ಕನ್ನಡ ನಾಡು-ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ. ಕನ್ನಡ ಸಂಸ್ಕೃತಿ, ಸೊಬಗು, ವೈಭವ, ಸೌಂದರ್ಯ, ಅಪೂರ್ವ ಹಾಗೂ ಅವಿಸ್ಮರಣೀಯ. ಕನ್ನಡಿಗರ ಜಾಣ್ಮೆ ಭೌಗೋಳಿಕ ಹರವು ಕವಿ- ಕಾವ್ಯ ಸೌಂದರ್ಯದಿಂದ ಅದರ ಮಹತ್ವ ಇನ್ನೂ ಹೆಚ್ಚಾಗಿದೆ. ಕನ್ನಡಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಕನ್ನಡಿಗರನ್ನು ಆಳಿದ ಮೊದಲ ಕನ್ನಡ ದೊರೆಗಳಾದ ಕದಂಬರು, ಅನಂತರ ಗಂಗರು, ಬಾದಾಮಿಚಾಳುಕ್ಯರು ,ರಾಷ್ಟ್ರಕೂಟರು, ಹೊಯ್ಸಳರು ಹೀಗೆ ಅನೇಕ ರಾಜಮನೆತದವರು ಆಳಿದ್ದಾರೆ.
ನಮ್ಮ ಕರ್ನಾಟಕದ ಹೆಸರು ಮಹಾಭಾರತ ಕಾಲದಿಂದ ಇಂದಿನವರೆಗೆ ತನ್ನ ದೇಯಾದ ವಿಶೇಷತೆಗಳಿಂದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಶ್ರೀಗಂಧದ ಕಂಪನ್ನುಳ್ಳ ನಾಡು ಕರ್ನಾಟಕವಾಗಿದೆ. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಕರ್ನಾಟಕದ ಹೆಚ್ಚಿನ ಭಾಗ ಮೌರ್ಯ ಚಕ್ರವರ್ತಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇತಿಹಾಸಕಾರರು ಕಂಡುಕೊಂಡಿದ್ದಾರೆ.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕೀರ್ತಿ ನಮ್ಮ ಕರ್ನಾಟಕಕ್ಕಿದೆ. ಇಂತಹ ಮಹನೀಯರನ್ನು ಪಡೆದ ಕನ್ನಡಿಗರು ಪುಣ್ಯವಂತರು.ಕನ್ನಡಿಗರಾಗಿ ನಾವು ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಇದುವರೆಗೂ ಭಾರತದ ಯಾವ ಭಾಷೆಯಲ್ಲಿಯೂ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿಲ್ಲ. ಕರ್ನಾಟಕವು ತನ್ನದೇಯಾದ ವಿಶೇಷ ಸ್ಥಾನವನ್ನು ಭಾರತದ ಭೂಪಟದಲ್ಲಿ ಪಡೆದುಕೊಂಡಿದೆ. ಇದರ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಕನ್ನಡಿಗರಾದ ನಾವೆಲ್ಲರೂ ತಿಳಿಯಲೇಬೇಕು. ಇಂತಹ ಹಿರಿಯರ, ಮಹಾನುಭಾವರ, ಜ್ಞಾನಿಗಳ, ಪರಿಶ್ರಮದ ಹಿನ್ನೆಲೆಯಲ್ಲಿ ನಾವೆಲ್ಲ ಒಂದಾಗಿದ್ದೇವೆ. ನಮ್ಮ ಒಗ್ಗಟ್ಟೇ ನಾವು ಅವರಿಗೆ ಕೊಡುವ ಗೌರವ ಹಾಗೂ ಸಲ್ಲಿಸುವ ಕೃತಜ್ಞತೆಯಾಗಿದೆ. ರಾಜ್ಯಕ್ಕಾಗಿ ಹೋರಾಡಿದ, ಮಡಿದ ಪುಣ್ಯ ಪುರುಷರನ್ನು ಎಂದೆಂದಿಗೂ ಮರೆಯಲಾಗದು. ಒಟ್ಟಿನಲ್ಲಿ ಹೇಳುವುದಾದರೆ ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
ಪ್ರಣಮ್ಯ.ಎನ್
ಎಂಎಸ್‌ಸಿಎಚ್‌ಎಸ್‌ಎಸ್ ಪೆರಡಾಲ ನೀರ್ಚಾಲು