Advertisement

Seven Samurai: ಸೆವೆನ್‌ ಸಮುರಾಯ್‌

04:27 PM Jul 27, 2024 | Team Udayavani |

1954ರಲ್ಲಿ ರೂಪಿತವಾದ ಚಲನಚಿತ್ರ. ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಪ್ರಮುಖ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಪಾನಿನ ಅಕಿರಾ ಕುರಸೋವಾ ನಿರ್ದೇಶಿಸಿದ ಚಿತ್ರ. ಜಪಾನಿನ ಪುರಾಣದ, ಇತಿಹಾಸದ ಒಂದು ಅಧ್ಯಾಯವನ್ನು ತೆಗೆದು, ಒಪ್ಪ ಓರಣ ಮಾಡಿ ಪರದೆ ಮೇಲೆ ತಂದ ಕೀರ್ತಿ ಕುರಸೋವಾರದ್ದು. ಒಂದು ಹೋರಾಟದ ಕಥನ.

Advertisement

ಮೂಲತಃ ಕುರಸೋವಾರಿಗೆ ಕಥನವನ್ನು ನಿರಾಡಂಬರತೆಯಿಂದ, ಮನ ತಟ್ಟುವ ಹಾಗೆ, ಆಲೋಚಿಸುವಂತೆ ಮಾಡುವುದು ಸಿದ್ಧಿಸಿದ ಕಲೆ. ಅದು ಅವರ ಶ್ರೇಷ್ಠತೆಯೂ ಸಹ. ಸೆವೆನ್‌ ಸಮುರಾಯ್‌ ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ.

ಕಥೆಯ ನೆಲೆಯಲ್ಲಿ ಹೇಳುವುದಾದರೆ ವಿಶೇಷವೇನಿಲ್ಲ. ಪರ್ವತದ ತಪ್ಪಲಿನ ಒಂದು ಹಳ್ಳಿ. ಅಲ್ಲಿನ ಜನರಿಗೆ ಕೃಷಿಯೇ ಆಧಾರ. ಪರಿಸ್ಥಿತಿ ಹೀಗಿರುವಾಗ ಪಕ್ಕದ ಮತ್ತೂಂದು ಪ್ರದೇಶದ ಡಕಾಯಿತರ ತಂಡದ ಕಣ್ಣು ಹಳ್ಳಿಯ ಮೇಲೆ ಬೀಳುತ್ತದೆ. ಸರಿಯಾದ ಸಮಯಕ್ಕೆ ಕಾದು ಹಳ್ಳಿಯ ಮೇಲೆ ಮುಗಿ ಬೀಳಲು ಯೋಜನೆ ಹೂಡುತ್ತಾರೆ. ಈ ಸಂಗತಿ ಹೇಗೋ ಆ ಹಳ್ಳಿಯ ಮುಖ್ಯಸ್ಥನಿಗೆ ತಿಳಿಯುತ್ತದೆ. ಮುಂದಾಗುವ ಅನಾಹುತವನ್ನು ಕಲ್ಪಿಸಿಕೊಳ್ಳುವ ಮುಖ್ಯಸ್ಥ ಹೇಗಾದರೂ ಅದನ್ನು ತಡೆಯಲು ಯೋಚಿಸುತ್ತಾನೆ.

ಅದರಂತೆ ಹಳ್ಳಿಯ ಹಲವರೊಂದಿಗೆ ಚರ್ಚಿಸಿ ಪ್ರತಿ ಯೋಜನೆ ರೂಪಿಸುತ್ತಾರೆ. ಈ ಡಕಾಯಿತರಿಗೆ ಪ್ರತಿ ಹೋರಾಟ ನೀಡಿ ಸೆಣಸಬಲ್ಲ ಸಮರವೀರನನ್ನು ಹುಡುಕತೊಡಗುತ್ತಾರೆ. ಆದರೆ ಅವರಿಗೆ ಕೊಡುವಷ್ಟು ಹಣ ಇರುವುದಿಲ್ಲ. ಹಾಗಾಗಿ ಬಡ ಸಮರ ವೀರರ ಹುಡುಕಾಟ ನಡೆಯುತ್ತದೆ. ಕೊನೆಗೂ ಒಬ್ಬ ಅನುಭವಸ್ಥ ಸಮರವೀರ ಸಿಗುತ್ತಾನೆ. ಅವನು ಏಳು ಜನರ ತಂಡವನ್ನು ಕಟ್ಟುತ್ತಾನೆ. ಆ ಏಳು ಸಮರ ವೀರರೇ ಹಳ್ಳಿಯನ್ನು ಕಾದು ಡಕಾಯಿತರನ್ನು ಹತ್ತಿಕ್ಕುತ್ತಾರೆ.  ಇದು ಕಥೆಯ ನೆಲೆ.

ಇದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಕುರಸೋವಾ, ಇಡೀ ಸಿನಿಮಾದುದ್ದಕ್ಕೂ ರೋಚಕತೆ ಉಳಿಸಿಕೊಂಡು ರೂಪಿಸಿದ್ದು ವಿಶೇಷ.

Advertisement

ಈ ಸಿನಿಮಾ ಬರೀ ಒಂದು ಸಿನಿಮಾವಾಗಿ ಉಳಿಯಲಿಲ್ಲ. ಪಾಶ್ಚಿಮಾತ್ಯ ದೇಶಗಳ ಸಿನಿಮಾ ನಿರ್ದೇಶಕರ ಮೇಲೂ ಈ ಸಿನಿಮಾ ಪ್ರಭಾವ ಬೀರಿತು. ಅದರ ಪರಿಣಾಮವಾಗಿ ಹಲವಾರು ಸಿನಿಮಾಗಳು ಈ ಕಥೆಯ ಎಳೆಯನ್ನು ಹಿಡಿದುಕೊಂಡು ರೂಪಿತವಾದವು.

ಹಲವಾರು ಪುರಸ್ಕಾರ ಪಡೆದ ಈ ಚಿತ್ರ ಆಗಿನ ಕಾಲದಲ್ಲಿ ಜಪಾನಿನಲ್ಲಿ ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ. ಹಾಗೆಯೇ ಯಶಸ್ವಿಯಾಗಿ ಜನ ಮೆಚ್ಚುಗೆ ಹಾಗೂ ಗಳಿಕೆ ಗಳಿಸಿದ ಚಿತ್ರವೂ ಇದು.

ಚಿತ್ರದಲ್ಲಿ ನಟಿಸಿದ ಟೊಶಿರೊ ಮಿಫ‌ುನ್‌, ತಕಾಶಿ ಶಿಮುರಾ, ಸಿಜಿ ಮಿಯಾಗುಚಿ, ಟೊಶಿಯೊ ತಕಾಹಾರ, ಯೋಶಿಯೊ ಇನಾಬಾ, ಇಸಾವೊ ಕಿಮುರಾ, ಡೈಸುಕೆ ಕ್ಯಾಟೊ ಸಮರವೀರರಾಗಿ ಅಭಿನಯಿಸಿದ್ದಾರೆ.

ಕನ್ನಡದಲ್ಲೂ ಇದರ ಪ್ರಭಾವದಿಂದ ಚಿತ್ರವೊಂದು ಮೂಡಿಬಂದಿತು. ಗಿರೀಶ್‌ ಕಾರ್ನಾಡರು ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ ಇದರ ಪ್ರಭಾವದಲ್ಲಿ ಮೂಡಿದೆ. ಮತ್ತೂಬ್ಬ ಪ್ರತಿಭಾವಂತ ನಟ ಶಂಕರನಾಗ್‌ ಇದರ ನಾಯಕ ನಟರಾಗಿದ್ದರು.

70 ವರ್ಷಗಳ ಬಳಿಕವೂ ಇಂದಿಗೂ ಪ್ರಸ್ತುತತೆ ಮತ್ತು ರೋಚಕತೆ ಉಳಿಸಿಕೊಂಡಿರುವ ಚಲನಚಿತ್ರ. ಜಗತ್ತಿನ ಅತ್ಯುತ್ತಮ ನೂರು ಚಲನಚಿತ್ರಗಳಲ್ಲಿ ಅಗ್ರಸ್ಥಾನ ಉಳಿಸಿಕೊಂಡಿರು ವುದು ಈ ಚಿತ್ರದ ಹೆಚ್ಚುಗಾರಿಕೆ. ತಪ್ಪದೇ ವೀಕ್ಷಿಸಿ.

ಅಪ್ರಮೇಯ

Advertisement

Udayavani is now on Telegram. Click here to join our channel and stay updated with the latest news.

Next