ಹಬ್ಬಗಳು ಬಂತೆಂದರೆ ಸಾಕು ತಿಂಗಳಿಗೂ ಮೊದಲೇ ಆನ್‌ಲೈನ್ ಶಾಪಿಂಗ್ ಕಂಪೆನಿಗಳು ವಿವಿಧ ರೀತಿಯ ರಿಯಾಯಿತಿಗಳನ್ನು ಆರಂಭಿಸಿ ಜನರನ್ನು ಭರ್ಜರಿಯಾಗಿ ಕೊಳ್ಳೆ ಹೊಡೆಯುವುದನ್ನು ಆರಂಭಿಸುತ್ತವೆ. ಇದು ಇಂದು ಸರ್ವೆಸಾಮಾನ್ಯವಾಗಿಬಿಟ್ಟಿದೆ ಕೂಡ. ಜನರು ಕೂಡ ತಮ್ಮ ಸುತ್ತಮುತ್ತಲಿನ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವ ಬದಲು ಆನ್‌ಲೈನ್‌ನಲ್ಲಿ ಕಾಣಸಿಗುವ ವಸ್ತುಗಳತ್ತ ಮೊರೆಹೊಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ನಮ್ಮ ಅಕ್ಕಪಕ್ಕದ, ನಮ್ಮ ಪಟ್ಟಣದ ಅಂಗಡಿಗಳಿಂದ ಖರೀದಿಸಿ ಅವರಿಗೆ ನೆರವಾಗುವ ಅವಶ್ಯಕತೆ ಇಂದಿದೆ.
ದೀಪಾವಳಿಯ ಪ್ರಣತಿಗಳನ್ನು ರಸ್ತೆ ಬದಿಯಲ್ಲಿ ಮಾರುವವರಿಂದ ಖರೀದಿ ಮಾಡಿ ಸ್ಥಳೀಯ ಕುಂಬಾರಿಕೆಯಂತಹ ಕರಕುಶಲ ಕೈಗಾರಿಕೆಗಳನ್ನು ಬೆಳೆಸೋಣ. ಬೀದಿಬದಿ ಹಣ್ಣು, ತರಕಾರಿ ಮಾರುವ ಮುಪ್ಪಿನ ವಯಸ್ಸಿನ ಮಾರಾಟಗಾರರ ಮನಸ್ಥಿತಿಯನ್ನು ಒಮ್ಮೆ ಮಾನವೀಯ ದೃಷ್ಟಿಯಿಂದ ನೋಡಿದಾಗ ಗೊತ್ತಾಗುತ್ತದೆ ಅವರ ಕಷ್ಟ ಎಂಥದ್ದು ಎಂದು. ಇಂತಹ ನಿಷ್ಕಲ್ಮಶ ಮುಗ್ಧ ಮನಸ್ಸಿನ ಬಡ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿ ಮಾಡಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸೋಣ. ಅವರಿಗೂ ಹಬ್ಬದ ಸಿಹಿಯನ್ನು ಹಂಚೋಣ.
ಫೈವ್‌ಸ್ಟಾರ್ ವಿದೇಶಿ ಮಾಲಕತ್ವದ ಹೊಟೇಲ್‌ಗಳಲ್ಲಿ ತಿನ್ನುವ ಬದಲು ನಮ್ಮ ಹತ್ತಿರದ ಸಣ್ಣ ಸಣ್ಣ ಹೊಟೇಲ್‌ಗಳಲ್ಲಿ ತಿಂದು ಅವರು ಕುಟುಂಬಕ್ಕೂ ನೆರವಾಗಿ ಮಾನವೀಯತೆಯನ್ನು ಮೆರೆಯೋಣ. ಈ ಸಣ್ಣ ಪುಟ್ಟ ಹೊಟೇಲ್‌ಗಳ ಶುಚಿ-ರುಚಿ ಸ್ಟಾರ್ ಹೊಟೇಲ್‌ಗಳಲ್ಲಿ ಸಿಗಲು ಸಾಧ್ಯವಿಲ್ಲ. ಲಾಕ್‌ಡೌನ್ ಸಮಯದಲ್ಲಿ ಹಸಿದ ಬಡ ಜನರಿಗೆ ಊಟ ಕೊಟ್ಟವರು ಇದೇ ಸಣ್ಣ ಪುಟ್ಟ ಸ್ಥಳೀಯ ಅಂಗಡಿಗಳೇ ಹೊರತು ವಿದೇಶಿ ಬ್ರ್ಯಾಂಡ್‌ಗಳಲ್ಲ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಮಾರುವವರು ಬಡವರ ಬಗ್ಗೆ ಒಂದು ಕ್ಷಣವಾದರೂ ಯೋಚಿಸಿದ್ದಾರಾ ಎಂದು ಒಮ್ಮೆ ಬಿಡುವಾದಾಗ ನೀವೆ ಯೋಚಿಸಿ ನೋಡಿ.
ಇಂತಹ ಮಾನವೀಯತೆ ಮೆರೆದಂಥಹ ನಮ್ಮವರಿಗೆ ಹಬ್ಬ ಹರಿದಿನಗಳಲ್ಲಿ ಸಹಾಯ ಮಾಡಲಾಗದಿದ್ದರೂ ಪರವಾಗಿಲ್ಲ. ನಮ್ಮ ಸ್ಥಳೀಯ ಅಂಗಡಿಗಳಿಗೆ ಹೋಗಿ ಖರೀದಿ ಮಾಡೋಣ, ಅವರಿಗೆ ಒಂದಷ್ಟು ಲಾಭ ಮಾಡೋಣ. ಅದೆಷ್ಟೇ ತೊಂದರೆಯಾದರೂ ಪರವಾಗಿಲ್ಲ ಸ್ವದೇಶಿ ವಸ್ತುಗಳನ್ನೇ ಬಳಕೆ ಮಾಡೋಣ. ಚೀನ ಸಹಿತ ಇನ್ನಿತರ ವಿದೇಶಿ ವಸ್ತುಗಳ ಮಾರಾಟ, ಖರೀದಿಗೆ ಕಿಂಚಿತ್ತೂ ಮನಸ್ಸು ಮಾಡುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡೋಣ. ಎಲ್ಲರೂ ಒಂದಾಗಿ ದೇಶೀಯವಾಗಿ ಸಿಗುವ ವಸ್ತುಗಳನ್ನು ಖರೀದಿ ಮಾಡೋಣ. ಭಾರತದ ಆರ್ಥಿಕತೆಗೆ ಈ ಮೂಲಕ ಸೇವೆ ಸಲ್ಲಿಸೋಣ.
-ಶ್ರೀನಿವಾಸ ಎನ್. ದೇಸಾಯಿ
ಶಿಕ್ಷಕ, ವಿದ್ಯಾನಗರ ಕುಷ್ಟಗಿ