ಕಾಲೇಜು ಮುಗಿಸಿ ಬಂದು ಕನ್ನಡಿಯ ಮುಂದೆ ಕುಳಿತಿದ್ದೆ. ಕಣ್ಣಲ್ಲಿ ಕಣ್ಣು ಇಟ್ಟು ನನ್ನ ಬಿಂಬವನ್ನೇ ನೋಡುತಿದ್ದೆ, ಮುಖದಲ್ಲಿ ಕಲೆಗಳನ್ನು ನೋಡಿ ಇದೆಲ್ಲರಿಗೂ ಇರುತ್ತೆ ಎಲ್ಲರು ಚಂದವಾಗಿ ಇರಲು ಸಾಧ್ಯವೇ ಇಲ್ಲ ಎಂದು ನುಸುನಕ್ಕೆ. ನನ್ನನ್ನು ನಾನು ಒಪಿಕ್ಕೊಳುವ ಮೊದಲ ಹೆಜ್ಜೆ ದಾಟಿದೆ. ಆದರೆ ಈ ಕಲೆಗಳೆಲ್ಲ ಹೋದರೆ ನಾನು ಸುಂದರವಾಗಿ ಕಾಣಬಹುದಲ್ಲವೇ? ನಾನು ಚಂದ ಎಂದು ಎಲ್ಲರು ಹೇಳುತ್ತಾರೆ, ಆಹ್! ಎಷ್ಟು ಖುಷಿಕೊಡುತ್ತದೆ ಈ ಒಂದು ಪದದ ಮೆಚ್ಚುಗೆ! ಇನ್ನು ಸ್ವಲ್ಪ ಬೆಳ್ಳಗಿದಿದ್ದರೆ ಇನ್ನೂ ಚಂದ ಕಾಣಬುಹುದಾ? ಛೇ!ಇಲ್ಲ, ಇಲ್ಲ… ನಾನು ಹೇಗಿದ್ದೇನೋ ಹಾಗೆ ಚಂದ. ಬೇರೆಯವರಿಗೆ ಹೇಗೆ ಕಾಣುತ್ತೇನೆ ಎಂದು ನಾನೇಕೆ ಯೋಚಿಸಬೇಕು? ಇನ್ನು ನನ್ನ ಕ್ಲಾಸ್ಸಿನಲ್ಲಿ ಕೊನೆಯ ಬೆಂಚಿನಲ್ಲಿ ಇರುವವಳ ಹಾಗೆ ಇದಿದ್ದರೆ ಯಾರು ನನ್ನನ್ನು ನೋಡುತ್ತಲೇ ಇರಲಿಲ್ಲ. ಚೈತ್ರಾ! ನೀನು ಹೀಗೆ ಯೋಚಿಸುತ್ತಿದೀಯಾ? ನೀನೇ ಹೇಳಿದ್ದೆ ಎಲ್ಲರು ಚಂದ ಎಂದು, ಇವಾಗೇನಾಯಿತು?
ಮರಳಿ ಪ್ರಜ್ಞೆ ಬಂತು, ಇವಾಗ ಮಾತನಾಡಿದ್ದು ಯಾರು? ನನ್ನ ಪ್ರತಿಬಿಂಬ? ಗೊತ್ತಿಲ್ಲ, ಆದರೆ ನಾನು ಹಾಗೆ ಯೋಚಿಸಬಾರದಿತ್ತು. ಕಣ್ಣಲ್ಲಿ ನೀರಿನ ಕೊಡ ತುಂಬಿ ಉಪ್ಪಿನ ಸರೋವರವೇ ಹರಿಯಿತು. ನಾನೇಕೆ ಅಳುತ್ತಿದ್ದೆ? ಅವಳ ಬಗ್ಗೆ ಹಾಗೆ ಯೋಚಿಸಿದಕ್ಕೆ? ಅಥವಾ… ನನ್ನನ್ನು ನಾನೇ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು, ಬಹುಶಃ ಎರಡು ಕಾರಣವಿರಬಹುದು. ಬಲಗೈಯ್ಯನ್ನು ಕನ್ನಡಿಯತ್ತ ಎತ್ತಿ, ಅವಳ ಕಣ್ಣೀರನ್ನು ಒರೆಸಲು ಹೋದೆ, ಏನು ಪ್ರಯೋಜನ? ನನ್ನ ಕಣ್ಣಲ್ಲಿ ನೀರು, ಅದನ್ನು ಒರೆಸುಕೊಂಡರೆ ಅವಳೂ ಒರೆಸಿಕೊಳ್ಳುತ್ತಾಳೆ. ಬಹುಶಃ ಇದೇ ರೀತಿ ನನ್ನ ತಲೆಯಲ್ಲಿ ನನ್ನ ಬಗ್ಗೆ ಇರುವ ಭಾವನೆಯೇ ನನ್ನ ಪ್ರತಿಬಿಂಬದಲ್ಲಿ ಕಾಣುತ್ತಿದ್ದರೆ?
ಕತ್ತಲೆ ಆಗುತಿತ್ತು ಹಗುರವಾಗಿ ಆಕಾಶ ಬೂದಿ ಬಣ್ಣ ಹೊಂದುತಿತ್ತು, ಅಲ್ಲೇ ಕುಳಿತಿದ್ದೆ. ಹಗುರವಾಗಿ ನನ್ನ ನ್ಯೂನತೆಗಳೆಲ್ಲವೂ ಕತ್ತಲೊಂದಿಗೆ ಮಾಯವಾಗುತ್ತಿದ್ದವು. ಕತ್ತಲಾಗುತ್ತ ನನ್ನ ಪ್ರತಿಬಿಂಬವೂ ಹೋದಳು. ಕತ್ತಲಾದ ಅನಂತರ ಎಲ್ಲರೂ ಒಂದೇ ಅಲ್ಲವೇ? ಕತ್ತಲಲ್ಲಿ ಯಾರು ಚಂದ ಎಂದು ಹೇಗೆ ಗೊತ್ತಾಗುತ್ತದೆ? ಎಂದು ಯೋಚಿಸಿದೆ. ನಾಳೆ ಮತ್ತೆ ಇದೇ ಜಾಗದಲ್ಲಿ, ಇದೇ ಪ್ರಶ್ನೋತ್ತರಗಳೊಂದಿಗೆ ಭೇಟಿಯಾಗೋದು ಖಚಿತ ಎಂದು ನಿಟ್ಟುಸಿರಿನೊಂದಿಗೆ ಅಲ್ಲಿಂದ ಎದ್ದೆ.
ಚೈತ್ರಾ ಕೆ.,
ಬೆಂಗಳೂರು