಾತೆಯ ಸೇವೆ ಮಾಡಿದ್ದಿ ಚಿಂತೆ ಮಾಡಬೇಡ ಎಂದು ಹೇಳುತ್ತಾಳೆ.

ಇಲ್ಲಿದ್ದದ್ದು ಭಾರತಮಾತೆಯಲ್ಲಿ ಸರ್ವ ಸಮರ್ಪಿತ ಭಾವ. ಹುಡುಗ ಮದನ್‌ ಲಾಲ್‌ ಧೀಂಗ್ರಾ ನೀನು ದೊಡ್ಡ ತಾಯಿ ನಾನು ದಡ್ಡ ಮಗ ನಿನಗಾಗಿ ನಾನು ನನ್ನ ಪ್ರಾಣವನ್ನಲ್ಲದೆ ಮತ್ತೇನನ್ನು ತಾನೆ ಕೊಡಬಲ್ಲೆ ಎಂದು ಹೇಳುವಾಗ ತನ್ನ ಎಲ್ಲ ಸರ್ವಸ್ವಕ್ಕಿಂತಲೂ ಭಾರತ ಮಾತೆಯೇ ಪರಮ ಸಂಪತ್ತು ಎಂದು ಭಾವಿಸಿದ್ದು ತಿಳಿಯುತ್ತದೆ.

ಸಾವಿರಾರು ಹೋರಾಟಗಾರರ ನೆತ್ತರ ಹರಿಸಿ ನೀಡಿದ ಭಿಕ್ಷೆಯೇ ಇಂದು ನಾವು ಅನುಭವಿಸುವ ಸ್ವಾತಂತ್ರ್ಯ. ಭಾರತ ಮಾತೆಗೆ ಯಾವಾಗೆಲ್ಲಾ ಕಷ್ಟ ಬರುತ್ತದೋ ಆಗೆಲ್ಲಾ ರತ್ನಗಳು ಜನ್ಮ ತಾಳುತ್ತಲೇ ಇರುತ್ತದೆ. ಅದು ಚಂದ್ರಗುಪ್ತ ಮೌರ್ಯನಿಂದ ಹಿಡಿದು ವಿವೇಕಾನಂದರ ತನಕ. ಸ್ವಾತಂತ್ರ್ಯ ಸಿಕ್ಕಿದೆ ಇನ್ನು ರತ್ನಗಳಾಗಬೇಕಾದದ್ದು ಆ ಸ್ವಾತಂತ್ರವನ್ನು ಉಳಿಸಿಕೊಳ್ಳಲು.
ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು ಎನ್ನುವ ಕುವೆಂಪು ಅವರ ಮಾತು ಸರ್ವ ಕಾಲಕ್ಕೂ ಸ್ಪೂರ್ತಿಯಾಗಬೇಕು. ಭಾರತ ಮಾತೆಗಾಗಿ ರತ್ನಗಳಾಗಬೇಕು.

ಲತೇಶ್‌ ಸಾಂತ
ಅಂತಿಮ ಬಿ.ಎ, ಪತ್ರಿಕೋದ್ಯಮ ವಿಭಾಗ
ವಿ.ವಿ ಕಾಲೇಜು ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next