Advertisement

UV Fusion: ಮಳೆಯೇ ಮಾಯ

12:03 PM Sep 24, 2023 | Team Udayavani |

ಮಳೆಗಾಲ ಎಂದರೆ ಮನಸ್ಸಿಗೆ ಎನೋ ಒಂದು ರೀತಿಯ ಆನಂದ. ಹನಿಗಳ ಸದ್ದು, ಮಣ್ಣಿನ ಗಮ, ತಂಪು ಗಾಳಿ ಎಂದಿಗೂ ಹರುಷ ಉಂಟು ಮಾಡುತ್ತವೆ. ಅದರಲ್ಲೂ ಮಲೆನಾಡಿನ ಮಳೆಗಾಲವಂತು ಮನಮೋಹಕ. ಎತ್ತ ನೋಡಿದರೂ ಹಚ್ಚಹಸುರಿನಿಂದ ತುಂಬಿರುವ ಗಿಡ ಮರಗಳು, ತೋಟ ಗದ್ದೆಗಳಲ್ಲಿ ಚುರುಕಾಗಿ ಸಾಗುವ ವ್ಯವಸಾಯ, ಕಚ್ಚೆ ಸೀರೆಯನ್ನುಟ್ಟು ನಾಟಿ ಮಾಡುವ ಹೆಂಗಸರು, ಖುಷಿಯಿಂದ ಕೃಷಿಯಲ್ಲಿ ತೊಡಗಿದ ರೈತರು ಆಹಾ ಎಂತಃ ಮನಮೋಹಕ ದೃಶ್ಯಗಳಿವು.

Advertisement

ಕಣ್ಣಿಗೆ ತಂಪು ತರುವ ಮಳೆಗಾಲವನ್ನು ಎಂದಿಗೂ ಮರೆಯಲು ಅಸಾಧ್ಯ. ಆದರೆ ಮಲೆನಾಡಿನಲ್ಲಿ ವಾಡಿಕೆಯಂತೆ ಈ ಬಾರಿ ವರುಣನ ಅಬ್ಬರವಿಲ್ಲ. ನಾನು ಹುಟ್ಟಿದಾಗಿನಿಂದ ಎಂದು ಕಾಣದಂತ ಬಿರು ಬಿಸಿಲನ್ನು ಈ ಮಳೆಗಾಲದಲ್ಲಿ ಕಾಣುವಂತಾಗಿದೆ. ದೇವರ ಶಾಪವೋ, ಮನುಷ್ಯನ ಪಾಪವೋ ತಿಳಿಯುತ್ತಿಲ್ಲ ಇಂತಹ ದುಸ್ಥಿತಿ ಎದುರಾಗಿದೆ. ಮನುಷ್ಯನು ಪ್ರಕೃತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಆದರೆ ಉಳಿಸುವ, ಬೆಳೆಸುವ ಕಾರ್ಯವನ್ನು ಮಾತ್ರ ಮಾಡುತ್ತಿಲ್ಲ. ಅದರ ಪರಿಣಾಮ ಇಂದು ತಿಳಿಯುವಂತಾಗಿದೆ. ಮಲೆನಾಡಿಗೆ ಇಂತಹ ಪರಿಸ್ಥಿತಿ ಎದುರಾದರೆ ಇನ್ನೂ ಉಳಿದ ಪ್ರದೇಶಗಳ ಗತಿ ಏನು? ವರುಣನನ್ನೇ ನಂಬಿಕೊಂಡು ವ್ಯವಸಾಯಕ್ಕೆ ಬಿತ್ತನೆ ಬೀಜ , ಗೊಬ್ಬರ, ಕೀಟನಾಶಕ ಎಂದೆಲ್ಲಾ ವೆಚ್ಚ ಮಾಡಿದ ರೈತನ ಪಾಡೇನು?. ಹೀಗೆ ಮುಂದುವರೆದಲ್ಲಿ ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುವುದರಲ್ಲಿ ಸಂದೇಹವಿಲ್ಲ. ಮೂರು ಹೊತ್ತು ಹೊಟ್ಟೆಯನ್ನು ತುಂಬಿಸಿಕೊಳ್ಳಲು ಹೊರೆಯಾಗುವ ಸ್ಥಿತಿ ಎದುರಾದರೆ? ಎನ್ನುವುದೇ ಭಯ. ಮುಂದಿನ ಬೇಸಿಗೆ ಕಾಲಕ್ಕೆ ಬರಗಾಲ ಕಟ್ಟಿಟ್ಟ ಬುತ್ತಿ.

ಸಮೃದ್ಧ ಪರಿಸರವಿದ್ದಲ್ಲಿ ಈ ಸಮಸ್ಯೆ ತಲೆದೊರುತ್ತಿರಲಿಲ್ಲ. ಅರಣ್ಯವನ್ನು ಅಭಿವೃದ್ಧಿಯ ಹೆಸರಲ್ಲಿ ಕಡಿದು ಹಾಕುತ್ತಿ ರುವುದು ತನ್ನದೇ ವಿನಾಶಕ್ಕೆ ಮುನ್ನುಡಿ ಬರೆದಂತೆ ಎಂದು ಮನುಜ ಇನ್ನೂ ಅರಿತಿಲ್ಲ. ಪ್ರಕೃತಿ ಮುಂದೆ ಮನುಷ್ಯ ತೃಣಕ್ಕೆ ಸಮಾನ. ಇಂದಿನ ಪರಿಸ್ಥಿತಿಯು ಮನುಷ್ಯನು ಮಾಡುತ್ತಿರುವ ತಪ್ಪುಗಳ ಪ್ರತಿಫ‌ಲ. ಅದನ್ನು ಅನುಭವಿಸದೆ ಬೇರೆ ವಿಧಿ ಇಲ್ಲ.

ಪೂಜಾ ಹಂದ್ರಾಳ,

ಶಿರಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next