Advertisement

ಲೇ ಪಂಗಾ: ಗ್ರಾಮೀಣ ಪ್ರದೇಶದ ಪ್ರತೀಕ ಕಬಡ್ಡಿ ಪಂದ್ಯಾಟ

01:41 PM May 31, 2020 | Hari Prasad |

ಹಳ್ಳಿ ಮಕ್ಕಳ ನೆಚ್ಚಿನ ಆಟವಾಗಿದ್ದ ಕಬಡ್ಡಿ ಆಟಕ್ಕೆ ವಿಶಿಷ್ಟವಾದ ಇತಿಹಾಸವಿದೆ. ಕಾರ್ಪೊರೇಟ್‌ ಜಗತ್ತಿನ ಹಣದ ಹೊಳೆ, ಕೋಟಿ ಮೊತ್ತದ ಬಹುಮಾನಗಳ ಸುರಿಮಳೆ ಇತ್ಯಾದಿ ಆಕರ್ಷಣೆಗಳ ನಡುವೆ ಕಬಡ್ಡಿಯ ಮೂಲ ಸತ್ವ ಕಳೆದು ಹೋಗಿತ್ತು.

Advertisement

ಕ್ರಿಕೆಟ್‌ ನಂತಹ ಪಂದ್ಯಾಟಗಳ ಅಬ್ಬರದ ಹೊಡೆತಕ್ಕೆ ಬಲಿಯಾಗಿ ಕಬಡ್ಡಿ ಮಗುಚಿತ್ತು. ಆದರೆ ಇದೀಗ ಮತ್ತೆ ಕಬಡ್ಡಿ ಆಟ ತನ್ನ ದಾಳಿ ಶುರು ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಿಟ್ಟಿಸಿಕೊಂಡು ಮತ್ತೆ ಅದೇ ಪೊಗರಿನ ಆಟವಾಗಿ ಹೊರಹೊಮ್ಮುತ್ತಿದ್ದು, ತನ್ನ ಸೂಪರ್‌ ರೈಡ್‌ ಮುಂದುವರೆಸಿದೆ.

ಎಲ್ಲಿಂದ ಶುರುವಾಯಿತು
1930ರ ವೇಳೆಗೆ ಭಾರತದ ಮೂಲೆ ಮೂಲೆಯಲ್ಲೂ ಕಬಡ್ಡಿ ಪ್ರಸಿದ್ಧಿ ಪಡೆದುಕೊಳ್ಳಲು ಆರಂಭವಾಯಿತು. ಬಳಿಕ ಇದು ದಕ್ಷಿಣ ಏಷ್ಯಾದವರೆಗೂ ಹಬ್ಬಿತ್ತು. 1921ರಲ್ಲಿ ಮಹಾರಾಷ್ಟ್ರ ನಿರ್ದಿಷ್ಟವಾದ ನಿಯಮಾವಾಳಿಗಳು ರೂಪಿಸಿ, ಸಂಜೀವಿನಿ ಮತ್ತು ಜೆಮಿನಿ ಎಂಬ ನೂತನ ಮಾದರಿಯಲ್ಲಿ ಆಟವನ್ನು ಆಡಲಾಗುತ್ತಿತ್ತು. ಬಳಿಕ ಅಂದರೆ 1923ರಲ್ಲಿ ಸಮಿತಿಯೊಂದನ್ನು ರಚಿಸುವ ಮೂಲಕ ಭಾರತದಲ್ಲಿ ಎಲ್ಲೇ ಪಂದ್ಯಾಟ ನಡೆದರೂ 1921ರಲ್ಲಿ ತಯಾರಿಸಿದ ನಿಯಮಗಳನ್ನು ಪಾಲಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು.

ಆಲ್‌ ಇಂಡಿಯಾ ಕಬಡ್ಡಿ ಫೆಡರೇಶನ್‌ ಸ್ಥಾಪನೆ
ಆಟವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ದೃಷ್ಟಿಯಿಂದ 1950ರಲ್ಲಿ ಆಲ್‌ ಇಂಡಿಯಾ ಕಬಡ್ಡಿ ಫೆಡರೇಶನ್‌ ಸ್ಥಾಪಿಸಲಾಯಿತು. ಜತೆಗೆ 1952ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಿರಿಯರ ಪಂದ್ಯಾಟವನ್ನು ಪ್ರಾರಂಭಿಸಲಾಯಿತು.
ಒಂದರ ಹಿಂದೆ ಒಂದರಂತೆ ಕಬಡ್ಡಿ ಪಂದ್ಯಾಟದ ಪ್ರಚಾರಕ್ಕಾಗಿ ಒಕ್ಕೂಟಗಳು, ಸಂಘ ಸಂಸ್ಥೆಗಳು ಹುಟ್ಟಿಕೊಳ್ಳಲು ಆರಂಭವಾಯಿತು.

1972ರಲ್ಲಿ ಭಾರತ ಸೇರಿದಂತೆ ನೆರೆ ರಾಷ್ಟ್ರಗಳಲ್ಲಿಯೂ ಕಬಡ್ಡಿ ಆಟವನ್ನು ಜನಪ್ರಿಯಗೊಳಿಸುವ ಧ್ಯೇಯದೊಂದಿಗೆ ‘ಇಂಡಿಯನ್‌ ಒಲಂಪಿಕ್‌ ಅಸೋಸಿಯೇಶನ್‌’ ಹಾಗೂ ಅಮೆಚ್ಯೂರ್‌ ಕಬಡ್ಡಿ ಒಕ್ಕೂಟ ಜತೆಯಾಗಿ ಕೆಲಸ ಮಾಡಲು ಪ್ರಾರಂಭವಾಯಿತು. ಇದರ ಪ್ರತಿಫ‌ಲವಾಗಿ ನಂತರದ ದಿನಗಳಲ್ಲಿ ಕಬಡ್ಡಿ ಪಂದ್ಯಾಟಕ್ಕೆ ನೂತನ ಸ್ಪರ್ಶ ದೊರಕಿತು ಮಾತ್ರವಲ್ಲದೇ ಕಿರಿಯ ವಯಸ್ಕರ ಬಾಲಕ-ಬಾಲಕಿಯರಿಗೆ ರಾಷ್ಟ್ರೀಯ ಮಟ್ಟದ ಪಂದ್ಯಾಟಗಳನ್ನು ಆರಂಭಿಸಲಾಯಿತು.

Advertisement

ಹಲವು ಪ್ರಥಮ
1980ರಲ್ಲಿ ಮೊದಲ ಕಬಡ್ಡಿ ಪಂದ್ಯಾಟ ಏಷ್ಯಾದಲ್ಲಿ ನಡೆದಿತ್ತು. ಹೊಸದಿಲ್ಲಿಯಲ್ಲಿ 1982ರಲ್ಲಿ ನಡೆದ 9ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಕಬಡ್ಡಿಯನ್ನು ಪ್ರದರ್ಶನ ಆಟವನ್ನಾಗಿ ಆಡಿಸಲಾಯಿತು. ಈ ಆಟವನ್ನು ದಕ್ಷಿಣ ಏಷ್ಯಾ ಒಕ್ಕೂಟದೊಂದಿಗೆ ಸೇರಿಸಲಾಯಿತು.

1984ರಿಂದ ಬಾಂಗ್ಲಾದೇಶ ಸೇರಿದಂತೆ ಏಷ್ಯಾದ ಇತರ ದೇಶಗಳಲ್ಲಿ ಪಂದ್ಯಾಟ ಪ್ರಾರಂಭವಾಯಿತು. 1990ರಲ್ಲಿ ನಡೆದ 11ನೇ ಏಷ್ಯಾ ಆವೃತ್ತಿಯಲ್ಲಿ ಭಾರತ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. 1994 ಹಿರೋಶಿಮಾ, 1998 ಬ್ಯಾಂಕಾಕ್‌, 2002 ಬೂತಾನ್‌, 2006 ದೋಹದಲ್ಲಿಯೂ ಭಾರತ ಚಿನ್ನದ ಪದಕವನ್ನು ಪಡೆದುಕೊಂಡಿತ್ತು.

ವಿಶ್ವಕಪ್‌ ಗೆದ್ದ ಗ್ರಾಮೀಣ ಕ್ರೀಡೆ
2004ರಲ್ಲಿ ಮೊದಲ ಬಾರಿಗೆ ಮುಂಬಯಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಭಾರತವು ಇರಾನ್‌ನನ್ನು ಸೋಲಿಸುವ ಮೂಲಕ ವಿಶ್ವಕಪ್‌ ತನ್ನದಾಗಿಸಿಕೊಂಡಿತ್ತು. ಈ ಪರಾಕ್ರಮ 2007ರಲ್ಲಿಯೂ ಮುಂದುವರೆಯಿತು.

ಆಟದ ಮಹತ್ತವನ್ನರಿತ ಒಕ್ಕೂಟಗಳು ಕಬಡ್ಡಿ ಪಂದ್ಯಾಗಳಿಗೆಂದೇ ಪ್ರತ್ಯೇಕ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸುವ ಯೋಚನೆ ಮಾಡಿದ್ದರು. 2006ರಲ್ಲಿ ಏಷ್ಯಾದಲ್ಲಿ ಮೊದಲ ಬಾರಿಗೆ ಕಬಡ್ಡಿ ಅಭ್ಯಾಸ ಹಾಗೂ ತರಬೇತಿಗೆಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿತ್ತು.

2007ರಲ್ಲಿ ನಡೆದ ಏಷ್ಯಾದ 2ನೇ ಆವೃತ್ತಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸ್ಪರ್ಧೆಗಳ ಪಟ್ಟಿಯಲ್ಲಿ ಕಬಡ್ಡಿಯನ್ನು ಸೇರ್ಪ ಡಿಸಿ, 2007 ಹಾಗೂ 2008ರಂದು ನಡೆದ ಪಂದ್ಯಾಟಗಳಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡ ಚಿನ್ನದ ಪದಕ ಸಂಪಾದಿಸಿತ್ತು.

– ಸುಶ್ಮಿತಾ ಜೈನ್‌, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next