ಅಂದೊಂದು ದಿನ ಬೆಳಗ್ಗೆ ಬೆಕ್ಕಿನ ಮರಿ ಕೂಗುವ ಶಬ್ದ ಕೇಳುತ್ತಿತ್ತು. ಇದು ಮಳೆಗಾಲದ ಸಮಯ ಆದ್ದರಿಂದ ಯಾರೋ ಬೆಕ್ಕಿನ ಮರಿಯನ್ನು ಬಿಟ್ಟು ಹೋಗಿರಬಹುದು ಅಂದುಕೊಂಡೆ. ಆದರೂ ನೋಡುವ ಕುತೂಹಲ. ಹೊರಗೆ ಬಂದು ನೋಡಿದರೆ ಬಿಳಿ ಬಣ್ಣದ ಕಣ್ಣಿನ ಸುತ್ತ ಮಚ್ಚೆಯಿದ್ದ ಆ ಬೆಕ್ಕಿನ ಮರಿ ನೋಡಿ ಮುಟ್ಟುವ ಮನಸ್ಸಾಗಿ ಅದರ ಹಿಂದೆ ಹೋದೆ.
ಉಹೂ ಕೈಗೆ ಸಿಗಲೇ ಇಲ್ಲ. ಸ್ವಲ್ಪ ಸಮಯದ ಅನಂತರ ಅಮ್ಮ ನನ್ನ ಬಳಿಗೆ ಬಂದು ಅದರ ಚುರುಕುತನದ ಬಗ್ಗೆ ಹೀಗೆ ವಿವರಿಸಿದಳು. “ನಮ್ಮ ಮನೆಯ ಎದುರಿದ್ದ ತೊಡಿಗೆ ಇಳಿದ ಬೆಕ್ಕಿನ ಮರಿ ಮೇಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಆದರೂ ಛಲ ಬಿಡದ ಭಗಿರಥನಂತೆ ಬಂದೆ ಬಿಟ್ಟಿತು’ ಎಂದಳು. ಮತ್ತೆ ಅಲ್ಲಿದ್ದ ಒಂದು ಕಪ್ಪೆಯನ್ನು ಬೇಟೆಯಾಡಿ ತಿಂದ ಪರಿಯನ್ನು ವಿವರಿಸಿದಳು.
ಕೊಂಚ ಸಮಯದ ಅನಂತರ ಎದುರಿನಲ್ಲಿದ್ದ ಪಂಚಾಯತ್ ಕಚೇರಿಗೆ ಬಂದಿದ್ದ ವ್ಯಕ್ತಿ ಆ ಬೆಕ್ಕಿನ ಮರಿಯನ್ನು ನೋಡಿ ಇದು ನಮ್ಮ ಮನೆಯ ಬೆಕ್ಕಿನ ಮರಿ. ತನ್ನ ಕಾರಿನ ಬೊನೆಟ್ ಒಳಗೆ ಕುಳಿತುಕೊಂಡಿತ್ತು. ಇಲ್ಲಿ ಕಾರು ನಿಲ್ಲಿಸಿದಾಗ ಇಳಿಯಿತು. ನನ್ನ ಕೆಲಸದ ತರಾತುರಿಯಲ್ಲಿ ಅದನ್ನು ಸರಿಯಾಗಿ ಗಮನಿಸಿಲ್ಲ ಎಂದು ತಿಳಿಸಿದರು. ಅದನ್ನು ಹಿಡಿದು ಕೊಡುವ ಹಾಗೆ ನನ್ನ ತಂದೆಯ ಬಳಿ ವಿನಂತಿಸಿದರು. ಇದಕ್ಕೆ ಸಮ್ಮತಿಸಿದ ನಮ್ಮ ತಂದೆ ಅದನ್ನು ಹಿಡಿಯಲು ಹೋದರೆ ಅದು ತಪ್ಪಿಸಿಕೊಳ್ಳುತ್ತಿತ್ತು ಎಷ್ಟೇ ಪ್ರಯತ್ನಿಸಿದರೂ ಸಿಗಲೇ ಇಲ್ಲ.
ಕೊನೆಗೆ ಪುನಃ ಬೆಕ್ಕಿನ ಮರಿ ಕೂಗುವ ಶಬ್ದ ಕೇಳಿಸಿತು ಅಂತ ನಮ್ಮ ತಂದೆ ಹುಡುಕಿ ಹೊದಾಗ ನಾಯಿಯೊಂದು ಅದನ್ನು ಕೊಲ್ಲಲು ಹವಣಿಸುತ್ತಿದ್ದ ಇಂತಹ ಸಮಯದಲ್ಲೂ ಆ ಬೆಕ್ಕಿನ ಮರಿ ಎದೆಗುಂದದೆ ಆ ನಾಯಿಯನ್ನು ತನ್ನ ಪುಟ್ಟ ಪಾದದಿಂದ ಹೊಡೆಯಲು ಪ್ರಯತ್ನಿಸುತ್ತಿತ್ತು. ಇದ್ದನ್ನು ಕಂಡ ತತ್‌ಕ್ಷಣವೇ ನಮ್ಮ ತಂದೆ ಆ ನಾಯಿಯನ್ನು ಓಡಿಸಿ ಆ ಬೆಕ್ಕಿನ ಮರಿಯನ್ನು ಹಿಡಿದು ಸುರಕ್ಷಿತವಾಗಿ ಅದರ ವಾರಸುದಾರರಿಗೆ ಒಪ್ಪಿಸಿದರು.
ನಮ್ಮ ಜೀವನದಲ್ಲೂ ಹಾಗೇ ನಾವು ಕೆಲವೊಮ್ಮೆ ಸಾಕಷ್ಟು ನೋವು ಸಂಕಷ್ಟಗಳನ್ನು ಎದುರಿಸುತ್ತೇವೆ. ಅನುಮಾನಗಳಿಗೆ ಗುರಿಯಾಗುತ್ತೇವೆ, ಒಂಟಿತನದಲ್ಲಿ ಬೇಯುತ್ತೇವೆ. ಕೆಲವೊಮ್ಮೆ ಕೇವಲ ವಿಫಲತೆಯನ್ನೇ ನಮ್ಮನ್ನು ಕಾಡುತ್ತದೆ. ಹಾಗಾಗಿ ಇದು ಯಾವುದಕ್ಕೂ ಅಂಜದೆ ಬೆಕ್ಕಿನ ಮರಿಯ ಹಾಗೆ ಎಲ್ಲೇ ಇದ್ದರೂ ನಮ್ಮ ಸ್ವಂತ ಬಲದಿಂದ ಯಾರ ಸಹಾಯವೂ ಯಾಚಿಸದೆ ಸತ್ಯಕ್ಕನುಗುಣವಾಗಿ ನಾವು ನಮ್ಮ ಬದುಕುವ ದಾರಿಯನ್ನು ಕಂಡುಕೊಂಡು ಸತತ ಪ್ರಯತ್ನದಿಂದ ಮುಂದೆ ಸಾಗಬೇಕು. ಆಗ ದೇವರು ಕೂಡ ನಮ್ಮನ್ನು ಎಂತಹ ಆಪತ್ತಿನಿಂದಲೂ ರಕ್ಷಿಸುತ್ತಾನೆ.
ಸಮೃದ್ಧಿ ಕಿಣಿ
ಡಾ| ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರ