Advertisement
ನಾಗರ ಪಂಚಮಿಯು ಉತ್ತರ ಕರ್ನಾಟಕದವರಿಗೆ ದೊಡ್ಡ ಹಬ್ಬವಾಗಿದೆ. ಈ ಪಂಚಮಿ ತಿಥಿಯ ಅಧಿಪತಿಯಾದ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.
Related Articles
Advertisement
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು.ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಕಾಕತಾಳೀಯಂಬತೆ ಈ ವರ್ಷ ವಿಶೇಷತೆ ಎಂದರೆ ಎರಡು ಪೂಜೆ ವ್ರತಗಳು ಒಟ್ಟಿಗೆ ಬಂದಿರುವುದು. ಮಹಿಳೆಯರು ತಮ್ಮ ಪತಿಗಾಗಿ ಮಂಗಳವಾರ ಉಪವಾಸವನ್ನು ಮಾಡುತ್ತಾರೆ. ಶ್ರಾವಣ ಸೋಮವಾರದಂತೆಯೇ ಮಂಗಳವಾರವೂ ಬಹಳ ಮುಖ್ಯ. ಈ ವರ್ಷ ನಾಗರಪಂಚಮಿ ದಿನವೇ ಮಂಗಳಗೌರಿ ವ್ರತ ಆಚರಿಸುವುದರಿಂದ ನಾಗಪಂಚಮಿಯಂದು ನಾಗದೇವತೆಯೊಂದಿಗೆ ಶಿವ ಮತ್ತು ತಾಯಿ ಪಾರ್ವತಿಯನ್ನೂ ಪೂಜಿಸಲಾಗುವುದು. ಹೀಗಾಗುವುದು ಅಪರೂಪ. ಆದ್ದರಿಂದ ನಾಗದೇವತೆ ಮತ್ತು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲಿತಾಂಶ ಸಿಗುತ್ತದೆ ಎನ್ನಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ
ಸಾಮಾನ್ಯವಾಗಿ ನಾಗರ ಪಂಚಮಿ ಆರಂಭವಾಗುವುದೇ ಅಮವಾಸ್ಯೆಯಿಂದ ಅಮವಾಸ್ಯೆಯ ಅನಂತರ ಮೂರನೆಯ ದಿನ ರೊಟ್ಟಿ ಹಬ್ಬ, ನಾಲ್ಕನೆಯ ದಿನ ಚತುರ್ಥಿ, ಐದನೆಯ ದಿನ ಪಂಚಮಿ ಆಚರಿಸುತ್ತಾರೆ. ರೊಟ್ಟಿ ಹಬ್ಬದಂದು ಮನೆ ಮನೆಯಲ್ಲಿ ಬಗೆ ಬಗೆಯ ಪಲ್ಯ, ಚಟ್ನಿ ತಯಾರಿಸಿ ರೊಟ್ಟಿ, ಚಪಾತಿಯನ್ನು ತಯಾರಿಸಿ ಅಕ್ಕ ಪಕ್ಕದ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ನಾಗರ ಪಂಚಮಿ ಹಬ್ಬದ ನಾಲ್ಕೈದು ದಿನ ಉಂಡಿ, ಹೋಳಿಗೆ ಮಾಡುವುದರಿಂದ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಸಜ್ಜಿ, ಜೋಳದ ಹಿಟ್ಟಿನಲ್ಲಿ ಎಳ್ಳು ಹಾಕಿ ರೊಟ್ಟಿ ತಯಾರಿಸುತ್ತಾರೆ. ಅದನ್ನೇ ಬಾಂಧವ್ಯ ರೂಪದಲ್ಲಿ ಹಂಚಿಕೊಳ್ಳುತ್ತಾರೆ.
ರೊಟ್ಟಿ ಹಬ್ಬದ ಬಳಿಕ ಶೇಂಗಾ ಉಂಡಿ, ಅಳ್ಳಿಟ್ಟು ಉಂಡಿ, ಎಳ್ಳುಂಡಿ, ಬುಂದಿ ಗಳಿಗೆ ಉಂಡಿ ಹಾಗೂ ಚಕ್ಕುಲಿ ಸೇರಿ ಬಗೆ ಬಗೆಯ ಉಂಡಿಗಳನ್ನು ತಯಾರಿಸುತ್ತಾರೆ. ಈ ಉಂಡಿಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಇನ್ನೂ ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಉಂಡಿ ಕೊಟ್ಟು ತರುವ ಸಂಪ್ರದಾಯವಿದೆ. ಅದರಲ್ಲಿಯೂ ತವರ ಮನೆಯಿಂದ ಉಂಡಿ ಬರಲೇಬೇಕು. ಇದು ಸಹೋದರ ಸಹೋದರರ ಮಧ್ಯೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ.
ಒಟ್ಟಾರೆಯಾಗಿ ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಹಾಗೂ ಭೂಮಿಯನ್ನು ಅಗೆಯಬಾರದು ಮುಂತಾದ ನಿಷೇಧ ನಿಯಮಗಳನ್ನು ಹಿರಿಯರು ಈ ದಿನ ಪಾಲಿಸುತ್ತಾ ಬಂದಿರುವ ಪ್ರತೀತಿ ನಡುವೆಯೇ ರೊಟ್ಟಿ ಹಬ್ಬ ಮಾಡಿ, ಬಗೆ ಬಗೆಯ ಉಂಡಿ ಗಳನ್ನು ಮಾಡಿ, ನಾಗದೇವತೆಯನ್ನು ಪೂಜಿಸಿ, ಹುತ್ತಗಳಿಗೆ ಹಾಲೆರೆದು ಸಂಭ್ರಮದಿಂದ ಆಚರಿಸಿ, ಪ್ರೀತಿ, ವಿಶ್ವಾಸ ಬಂಧುತ್ವದೊಂದಿಗೆ ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿ ಈ ನಾಗ ಪಂಚಮಿ ಬರುವ ವರ್ಷದವರೆಗೆ ಹರುಷದಿಂದ ಇರುವಂತೆ ಮಾಡುತ್ತದೆ.
-ಬಸವರಾಜ ಎಂ. ಯರಗುಪ್ಪಿ, ಶಿರಹಟ್ಟಿ, ಗದಗ