Advertisement

ಇನ್‌ಲ್ಯಾಂಡ್‌ ಲೆಟರ್‌: ಪ್ರಯಾಣದಲ್ಲಿ ಕನಸಿನ ಸಂಭಾಷಣೆಯಲ್ಲಿ

10:00 PM May 30, 2020 | Hari Prasad |

ನಾನು ಅದೆಷ್ಟೋ ಸಲ ಅಂದುಕೊಂಡಿದ್ದೆ ಎಲ್ಲಾದರು ಕಾಣದ ಊರಿನತ್ತ ಪ್ರಯಾಣಿಸಬೇಕೆಂದು. ಅದೊಂದು ದಿನ ದೂರದ ಊರಿಗೆ ಪ್ರಯಾಣ ಬೆಳೆಸಿದೆ. ಕುಂದಾಪುರದ ಬಸ್‌ ಹಿಡಿದು ಹೊರಟೆ. ಸೀಟ್‌ಗಾಗಿ ಕತ್ತು ಹೊರಳಾಡಿಸಿದೆ. ಒಂದು ಸೀಟಿತ್ತು, ಇಬ್ಬರು ಕುಳಿತುಕೊಳ್ಳುವ ಸ್ಥಳ. ದೇವರಿಗೆ ಮನದಲ್ಲಿಯೇ ‘ಥ್ಯಾಂಕ್ಸ್‌’ ಹೇಳಿ ಕುಳಿತುಕೊಂಡೆ. ಕಿಟಕಿಯ ಅಂಚಿನ ಸೀಟ್‌, ತಂಪಾದ ಗಾಳಿಗೆ ಮುಖವೊಡ್ಡಿದೆ.

Advertisement

ಪ್ರಯಾಣ ಬೋರ್‌ ಅನಿಸಿತು. ಮೊಬೈಲ್‌ನಲ್ಲಿ ಹಾಡು ಕೇಳಲು ಇಯರ್‌ ಪೋನ್‌ ಹಾಕಿದೆ. ನಿದ್ದೆ ಬರತೊಡಗಿತು. ನಿದ್ದೆ ಮಾಡಿದರೆ ನನ್ನ ಸ್ಟಾಪ್‌ ಬಂದಾಗ ಇಳಿಯಲು ಕಷ್ಟವಾಗಬಹುದು ಎಂದು ಇಯರ್‌ ಪೋನ್‌ನನ್ನು ಬ್ಯಾಗ್‌ನೊಳಗೆ ತುರುಕಿಸಿದೆ.

ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಅಜ್ಜಿ ಕುಳಿತುಕೊಂಡರು. ಅವರ ಜತೆ ಮಾತುಗಳನ್ನು ವಿನಿಮಯ ಮಾಡಿಕೊಂಡೆ. ಮಾತನಾಡುತ್ತಾ ಅದೆಷ್ಟೋ ದೂರ ಕ್ರಮಿಸಿದ್ದೆವು. ಅಜ್ಜಿ ಇಳಿದುಕೊಳ್ಳುವ ಸ್ಟಾಪ್‌ ಬಂತು. ‘ಅಜ್ಜಿ ನನ್ನ ತಲೆ ಸವರಿ ಬರ್ತಿನೀ ಮಗಳೇ’ ಎಂದು ಹೇಳಿ ಬಸ್ಸಿನಿಂದ ಕೆಳಗಿಳಿದರು. ಮತ್ತೆ ಏಕತಾನತೆ ಕಾಡತೊಡಗಿತು. ಗೂಗಲ್‌ ಮ್ಯಾಪ್‌ ನೋಡಿ ನನ್ನ ಪ್ರಯಾಣದ ದೂರವನ್ನು ಗಮನಿಸಿದೆ. ಅರಿವಿಲ್ಲದೇ ನಿದ್ದೆಯೂ ಆವರಿಸಿತ್ತು.

ನನ್ನ ಪಕ್ಕ ಇದ್ದ ಖಾಲಿ ಸೀಟಿನಲ್ಲಿ ಹುಡುಗ ಕುಳಿತ. ಆ ತನಕ ಕಾಡುತ್ತಿದ್ದ ಒಂಟಿ ಪ್ರಯಾಣ ಕೊನೆಗೊಂಡಿತು. ಅವನೊಂದಿಗೆ ಮಾತನಾಡಬೇಕು ಅನಿಸಿತು. ಆದರೆ ಧೈರ್ಯ ಸಾಕಾಗಲಿಲ್ಲ. ನನ್ನ ಮನದಲ್ಲಿ ಆತನ ಕುರಿತಾದ ಯೋಚನೆಗಳಿಗೆ ವಾಯು ವೇಗ ಲಭಿಸಿತು. ಮುಖದಲ್ಲಿದ್ದ ಆಕರ್ಷಕ ಕಳೆ ನನ್ನನ್ನು ಸೆಳೆದಿತ್ತು. ಮನಸ್ಸು ನೂರಾರು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿತ್ತು. ಆತನಿಗೆ ಗರ್ಲ್ ಫ್ರೆಂಡ್‌ ಇರಬಹುದೇ? ಎಲ್ಲಿಗೆ ಹೊರಟಿರಬಹುದು? ಹೀಗೆ ಹಲವು ಪ್ರಶ್ನೆಗಳು ಕಾಡತೊಡಗಿತು. ಈ ತೊಳಲಾಟದಿಂದ ಹೊರಬರಲು ಪ್ರಯತ್ನಿಸಿದೆ.

ಅವನತ್ತ ಮುಖ ಮಾಡಿ ಸಣ್ಣಗೆ ಮುಗುಳ್ನಗೆ ಬೀರಿದೆ. ಅವನೂ ಪ್ರಶಾಂತ ಚಿತ್ತದ ನಗು ಚೆಲ್ಲಿದ. ಆ ನಗು ನೋಡಿ ಫ‌ುಲ್‌ ಫಿದಾ ಆಗಿಹೋದೆ. ಹಾಯ್‌ ಹೇಳಿ ನನ್ನ ಹೆಸರು ಹೇಳಿಕೊಂಡೆ, ಅವನೂ ಹೆಸರನ್ನು ಹಂಚಿಕೊಂಡ. ಹುಡುಗ ಸುಂದರವಾಗಿದ್ದ, ಆತನಿಗೆ ಗರ್ಲ್ ಫ್ರೆಂಡ್‌ ಇರಬಹುದೇ? ಎಂಬ ಪ್ರಶ್ನೆ ಒಂದೆಡೆ ಕಾಡತೊಡಗಿತು. ಅವನ ಹತ್ತಿರ ಕೇಳಿಬಿಡೋಣ ಎಂದು ಮನಸ್ಸು ಮಾಡಿ ಅವನತ್ತ ಮುಖ ಮಾಡಿದೆ.

Advertisement

ಆ ವೇಳೆ ಆತ ಯಾಕೋ ಚಡಪಡಿಸುತ್ತಿದ್ದಾನೆ ಎಂದೆನಿಸತೊಡಗಿತು. ‘ಏನಾದ್ರೂ ಹೇಳೊಕಿದ್ಯಾ’ ಎಂದು ಕೇಳಿದೆ. ‘ಏನಿಲ್ಲ’ ಎಂಬ ಉತ್ತರಕ್ಕೆ ಅವನು ತೃಪ್ತಿಪಟ್ಟುಕೊಂಡ. ‘ಪರವಾಗಿಲ್ಲ ಹೇಳಿ’ ಎಂದು ನಾನು ಆಹ್ವಾನಿಸಿದೆ. ಆದರೆ ಅವನಿಂದ ಯಾವುದೇ ಸ್ಪಂದನೆ ಬರಲಿಲ್ಲ. ನಾನೂ ಸಮ್ಮನಾಗಿಬಿಟ್ಟೆ.

ಮತ್ತೆ ಆವನೇ ನನ್ನನ್ನು ಕರೆದು ‘ಯಾರದ್ರೂ ಬಾಯ್‌ ಫ್ರೆಂಡ್‌ ಇದ್ದನಾ’ ಎಂದು ಕೇಳಿದ. ಆ ಒಂದು ಕ್ಷಣ ಭಯವಾಯಿತು. ಯಾಕೆ? ಎಂದು ಕೇಳಿದೆ. ‘ಸುಮ್ಮನೇ ಕೇಳಬೇಕೆನಿಸಿತು’ ಎಂದ. ನನ್ನ ಕೆಲಸ ಸುಲಭವಾಯಿತು. ಅವನೇ ಕೇಳಿದ ಮೇಲೆ ನಾನು ಕೇಳುವುದರಲ್ಲಿ ತಪ್ಪಿಲ್ಲ ಎಂದು ನಾನು ಧೈರ್ಯ ಮಾಡಿ, ‘ನಿಮಗೆ ಗರ್ಲ್ ಫ್ರೆಂಡ್‌ ಇಲ್ವಾ?’ ಎಂದು ಕೇಳಿದೆ. ‘ನನಗೆ ಗರ್ಲ್ ಫ್ರೆಂಡ್‌ ಇಲ್ಲ’ ಎಂಬ ನಿರೀಕ್ಷಿತ ಉತ್ತರ ಬಂತು. ಆ ಕ್ಷಣ ಖುಷಿಯಾಗಿ ಹೌದಾ! ಎಂದು (ಜೋರಾಗಿ ) ಪ್ರತಿಕ್ರಿಯಿಸಿದೆ.

ಅಷ್ಟರಲ್ಲಿ ಏನಾಯಿತು ಅನ್ನೋ ಧ್ವನಿ ಕೇಳಿಸಿತು. ನಾನು ಕಣ್ಣು ತೆರೆದು ನೋಡಿದಾಗ ನನ್ನ ಪಕ್ಕದ ಸೀಟಿನಲ್ಲಿ ಇಳಿ ವಯಸ್ಸಿನೊಬ್ಬರು ಕುಳಿತಿದ್ದರು. ನಾನು ಪ್ರಯಾಣಿಸಿದ್ದು, ಕನಸಿನ ಜತೆ. ಇದ್ಯಾವುದು ನಿಜ ಅಲ್ಲ ಎಂದು ಮನವರಿಕೆಯಾದಾಗ ಮನಸ್ಸು ಮರುಕಪಟ್ಟಿತು. ಕನಸಾದರೆ ಏನು ಪ್ರಯಾಣ ಮಾತ್ರ ರೋಚಕವೆನಿಸಿತು.


– ಗಾಯತ್ರಿ ಗೌಡ, ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next