ಮಹಾನ್ ಚಳುವಳಿಗಾರ ನೆಲ್ಸನ್ ಮಂಡೇಲಾ ಅವರು 1918ರ ಜುಲೈ 18ರಂದು ದಕ್ಷಿಣ ಆಫ್ರಿಕಾದ : ಟ್ರಾನ್ಸ್ಕಿ ಎಂಬ ನಗರದಲ್ಲಿ ಜನಿಸಿದರು. ನೆಲ್ಸನ್ ಮಂಡೇಲಾ 20ನೇ ಶತಮಾನ ಕಂಡ ಮಹಾನ್ ನಾಯಕ ಎನ್ನಬಹುದು. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಬೇದ ನೀತಿಯ ವಿರುದ್ಧ ಚಳವಳಿಯನ್ನು ಕೈಗೊಂಡ ಇವರನ್ನು ಆಫ್ರಿಕಾದ ಗಾಂಧಿ ಎಂದೇ ಕರೆಯಲಾಗುತ್ತದೆ.
ಮಾರ್ಕ್ಸ್ ವಾದಿ ವಿಚಾರಗಳಿಂದ ಪ್ರಭಾವಿತರಾದ ಮಂಡೇಲಾ ಅವರು ರಹಸ್ಯವಾಗಿ ನಿಷೇಧಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ಕಮುನಿಸ್ಟ್ ಪಕ್ಷವನ್ನು ಸೇರಿದರು. ಪ್ರಾರಂಭದಲ್ಲಿ ಅವರು ಅಹಿಂಸಾ ಮಾರ್ಗಕ್ಕೆ ಹೆಚ್ಚು ಬದ್ಧರಾಗಿದ್ದರೂ ಮುಂದೆ ಕಮುನಿಸ್ಟ್ ಪಕ್ಷವನ್ನು ಸೇರಿದ್ದರಿಂದ ಶಸ್ತಸಜ್ಜಿತ ಉಮ್ಕಾಂತೋ ವೀ ಸಿಜ್ವೆ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಸರಕಾರದ ವಿರುದ್ಧ ಚಳವಳಿಯನ್ನು ತೀವ್ರಗೊಳಿಸಿದರು. ಇದರ ಪರಿಣಾಮವಾಗಿ ಮಂಡೇಲಾರು ಬಂಧಿತರಾಗಿ 27 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಮುಂದೆ ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಇವರ ಬಿಡುಗಡೆಗೆ ಒತ್ತಡ ಹೆಚ್ಚಿದ್ದರಿಂದ ಆಗಿನ ಅಧ್ಯಕ್ಷ ಎಫ್.ಡಬ್ಲೂé ಕ್ಲರ್ಕ್ 1990ರಲ್ಲಿ ಮಂಡೇಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿದರು. ಮುಂದೆ 1994ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ವಿಜಯ ಗಳಿಸಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು.
ನೆಲ್ಸನ್ ಮಂಡೇಲಾ ಮೊದಲ ಬಾರಿ ರಾಷ್ಟ್ರಪತಿಯಾದ ಅನಂತರ ತನ್ನ ಅಂಗರಕ್ಷಕರ ಜತೆ ಒಂದು ಹೊಟೇಲ್‌ಗೆ ಊಟಕ್ಕೆಂದು ಹೋಗಿದ್ದರು. ಜತೆಗಿದ್ದವರೆಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿ ಊಟಕ್ಕಾಗಿ ಕಾಯುತ್ತಿದ್ದರು. ಅದೇ ವೇಳೆಗೆ ಮಂಡೇಲಾರು ಕುಳಿತಿದ್ದ ಕುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಆರ್ಡರ್ ಮಾಡಿ ಊಟಕ್ಕಾಗಿ ಕಾಯುತ್ತಾ ಕುಳಿತಿದ್ದನು. ಮಂಡೇಲಾ ತನ್ನ ಅಂಗರಕ್ಷಕರ ಬಳಿ ಆ ವ್ಯಕ್ತಿಯನ್ನೂ ತನ್ನ ಟೇಬಲ್ ಬಳಿ ಕುಳಿತುಕೊಳ್ಳುವಂತೆ ಹೇಳಿ ಕಳುಹಿಸಿದರು. ಅದರಂತೆ ಆ ವ್ಯಕ್ತಿಯು ಮಂಡೇಲಾ ಅವರ ಟೇಬಲ್ ಹತ್ತಿರ ಬಂದು ಕುಳಿತುಕೊಂಡನು. ಎಲ್ಲರೂ ಊಟ ಮಾಡುತ್ತಿದ್ದಂತೆ ಆ ವ್ಯಕ್ತಿಯೂ ಊಟ ಮಾಡಲು ಪ್ರಾರಂಭಿಸಿದನು ಅದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು.
ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಊಟ ಮಾಡಿ ಆ ವ್ಯಕ್ತಿಯು ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಗೆ ಹೋದನು. ಆ ವ್ಯಕ್ತಿಯು ಹೋದ ಅನಂತರ ಮಂಡೇಲಾ ಅವರ ಅಂಗರಕ್ಷಕರ ತಂಡದ ಅಧಿಕಾರಿಯು, ಸರ್ ಅವರಿಗೆ ಜ್ವರ ಬಂದಿರಬಹುದು ಹಾಗಾಗಿ ಊಟ ಮಾಡುವಾಗ ಅವರ ಕೈಗಳು ನಡುಗುತ್ತಿದ್ದವು ಎಂದು ತಿಳಿಸಿದನು. ಆಗ ಮಂಡೇಲಾ ನಗುತ್ತಾ, ಆ ವ್ಯಕ್ತಿಯು ರೋಗಗ್ರಸ್ತನಲ್ಲ, ಬದಲಿಗೆ ನಾನು ಬಂಧಿಯಾಗಿದ್ದ ಜೈಲಿನ ಜೈಲರ್ ಆತ. ಅಲ್ಲಿ ಆತ ನನಗೆ ಬಹಳ ಹಿಂಸೆ ಕೊಡುತ್ತಿದ್ದ, ನಾನು ಏಟು ತಿಂದು ತಿಂದು ಸುಸ್ತಾಗಿ ನೀರು ಕೇಳಿದಾಗ ಆತನು, ನಿನಗೆ ನೀರು ಬೇಕೇ? ಕುಡಿ ಎಂದು ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು ಎಂದರು.
ಈಗ ನಾನು ಈ ದೇಶದ ರಾಷ್ಟ್ರಪತಿ ಆಗಿದ್ದುದರಿಂದ ಈಗ ಆ ವ್ಯಕ್ತಿಗೆ ಅಂದು ತಾನು ಮಾಡಿದ ತಪ್ಪಿಗೆ ಇಂದು ನನಗೆ ದೊಡ್ಡ ಪ್ರಮಾಣದ ಶಿಕ್ಷೆ ಆಗಬಹುದು ಎಂದು ಆತನಿಗೆ ಈಗ ಮನವರಿಕೆ ಆಗಿದ್ದು, ಅದಕ್ಕೆ ಆತನ ಕೈಗಳು ನಡುಗುತ್ತಿದ್ದವು. ಅದರೆ ಆ ರೀತಿ ದ್ವೇಷವನ್ನು ಸಾಧಿಸುವುದು ನನ್ನ ಚರಿತ್ರೆಯೇ ಅಲ್ಲ. ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮನುಷ್ಯನಲ್ಲಿ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ ಎಂದು ಮಂಡೇಲಾ ಹೇಳಿದರು.
ಯಾವುದೋ ಸಂದರ್ಭದಲ್ಲಿ ನಾವು ಅಧಿಕಾರದಲ್ಲಿಲ್ಲದೇ ಇದ್ದಾಗ ಅನುಭವಿಸಿದ ಕಷ್ಟವನ್ನು, ನಾವು ಅಧಿಕಾರಕ್ಕೆ ಏರಿದಾಗ ಕಷ್ಟವನ್ನು ನೀಡಿದ ವ್ಯಕ್ತಿಯ ಮೇಲೆ ದ್ವೇಷ ಸಾಧನೆಯನ್ನು ಮಾಡುವ ಬದಲು, ಅವರನ್ನು ಮಾನವೀಯವಾಗಿ ಪ್ರೀತಿಯಿಂದ ಆಧರಿಸಿ ಗೌರವಿಸಿದಾಗ ನಮ್ಮ ಮೌಲ್ಯವೇ ಹೆಚ್ಚುತ್ತದೆ. ದ್ವೇಷ ಸಾಧನೆ ಕೇವಲ ಕ್ಷಣಿಕವಾದರೆ ಮಾನವೀಯತೆಯು ಶಾಶ್ವತವಾಗಿ ಉಳಿಯುತ್ತದೆ.
*ಸಂತೋಷ್ ರಾವ್ ಪೆರ್ಮುಡ, ಬೆಳ್ತಂಗಡಿ