ಅಮ್ಮ ಅಂಗಡಿಯಿಂದ ಹಿಂತಿರುಗಿದಳು. ಅವಳು ಎಷ್ಟು ಕರೆದರೂ ಓ ಅನ್ನದ ನಾವು ಅವಳ ಪರ್ಸ್‌ನಿಂದ ಬಂದ ಚರ – ಪರ ಸದ್ದು ಕಿವಿಗೆ ಬಿದ್ದ ಕೂಡಲೇ ಪುಟ್ಟ ನಾಯಿ ಮರಿಯಂತೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಅವಳ ಮುಂದೆ ಹಾಜರು. ಅಂಗಡಿಯವನ ಬಳಿ ಚಿಲ್ಲರೆ ಇಲ್ಲದೆ ಬೇರೆ ದಾರಿ ಕಾಣದೇ ತಂದ ಒಂದು ಚಾಕೊಲೇಟ್ ಮಾಡಿದ ಭಾರೀ ಸದ್ದು ಅದು. ಚಾಕೊಲೇಟ್ ಒಂದು ನಾವು ಇಬ್ಬರು. ಸಮಪಾಲು ಆದರೆ ಸುಖ ಜೀವನ… ಹೊಂಬಾಳೆ, ಚೂರು ತಪ್ಪಿದರೂ ಅಲ್ಲೇ ಮೊಳಗುವುದು ಕುರುಕ್ಷೇತ್ರದ ಕಹಳೆ.
ಯಾರೇ ಆಗಲಿ ಚಾಕೊಲೇಟ್ ಕೈಗೆ ಸಿಕ್ಕಾಗ ಮುಖ ಥಟ್ಟನೆ ಅರಳುತ್ತದೆ. ಚಾಕೊಲೇಟ್‌ನ ಜತೆ ಒಂದು ಕ್ಷಣದ ಖುಷಿ ಉಚಿತವಾಗಿ ಮತ್ತು ಖಚಿತವಾಗಿ ಸಿಗುತ್ತದೆ. ಚಾಕೊಲೇಟ್‌ಗೆ ನೂರಾರು ವರ್ಷಗಳ ಇತಿಹಾಸವಿದೆ. ಇದರ ಮೂಲ ಮೆಕ್ಸಿಕೊ, ದಕ್ಷಿಣ ಮತ್ತು ಮಧ್ಯ ಅಮೇರಿಕ ಖಂಡಗಳಲ್ಲಿ. 1800ರ ದಶಕದಲ್ಲಿ ಬಾರ್‌ಗಳಲ್ಲಿ ಬಡಿಸುವ ಪಾನೀಯವಾಗಿ ಚಾಕೊಲೇಟ್ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಅನಂತರ ದಿನಗಳಲ್ಲಿ ಯೂರೋಪ್‌ಗೆ ಪ್ರವೇಶಿಸಿದ ಚಾಕೊಲೇಟ್ ಈಗ ಜಗತ್ತಿನ ಯಾವ ಮೂಲೆಗೆ ಹೋದರೂ ದೊರೆಯುತ್ತದೆ. ಚಾಕೊಲೇಟ್‌ಗಳು ಸಾಮಾನ್ಯವಾಗಿ ಕೋಕೋ, ಬೆಣ್ಣೆ, ಸಕ್ಕರೆ, ಎಮಲ್ಸಿಫೈಯರ್‌ಗಳು ಮತ್ತು ಹಾಲಿನಂತಹ ಹೆಚ್ಚುವರಿ ಪದಾರ್ಥಗಳಿಂದ ಕೂಡಿದೆ.
ಹಲವಾರು ಸಂಶೋಧನೆಗಳು ಇಂದು ಚಾಕೊಲೇಟ್‌ನ ಪರವಾಗಿ ನಿಂತಿವೆ. ಚಾಕೊಲೇಟ್ ಔಷಧ ಅಲ್ಲ, ಆದರೆ ಇತಿ- ಮಿತಿಯಲ್ಲಿ ಚಾಕೊಲೇಟ್ ಸೇವನೆಯಂದ ಅಪಾಯವನ್ನು ತಪ್ಪಿಸಬಹುದು. ವಿಜ್ಞಾನಿಗಳು ನಡೆಸಿದ ಅಧ್ಯಯನಗಳ ಪ್ರಕಾರ ಚಾಕೋಲೇಟ್ ಸ್ಮರಣ ಶಕ್ತಿಯನ್ನು ಕಾಪಾಡುತ್ತದೆ. ಒತ್ತಡ ಕಡಿಮೆ ಮಾಡುವ ಶಕ್ತಿ ಚಾಕೋಲೇಟ್‌ಗಿದ್ದು ಹೃದ್ರೋಗದ ಸಮಸ್ಯೆಯೂ ಕಡಿಮೆಯಾಗುತ್ತದೆ. ಚಾಕೋಲೇಟ್ ಸೇವಿಸುವವರಲ್ಲಿ ಪಾರ್ಶ್ವವಾಯುವಿನ ಅಪಾಯ ಕಡಿಮೆಯಂತೆ ಹಾಗೂ ಗರ್ಭಿಣಿಯರು ಚಾಕೋಲೇಟ್ ಸೇವಿಸುವುದರಿಂದ ಭ್ರೂಣದ ಬೆಳವಣಿಗೆಗೆ ಸಹಾಯವಾಗುತ್ತದೆ. ಚಾಕೊಲೇಟ್ ದೇಹಕ್ಕೆ ತತ್‌ಕ್ಷಣ ಶಕ್ತಿ ನೀಡುವಲ್ಲಿ ಕೂಡ ಸಹಕಾರಿಯಾಗಿದೆ.
ಚಾಕೊಲೇಟ್ ಎಂದಾಗ ತತ್‌ಕ್ಷಣ ನಮಗೆಲ್ಲ ನೆನಪಾಗುವುದು ಶಾಲೆಯಲ್ಲಿ ಹುಟ್ಟುಹಬ್ಬದ ಆಚರಣೆ. ಏಳನೇ ತರಗತಿಯಲ್ಲಿ ನನ್ನ ಸ್ನೇಹಿತೆ ತನ್ನ ಹುಟ್ಟುಹಬ್ಬದಂದು ಎಲ್ಲರಿಗೂ ಒಂದು ಚಾಕೊಲೇಟ್ ಕೊಡುತ್ತ ಬಂದಳು ನನ್ನ ಬಳಿ ಬಂದಾಗ ನಾನು ವಿಶ್ ಮಾಡುವ ಮೊದಲೇ ನನ್ನ ಕೈಗೆ ಎರಡು ಚಾಕೊಲೇಟ್ ಜತೆ ಸಣ್ಣ ಸೆ¾ çಲ್ ಕೊಟ್ಟಳು. ನಾನು ಯಾರಿಗೂ ತಿಳಿಯದಂತೆ ಒಂದು ಮಾತ್ರ ತಿಂದು ಇನ್ನೊಂದನ್ನು ಕಿಸೆಗೆ ಹಾಕಿದೆ. ಶಿಕ್ಷಕರಿಗೆ ಚಾಕೊಲೇಟ್ ಕೊಡುವುದಕ್ಕೆ ಹೋಗಲು ಅವಳು ನನ್ನ ಆಯ್ಕೆ ಮಾಡಿದಾಗ ಮತ್ತೆ ಎರಡು ಚಾಕೊಲೇಟ್ ಸಿಕ್ಕಷ್ಟೇ ಖುಷಿಯಾಯಿತು.
ಶಾಲೆಯ ಕಚೇರಿಯಲ್ಲಿ ಇಣುಕಿದಾಗ ಒಳಗೆ ಮೂರು ಜನ ಶಿಕ್ಷಕರು ಚಾಕೊಲೇಟ್ ಉಳಿದಿದ್ದು ಕೇವಲ ಎರಡು. ಅವಳು ಹೇಳದೆ ಹೋದರು ಅವಳ ಮುಖದಲ್ಲಿ ಗೊಂದಲ ಕಂಡು ನನಗೆ ಕಿಸೆಯಲ್ಲಿದ್ದ ಇನ್ನೊಂದು ಚಾಕೊಲೇಟ್ ನೆನಪಾಯಿತು, ಅದನ್ನು ತೆಗೆದು ಅವಳ ಕೈಯಲ್ಲಿ ಇಟ್ಟೆ, ಅವಳ ಕಣ್ಣು ತುಂಬಿ ಬಂತು. ಆಗ ಅವಳು ಕೊಟ್ಟ ಸ್ಮೈಲ್ ಅನ್ನು ಅವಳಿಗೆ ವಾಪಸ್ ಕೊಟ್ಟು ಹೋಗು ಎಂದೆ. ಅಂದು ಒಂದು ಚಾಕೊಲೇಟ್ ಕೊಟ್ಟು ಗಟ್ಟಿಯಾದ ಗೆಳೆತನ ಇಂದಿಗೂ ಹಾಗೇ ಇದೆ.
ಹೀಗೆ ಚಾಕೊಲೇಟ್ ಕೇವಲ ಸಿಹಿ ತಿನಿಸಾಗಿ ಉಳಿಯದೆ ಭಾವನೆಯೇ ಆಗಿದೆ. ಪ್ರೀತಿ ಹೇಳಲು, ಕ್ಷಮೆ ಕೇಳಲು, ಧನ್ಯವಾದ ಸಲ್ಲಿಸಲು, ಸ್ವಾಗತ ಕೋರಲು, ಬಾಯ್ ಹೇಳಿ ಬಿಳ್ಕೊಡಲು ಹೀಗೆ ಚಾಕೊಲೇಟ್ ನೆನಪಿನ ಕ್ಷಣಗಳನ್ನು ಸಿಹಿಯಾಗಿಸುತ್ತದೆ. ಚಾಕೊಲೇಟ್ ತಯಾರಿಸುವಾಗ ಸಾಮಗ್ರಿಗಳ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದು ಹಾಳಾಗಿ ಕಹಿಯಾಗಬಹುದು. ಜೀವನವು ಅಷ್ಟೇ ಕೆಲವೊಮ್ಮೆ ಇಂದಿನ ಸಣ್ಣ ತಪ್ಪು ನಿರ್ಧಾರ ಮುಂದೆ ಬಾಳಿಗೆ ದೊಡ್ಡ ಕಹಿಯಾಗಬಹುದು. ಇದು ಸಿಹಿಯಾದ ಚಾಕೊಲೇಟ್ ಹೇಳುವ ಜೀವನ ಸಾರ.
ಮಾನಸ
ಅಗ್ನಿಹೋತ್ರಿ