Advertisement

ಬಸ್‌ ಹತ್ತುವ ಮೊದಲಿದ್ದ ʼಕನಸು’ಬಳಿಕ ಏನಾಯಿತು?

10:21 PM Jul 26, 2020 | Karthik A |

ಬಸ್‌ ಪ್ರಯಾಣದ ನೆನಪುಗಳನ್ನು ಮೆಲುಕು ಹಾಕುವವರಲ್ಲಿ ನಾನೂ ಒಬ್ಬಳು. ಬಸ್‌ನಲ್ಲಿ ಸಾಮಾನ್ಯವಾಗಿ ಎಲ್ಲರೂ ಸಂಚರಿಸಿರುತ್ತಾರೆ.

Advertisement

ಸಿಹಿಕಹಿ ಅನುಭವಗಳಿಗೆ ಸಾಕ್ಷಿಯಾಗಿರುತ್ತಾರೆ. ಅಂದಹಾಗೆ ನನಗೆ ಬಸ್‌ನಲ್ಲಿ ಪ್ರಯಾಣಿಸಿದ ಒಂದು ಸಂದರ್ಭ ನೆನಪಿಗೆ ಬರುತ್ತಿದೆ.
ನಾನು ಮತ್ತು ಅಕ್ಕ ಇಬ್ಬರು ಅಜ್ಜಿಮನೆಗೆ ಹೊರಟ್ಟಿದ್ದೆವು.

ಬಸ್‌ಗಾಗಿ ಸ್ಟಾಂಡಿನಲ್ಲಿ ಕಾತುರದಿಂದ ಕಾಯುತ್ತಿದ್ದೆವು. ಕಡೆಗೂ ಬಸ್‌ ಬಂತು. ಬಸ್‌ ಬಂದು ನಿಂತಿದ್ದೇ ತಡ. ಕಂಡಕ್ಟರ್‌ ಬಸ್ಸಿಂದ ಕೆಳಗಿಳಿದು ಬೊಬ್ಬಿಡಲು ಶುರು ಮಾಡಿದ. ಬಲೆ…ಬಲೆ… ಬಲೆ… ರೈಟ್‌ ಪೋಯಿ (ಕರಾವಳಿಯ ತುಳು ಭಾಷೆಯಲ್ಲಿ: ಬನ್ನಿ ಬನ್ನಿ ಬನ್ನಿ, ಸರಿ ಹೋಗೋಣ) ಎಂದು.

ಮೊದಲೇ ಆ ಬಸ್‌ನಲ್ಲಿ ತುಂಬಾ ರಶ್‌ ಇತ್ತು. ಅಂತೂ ತುಂಬಾ ಕಷ್ಟಪಟ್ಟು ಬಸ್‌ನೊಳಗೆ ಸೇರಿದೆವು. ಬೊಂಬೆಯ ಹಾಗೆ ನಿಲ್ಲಬೇಕಾದ ಪರಿಸ್ಥಿತಿ. ಕೈ ಕಾಲು ಅಲುಗಾಡಿಸಲೂ ಸಾಧ್ಯವಾಗದಷ್ಟು ರಶ್‌. ಇದರೆಡೆಯಲ್ಲಿ ಒಮ್ಮೆ ಮುಂದೆಯಿಂದ ಬಂದು “ಪಿರವ್‌ ಪೋಲೆ'(ಹಿಂದಕ್ಕೆ ಹೋಗಿ), ಹಿಂದೆಯಿಂದ ಬಂದು “ದುಂಬು ಪೋಲೆ’ (ಮುಂದಕ್ಕೆ ಹೋಗಿ)ಎಂದು ಕಿರುಚುವ ಕಂಡಕ್ಟರ್‌.

ಆದರೆ ಈ ಇಕ್ಕಟ್ಟಿನಲ್ಲಿ ಒಳಗಿರುವ ಪ್ರಯಾಣಿಕರು ಮಾತ್ರ ಸ್ತಬ್ಧ. ಗೋಣಿ ಚೀಲಕ್ಕೆ ಲದ್ದಿ ತುಂಬಿಸಿದ ರೀತಿಯಲ್ಲಿ ಜನರನ್ನು ಬಸ್‌ಗೆ ತುಂಬಿಸಲಾಗಿತ್ತು. ಒಮ್ಮೆ ಅಜ್ಜಿಮನೆಗೆ ತಲುಪಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಸುಸ್ತಾಗಿತ್ತು. ಸಹಪ್ರಯಾಣಿಕರ ಜತೆ ನಾವಿಬ್ಬರೂ ಅಪ್ಪಚ್ಚಿಯಾಗಿದ್ದೆವು.

Advertisement

ಬಸ್‌ ಏರುವ ಮೊದಲು ಇದ್ದ ಕಿಟಕಿ ಬಳಿ ಕುಳಿತುಕೊಳ್ಳುವ ಕನಸು ಬಸ್‌ ಬಂದಾಗಲೇ ನುಚ್ಚುನೂರಾಗಿತ್ತು. ಬಸ್‌ ಕಿಟಕಿ ಸೈಡ್‌ ಕುಳಿತು ಇಯರ್‌ ಫೋನ್‌ ಹಾಕಿ ಹಾಡು ಕೇಳಬೇಕು. ತಣ್ಣನೆ ಗಾಳಿಗೆ ಮೈಯೊಡ್ಡಿ ಅಕ್ಕನ ಜತೆ ಸ್ವಲ್ಪ ಹೊತ್ತು ಹರಟೆ ಹೊಡೆಯಬೇಕು; ಎಂಬೆಲ್ಲ ಕನಸುಗಳು ಬಳಿಕ ಹತ್ತಿರ ಸುಳಿಯಲಿಲ್ಲ. ತಣ್ಣನೆ ಗಾಳಿಯ ಸುಳಿವು ಇರಲಿಲ್ಲ. ತ್ರಾಸದಾಯಕ ಪ್ರಯಾಣ ಅದಾಗಿತ್ತು.

ಅಂತು ಅಜ್ಜಿ ಮನೆ ಹತ್ತಿರದ ಬಸ್‌ ಸ್ಟಾಪ್‌ ತಲುಪಿತು. ಏನೋ ಮಹತ್ತರವಾದ ಸಾಹಸ ಮಾಡಿ ಬಂದ ಅನುಭವವಾಯಿತು. ಆದರೆ ಇದರಲ್ಲೂ ಒಂದು ಮರೆಯಲಾಗದ ಘಟನೆ ಇದೆ. ಮನೆಯಿಂದ ಮೇಕಪ್‌ ಮಾಡಿ ಬಂದು ಬಸ್‌ನ ರಶ್‌ನಲ್ಲಿ ಎಲ್ಲ ಹಾಳಾಗಿ ಹೋಗಿದ್ದವು. ಯಾವತ್ತೂ ನಿಮ್ಮ ಪ್ರಯಾಣ ಹೇಗಿತ್ತು? ಎಂದು ಕೇಳುತ್ತಿದ್ದ ನನ್ನ ಮನೆಯವರು ಆ ದಿನದ ನಮ್ಮಿಬ್ಬರ ಅವತಾರ ನೋಡಿಯೇ ಅರಿತುಬಿಟ್ಟಿದ್ದರು.

ಸರಕಾರಿ ಬಸ್‌ಗಳಲ್ಲಿ ಬರೆದಿರುವ ಮಂಕು ತಿಮ್ಮನ ಕಗ್ಗದ “ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ’ ಎಂಬ ಸಾಲು ನನಗೆ ಬಸ್‌ ಇಳಿಯುವ ವೇಳೆ ಅನುಭವಕ್ಕೆ ಬಂದಿತ್ತು.

 ಅಂಜಲಿ ಕೆ. ಸೈಂಟ್‌ ಅಲೋಶಿಯಸ್‌ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next