ಬುದ್ಧಿವಂತರು ಮೌನಿಗಳಾದರೆ ಮೂರ್ಖರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಹೌದು ಈ ಮಾತನ್ನು ಹೇಳಿದವರು ನೆಲ್ಸನ್ ಮಂಡೇಲಾ. ನಾವು ಈಗಾಗಲೇ ಕೇಳಿರಬಹುದು ತುಂಬಿದ ಕೊಡ ತುಳುಕುವುದಿಲ್ಲ. ಒಂದು ಖಾಲಿ ಕೊಡದಲ್ಲಿ ಏನಾದರಿದ್ದರೆ ಅದು ಬಹಳ ಶಬ್ದವನ್ನು ಉಂಟುಮಾಡುತ್ತದೆ. ಅದೇ ತುಂಬಿದ ಕೊಡ ಯಾವುದೇ ತರಹದ ಶಬ್ದವನ್ನು ಮಾಡುವುದಿಲ್ಲ ಎಂದು.
ಇದರ ಹಿಂದಿರುವ ಒಳಾರ್ಥ ಏನೆಂದರೆ ತುಂಬಿದ ಕೊಡ ಮತ್ತು ಖಾಲಿ ಕೊಡವನ್ನು ನಮ್ಮ ಸುತ್ತಮುತ್ತ ದಿನನಿತ್ಯ ಗಮನಿಸಬಹುದು. ಖಾಲಿ ಕೊಡಗಳು ಅತೀ ಹೆಚ್ಚು ಮಾತನಾಡುತ್ತಾ, ಕಿರುಚಾಡುತ್ತಾ ನನಗೆ ಎಲ್ಲ ಗೊತ್ತು, ನನಗೆ ಹೆಚ್ಚಿನ ಅನುಭವವಿದೆ, ನಾನು ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಾ, ನಾನು ಎಲ್ಲವನ್ನೂ ಮಾಡಬಲ್ಲೆ, ನನ್ನಿಂದಲೇ ಎಲ್ಲ ಎಂದು ಅಬ್ಬರಿಸುತ್ತಾ, ತಮ್ಮ ಕೆಲಸಕ್ಕಿಂತ ಬೇಡದ ಮಾತುಗಳಲ್ಲೇ ತೊಡಗಿಸಿಕೊಂಡಿರುತ್ತಾರೆ.
ಆದರೆ ತುಂಬಿದ ಕೂಡವಾದ ಜ್ಞಾನಿಗಳು ಅಥವಾ ಬುದ್ಧಿವಂತರು ಅತೀ ಕಡಿಮೆ ಮಾತನಾಡುತ್ತಾ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರು ಮಾತನಾಡುವುದು ತುಂಬಾ ಮುಖ್ಯ ಏಕೆಂದರೆ ಅವರು ಮಾತನಾಡುವ ಪದಗಳಲ್ಲಿ ತೂಕವಿರುತ್ತದೆ ಮತ್ತು ಅರ್ಥಪೂರ್ಣವಾಗಿರುತ್ತದೆ. ಅವರು ಯಾವುದೇ ಒಂದು ಪದ ಬಳಕೆ ಮಾಡುವಾಗ, ಕೆಲಸ ಮಾಡುವಾಗ ಯೋಚಿಸಿ ಮಾಡುತ್ತಾರೆ.
ಮಾತಿಗಿಂತ ತಮ್ಮ ಕೆಲಸಗಳಲ್ಲಿ ಉತ್ತರವನ್ನು ನೀಡುತ್ತಾರೆ. ಹೌದು ಇದು ಒಳ್ಳೆಯದೇ ಆದರೆ ಬುದ್ಧಿವಂತರು ಮಾತನಾಡಬೇಕಾದ ಸ್ಥಳದಲ್ಲಿ ಮಾತನಾಡದೆ ಮೂರ್ಖರ ಚೇಷ್ಟೆಯನ್ನು ನೋಡುತ್ತಾ ನನಗೆ ಯಾಕೆ ಬೇಕು ಎಂದು ಕುಳಿತರೆ. ಮೂರ್ಖರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಬುದ್ಧಿವಂತರು, ತಿಳಿದವರು ತಮ್ಮ ಅಗತ್ಯವಿರುವ ಸ್ಥಳದಲ್ಲಿ ಮಾತನಾಡಿ ಮೂರ್ಖರ ಬಾಯಿಯನ್ನು ಮುಚ್ಚಿಸುವುದು ಉತ್ತಮ.
- ಸೋನು ಎಸ್.
ಬೆಂಗಳೂರು