ಕನ್ನಡಿ ಯಾರಿಗೆ ಗೊತ್ತಿಲ್ಲ ಹೇಳಿ? ಮುಖವನ್ನು ಮನಸಿನ ಕನ್ನಡಿ ಎನ್ನುತ್ತಾರೆ. ಆದರೆ ಮುಖವನ್ನು ನೋಡಲು ಕನ್ನಡಿ ಬೇಕೇ ಬೇಕು. ಕನ್ನಡಿಯು ನಮ್ಮ ದೈನಂದಿನ ಬದುಕಿನಲ್ಲಿ ಅತಿ ಹೆಚ್ಚಾಗಿ ಬಳಸುವ ವಸ್ತುವಾಗಿದೆ. ಅದು ಜೀವನದ ಅವಿಭಾಜ್ಯ ಅಂಗದಂತಾಗಿದೆ ಎಂದರೆ ತಪ್ಪಿಲ್ಲ. ಇನ್ನು ಕೆಲವರಿಗೆ ಕನ್ನಡಿ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ. ಮನೆಯಿಂದ ಹೊರಡುವ ಮೊದಲು ನಾವು ಹೇಗೆ ಕಾಣಿಸುತ್ತೇವೆ, ಹಾಕಿರುವ ಬಟ್ಟೆ ಹೇಗಿದೆ. ಮುಖ ಹೇಗೆ ಕಾಣುತ್ತಿದೆ, ತಲೆ ಕೂದಲು ಸರಿಯಾಗಿದೆಯೋ ಹೀಗೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುವುದು ಜೀವವಿಲ್ಲದ ಇದೇ ಕನ್ನಡಿ. ಯಾವುದೇ ನಿಸ್ವಾರ್ಥ ತೋರದೆ ಉತ್ತಮ ಗೆಳತಿಯನ ರೀತಿ ಆತ್ಮ ವಿಶ್ವಾಸ ನೀಡುತ್ತದೆ.
ಹೆಣ್ಣು ಮತ್ತು ಕನ್ನಡಿಯದು ಜನುಮ ಜನುಮದ ಅನುಬಂಧ. ಎಂದಿಗೂ ಮುರಿಯದ ಸಂಬಂಧ. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಶಿಲಾಬಾಲಿಕೆಯೊಬ್ಬಳು ಕನ್ನಡಿ ಹಿಡಿದು ಮುಖ ನೋಡಿಕೊಳ್ಳುತ್ತ ಬಳುಕಿ ನಿಂತಿರುವ ಕೆತ್ತನೆ ಅದ್ಭುತವೇ ಹೌದು. ಯುವತಿಯರು ಕನ್ನಡಿಯೆದುರು ನಿಂತಾಗ ಆ ಕ್ರಿಯೆಯಲ್ಲಿ ಯಾವ ಪರಿ ತನ್ಮಯರಾಗುತ್ತಾರೆ ಎಂಬುದಕ್ಕೆ ಆ ಕೆತ್ತನೆ ಸಾಕ್ಷಿರೂಪದಂತಿದೆ.
ಹೆಣ್ಣು ಮಕ್ಕಳು ಕನ್ನಡಿ ಮುಂದೆ ನಿಂತರೆ ಮುಗೀತು ಸಮಯದ ಪರಿವೇ ಇರುವುದಿಲ್ಲ. ಎಷ್ಟು ನೋಡಿಕೊಂಡರೂ ಸಮಾಧಾನವಾಗುವುದಿಲ್ಲ. ಹಾಗಂತ ಗಂಡು ಮಕ್ಕಳು ಏನು ಕಮ್ಮಿ ಇಲ್ಲ. ಎÇÉೇ ಕನ್ನಡಿ ಸಿಕ್ಕರೂ ಅಟಿÉಸ್ಟ್ ತಮ್ಮ ತಲೆಕೂದಲನ್ನು ಸರಿಮಾಡಿಕೊಂಡು ಚೆನ್ನಾಗಿ ಕಾಣುತ್ತೀನಾ ಎಂದು ನೋಡಿ ಮುಂದೆ ಸಾಗುವರು. ಆದರೆ ಈಗ ಕನ್ನಡಿ ಇಲ್ಲದೆ ಜೀವನವಿಲ್ಲ ಎನ್ನುವ ಹಾಗೆ ಆಗಿದೆ.
ಹಾಗಾಗಿ ಕನ್ನಡಿಗೆ ತುಂಬಾ ಡಿಮ್ಯಾಂಡ್. ಏನೇ ಹೇಳಿದರೂ ನನ್ನ ಪಾಲಿಗೆ ಕನ್ನಡಿ ಒಳ್ಳೆಯ ಗೆಳತಿಯಾಗಿದ್ದಾಳೆ. ನನ್ನೆಲ್ಲ ನೋವುಗಳಿಗೆ ಸ್ಪಂದಿಸದಿದ್ದರೂ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಲು ಸದಾ ನನ್ನ ಜತೆ ಇರುವ ಗೆಳತಿ. ಕೆಲವೊಮ್ಮೆ ಬದುಕಿನ ಪರಿಸ್ಥಿತಿ ಕಂಡು ಅವಳೊಂದಿಗೆ ಹೇಳಿಕೊಳ್ಳುವಾಗ ನಾನೇಕೆ ನಿನ್ನ ಹಾಗೆ ಮೌನಿಯಾಗಬಾರದು ಎಂದೆನಿಸುತ್ತದೆ.
ಈಗೆಲ್ಲ ಕನ್ನಡಿ ಹಾಕಬೇಕಾದರೆ ವಾಸ್ತು ನೋಡಿ ಹಾಕುತ್ತಾರೆ. ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳುತ್ತಾರೆ. ಮನೆಯಲ್ಲಿ ಹಿರಿಯರು ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ಎಂದು ಹೇಳುತ್ತಾರೆ ಹಾಗೂ ಒಡೆದರೆ ಅಪಶಕುನ ಎಂದು ಹೇಳುತ್ತಾರೆ. ನಂಬಿಕೆಗಳೇನೇ ಇದ್ದರೂ ಕನ್ನಡಿ ನಮ್ಮ ವ್ಯಕ್ತಿತ್ವವನ್ನು ನಮಗೆ ತೋರಿಸುತ್ತದೆ ಎಂಬುದಂತೂ ನಿಜ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕನ್ನಡಿ ಬೇಕೇ ಬೇಕು.
-ಸಿಂಧು ಬಿ.ಯು.
ಬೇಲೂರು