ಹೆಣ್ಣು ಮಕ್ಕಳ ಕಾಲಿಗೆ ಆಕರ್ಷಕವಾಗಿ ಕಾಣುವು ದೆಂದರೆ ಅದು ಗೆಜ್ಜೆ. ಅದರ ಸದ್ದು ಸಂಪೂರ್ಣ ಮನೆಯನ್ನೇ ಆವರಿಸುತ್ತಿತ್ತು. ಮಕ್ಕಳೆಲ್ಲಾ ಅದನ್ನು ಹಾಕಿಕೊಂಡು ಮನೆಯಲ್ಲಿ ನಡೆದುಕೊಂಡು ಹೋಗುವುದಕ್ಕಿಂತ ಹೆಚ್ಚಾಗಿ ನಲಿದುಕೊಂಡೆ ಇರುತ್ತಿದ್ದರು. ಏಕೆಂದರೆ ಮಕ್ಕಳಿಗೊಂದು ಗೆಜ್ಜೆಯನ್ನು ಹಾಕುವುದೇ ಒಂದು ಖುಷಿಯಾಗಿತ್ತು.
ಹಾಗೆಯೇ ಎಷ್ಟೋ ಬಾರಿ ಗೆಜ್ಜೆಯು ನನ್ನ ಬಳಿ ಕಣ್ಣ ಮುಚ್ಚಾಲೆ ಆಡಿದ್ದೂ ಇದೆ. ಕಾರಣ, ಒಂದು ಕಾಲಲ್ಲಿ ಗೆಜ್ಜೆ ಇದ್ದರೆ ಇನ್ನೊಂದು ಕಾಲಲ್ಲಿ ಇರುವುದಿಲ್ಲ. ಗಾಬರಿಯಿಂದ ಅದನ್ನು ಹುಡುಕುವುದು ಒಂದು ಕಡೆಯಾದರೆ, ಮನೆಯವರ ಬೈಗುಳ ಇನ್ನೊಂದು ಕಡೆ. ಆದರೂ ಎಲ್ಲ ಸೇರಿ ಹುಡುಕಿದಾಗ ಕೊನೆಗೆ ಸಿಗುತ್ತಿತ್ತು. ನಾನಂತೂ ಸಣ್ಣವಳಿರುವಾಗ ಗೆಜ್ಜೆಯನ್ನು ತುಂಬಾನೇ ಇಷ್ಟ ಪಡುತ್ತಿದ್ದೆ. ಮತ್ತೆ ಯಾವಾಗ ಕಳೆದು ಹೋಗುತ್ತದೆ ಎಂಬ ಭಯ. ಗೆಜ್ಜೆ ಇದೆಯೋ ಇಲ್ಲವೋ ಎಂದು ಮತ್ತೆ ಮತ್ತೆ ಕಾಲನ್ನು ನೋಡವುದು ಅಭ್ಯಾಸವಾಗಿ ಹೋಗಿತ್ತು.
ಒಂದು ಬಾರಿ ಗೆಜ್ಜೆಯು ನನ್ನೊಂದಿಗೆ ಕಣ್ಣಾ ಮುಚ್ಚಾಲೆ ಆಡಿ, ನನ್ನಿಂದ ದೂರವಾಗಿಯೇ ಹೋಯಿತು. ಆ ಗೆಜ್ಜೆಯ ನಂಟು ಬಹಳಷ್ಟಿತ್ತು. ಅದು ಕಳೆದು ಹೋದ ಅನಂತರ ನನಗೆ ಎಲ್ಲಿಗೂ ಹೋಗಲು ಇಷ್ಟವಾಗಿತ್ತಿರಲಿಲ್ಲ. ಯಾಕೆಂದರೆ ಮೊದಲೆಲ್ಲ ನಾನು ಎಲ್ಲಿಗೆ ಹೋದರು ನನ್ನ ಹೆಜ್ಜೆ ಹೆಜ್ಜೆಯಲ್ಲಿ ಅದರ ಸುಂದರವಾದ ಸದ್ದು ಕೇಳಿಸುತ್ತಿತ್ತು. ಪ್ರತಿಯೊಬ್ಬರೂ ನನ್ನ ಗೆಜ್ಜೆಯನ್ನು ಹೊಗಳುವಾಗ ಏನೋ ಒಂದು ತರ ಖುಷಿಯಾಗುತ್ತಿತ್ತು. ಅದು ನನ್ನಿಂದ ಕಳೆದು ಹೋದ ಅನಂತರ, ಅದರಂತೆ ಇರುವ ಇನ್ನೊಂದು ಗೆಜ್ಜೆ ಬಂದರೂ ಅದು ಯಾವತ್ತೂ ನನ್ನ ಮನಸ್ಸಿಗೆ ಹಿಡಿಸಲಿಲ್ಲ. ಆದರೂ ಆ ಗೆಜ್ಜೆಯನ್ನು ಹಾಕಿಕೊಳ್ಳುತ್ತಿದ್ದೆ. ಅದು ಸ್ವಲ್ಪ ದಿನಗಳಲ್ಲಿ ನನ್ನ ಕಾಲಿನಿಂದ ದೊಡ್ಡದಾಗಿ ಬೀಳಲು ಶುರುವಾಗುತ್ತಿತ್ತು. ಪಾಪ ಅದನ್ನು ನಾನು ಅಷ್ಟು ಇಷ್ಟಪಟ್ಟಿರದ ಕಾರಣವಾಗಿರಬಹುದು, ಅದು ಯಾವಾಗಲೂ ನನ್ನ ಕಾಲಿನಿಂದ ಬೀಳುತ್ತಿತ್ತು. ಹಾಗಾಗಿ ಅದನ್ನು ತೆಗೆದಿಟ್ಟೆ, ಆದರೆ ಅದನ್ನು ಈಗಲೂ ಜೋಪಾನವಾಗಿಯೇ ಇಟ್ಟಿದ್ದೇನೆ.
ಗೆಜ್ಜೆ ಎಂದ ತತ್‌ಕ್ಷಣ ಮೊದಲು ನೆನಪಿಗೆ ಬರುವುದು ಅದರ ಘಲ್-ಘಲ್ ಸದ್ದು. ಇದು ಹೆಣ್ಣು ಮಕ್ಕಳಿಗೆ ಬಹಳ ಪ್ರಿಯವಾದುದು ಎಂದರೂ ತಪ್ಪಾಗಲಾರದು. ಹಬ್ಬ ಹರಿದಿನಗಳಲ್ಲಿ ಹೆಣ್ಣು ಮಕ್ಕಳು ಗೆಜ್ಜೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಾರೆ. ಅದು ಅವರಿಗೊಂದು ಸಂಭ್ರಮದ ಸಮಯ. ಗೆಜ್ಜೆಯ ಸದ್ದನ್ನು ಮನೆಯೆಲ್ಲಾ ತುಂಬಿ ಓಡಾಡುವ ಸಂತೋಷ ಹೆಣ್ಣು ಮಕ್ಕಳದು.
ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಯಾವುದೇ ಸಂಭ್ರಮ ಆಚರಣೆಗಳಿದ್ದರೂ, ಹೆಣ್ಣು ಮಕ್ಕಳಿಗೊಂದು ಖುಷಿ. ಕಾರಣ ಹೊಸ ಗೆಜ್ಜೆ ಕಟ್ಟಿ ಓಡಾಡುವ ಉತ್ಸಾಹ. ಆ ಗೆಜ್ಜೆಯ ಸದ್ದು ಮನೆ ತುಂಬಾ ಕೇಳಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗೆಜ್ಜೆಯ ಸದ್ದು ಬಿಟ್ಟು, ಗೆಜ್ಜೆಯನ್ನೇ ಯಾರೂ ಹಾಕುವುದಿಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳೂ ಕಾಲ್ಗೆಜ್ಜೆಯನ್ನು ಧರಿಸಿ, ನಮ್ಮ ಸಂಸ್ಕೃತಿಯನ್ನು ಪಾಲಿಸಿಕೊಂಡು ಹೋಗುವಂತಾಗಲಿ. ಎಲ್ಲ ಹೆಣ್ಣು ಮಕ್ಕಳ ಕಾಲಲ್ಲೂ ಮತ್ತೆ ಗೆಜ್ಜೆ ಸದ್ದು ಮಾಡಲಿ.
-ನಿಖಿತಾ ಎಸ್. ಸೇರ್ತಾಜೆ
ವಿವೇಕಾನಂದ ಕಾಲೇಜು, ಪುತ್ತೂರು