ಹುಲಿಯ ಬಾಯಿಯಿಂದಾರೂ ಒಂದೊಮ್ಮೆ ತಪ್ಪಿಸಿಕೊಂಡು ಬರಬಹುದು ಆದರೆ ಈ ಸೊಳ್ಳೆಗಳಿವೆಯಲ್ಲಾ ಯಪ್ಪಾ! ಅವುಗಳಿಂದ ಬಚವಾಗುವುದೆಂದರೆ ನರಕದಿಂದ ಹೊರಬಂದಂತೆಯೇ ಸರಿ. ಮಲಗಿದರೂ ಕಾಟ, ಒಂದು ಕಡೆ ಕುಳಿತರೂ ಕಾಟ, ಅತ್ತ ಇತ್ತ ಎತ್ತೆತ್ತ ಹೋದರು ಈ ಸೊಳ್ಳೆ ಕಾಟವಂತೂ ತಪ್ಪುವುದೇ ಇಲ್ಲ. ನಾನೊಬ್ಬ ದೊಡ್ಡ ಕೊಲೆಗಡುಕ ಯಾಕೆ ಗೊತ್ತೇ ? ನಾನು ಕೊಂದಷ್ಟು ಸೊಳ್ಳೆಗಳನ್ನು ಯಾರೂ ಕೊಂದಿರಲಿಕ್ಕಿಲ್ಲ. ಕಾದು ಕುಳಿತು ಸೊಳ್ಳೆಗಳಿಗೆ ಹೊಂಚು ಹಾಕಿ ಚಪ್ಪಾಳೆ ತಟ್ಟಿ ಹುಡುಕಿ ಹುಡುಕಿ ಕೊಲ್ಲುತ್ತಿದ್ದೆ.
ಯಾವ ಜೀವಿಗೂ ಹಿಂಸೆಯನ್ನು ನೀಡಲು ನಾನು ಬಯಸುವುದಿಲ್ಲ ಆದರೆ ಈ ಸೊಳ್ಳೆಯನ್ನು ಕಂಡರೆ ನನಗೆ ಎಲ್ಲಿಲ್ಲದ ವೈರತ್ವ. ಸೊಳ್ಳೆಯೇ ನನ್ನ ಬದ್ಧ ವೈರಿ ಉಳಿದವರೆಲ್ಲರೂ ಹಾಸಿಗೆಯಲ್ಲಿ ಪವಡಿಸಿ ಒಂದರ ಮೇಲೊಂದು ಗೊರಕೆ ಹೊಡೆಯುತ್ತಿರಬೇಕಾದರೆ ನಾನು ಮಾತ್ರ ಹಾಸಿಗೆಯ ಮೇಲೆ ಹೊರಳಾಡುತ್ತಲೇ ಇರುತ್ತಿದ್ದೆ. ಕಾರಣ ಬೇರೇನೂ ಅಲ್ಲ ಇದೇ ಸೊಳ್ಳೆಗಳು. ಹೊದಿಕೆಯನ್ನು ಹೊದ್ದು ಮಲಗಿದರೆ ಒಂದು ಕಡೆ ತಾಳಲಾರದ ಸೆಖೆ, ಹೊದಿಕೆಯನ್ನು ತೆಗೆದರೆ ರಾಕ್ಷಸ ಸೊಳ್ಳೆಗಳ ಕಾಟ, ಅಯ್ಯೋ! ಯಾಕಾದರೂ ಈ ಸೊಳ್ಳೆಗಳನ್ನು ಹುಟ್ಟಿಸಿದ ಭಗವಂತ ಎಂದೆನಿಸುತ್ತದೆ .
ಬಹಳ ಬಂದೋಬಸ್ತ್ ನಿಂದ ಮಲಗಿದರೂ ಕೂಡ ಎಲ್ಲಿಂದಾದರೂ ಒಂದು ಸೊಳ್ಳೆ ಬಂದು ಹಾಜರಿ ಒತ್ತಿ ಹೋಗುತ್ತದೆ. ಇನ್ನೇನು ನಿದ್ದೆ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಗುಂಯೀ ಎಂದು ಕಿವಿಯ ಸಮೀಪದಲ್ಲಿ ಈ ಗಾನಗಂಧರ್ವರು ತನ್ನ ಸಂಗೀತದ ಪ್ರೌಢಿಮೆಯನ್ನು ಪ್ರದರ್ಶಿಸಲು ಪ್ರಾರಂಭಿಸುತ್ತವೆ. ಈ ಸೊಳ್ಳೆಗಳ ಸಂಗೀತ ಯಾರಿಗೆ ತಾನೇ ಬೇಕು ? ಆದರೆ ಕೆಲವು ಸೊಳ್ಳೆಗಳು ಯಾವುದೇ ಸದ್ದಿಲ್ಲದೆ ಬಂದು ತನ್ನ ಕೆಲಸವನ್ನು ಮಾಡಿ ಮುಗಿಸುತ್ತದೆ. ಅದೇನೋ ಹೇಳುತ್ತಾರಲ್ಲ ಸೈಲೆಂಟ್ ಕಿಲ್ಲರ್ ಎಂದು ಅದೇ ರೀತಿಯ ಸೊಳ್ಳೆಗಳು ಇವು. ಅದರಲ್ಲಂತೂ ಈ ಮಂಗಳೂರಿನ ಸೊಳ್ಳೆಗಳಂತು ಬಹಳ ವಿಚಿತ್ರ .
ನಮ್ಮೂರ ಸೊಳ್ಳೆಗಳು ತೀರಾ ಕಪ್ಪು ಬಣ್ಣದಲ್ಲಿದ್ದರೆ, ಇಲ್ಲಿಯ ಕೆಲವು ಸೊಳ್ಳೆಗಳು ತಿಳಿ ಬಿಳಿ – ಕಪ್ಪು ಮಿಶ್ರಿತ ಬಣ್ಣದಲ್ಲಿರುವುದನ್ನು ಗಮನಿಸಿರುವೆ. ನಮ್ಮೂರಲ್ಲೂ ಅಂತಹ ಸೊಳ್ಳೆಗಳು ಇದ್ದರೂ ಇರಬಹುದು, ಆದರೆ ನಾನಂತೂ ಅಂತಹ ಸೊಳ್ಳೆಯನ್ನು ಮಂಗಳೂರಿನಲ್ಲೇ ಮೊದಲ ಬಾರಿ ಕಂಡಿದ್ದು. ಪೇಟೆಯ ಮನುಷ್ಯರಿಗೆ ಫ್ಯಾಷನ್ ಸ್ವಲ್ಪ ಜಾಸ್ತಿಯಂತೆ, ಯಾರಿಗೆ ತಾನೇ ಗೊತ್ತು ? ಪೇಟೆಯ ಮನುಷ್ಯರ ಗಾಳಿಯು ಅಲ್ಲಿನ ಸೊಳ್ಳೆಗಳಿಗೂ ಬೀಸಿರಬಹುದು. ಹಾಗಾಗಿ ಕಚ್ಚುವವರಿಗಾದರೂ ನಾವು ಸ್ವಲ್ಪ ಸುಂದರವಾಗಿ ಕಂಡರೆ ನಮ್ಮನ್ನು ಕೊಲ್ಲಲಿಕ್ಕಿಲ್ಲ ಎಂಬ ಭಾವವೋ ಏನೋ? ಅವುಗಳಿಗೆ. ಹುಡುಕಿದರೆ ಎಲ್ಲಿ ನೋಡಿದರೂ ಸೊಳ್ಳೆಯ ಆವಾಸ ಸ್ಥಾನ ಸಿಗದು. ಆದರೆ ಸಂಜೆಯಾಗುತ್ತಿದ್ದಂತೆ ಯಾವ ಯಾವ ಮೂಲೆಯಿಂದೆಲ್ಲಾ ಈ ಸೊಳ್ಳೆಗಳು ಬರುತ್ತವೆಯೋ? ದೇವರಿಗೇ ಗೊತ್ತು.
ಸಮರದ ವೇಳೆಯಲ್ಲಿ ಶತ್ರುಸೈನ್ಯ ಯಾವ ರೀತಿಯಲ್ಲಿ ತನ್ನ ಆಯುಧಗಳನ್ನು ಝಳಪಿಸುತ್ತಾ ಬರುತ್ತವೆಯೋ ಅದೇ ರೀತಿ ಈ ಸೊಳ್ಳೆಗಳೂ ಕೂಡ ಮನುಷ್ಯನ ಮೇಲೆ ತನ್ನ ಚೂಪಾದ ಸೂಜಿಯ ಮುಖೇನ ಯುದ್ಧಕ್ಕೆ ಅಣಿಯಾಗುತ್ತವೆ. ಈ ಸೊಳ್ಳೆಯ ಕುತಂತ್ರ ಬುದ್ದಿ ಎಲ್ಲಿಯವರೆಗೆ ಅಂದರೆ ಮಲಗುವರೆಗೂ ಯಾವುದೇ ಶಬ್ಧ ಇಲ್ಲ, ಕಣ್ಣಿಗಂತೂ ಕಾಣಿಸುವುದೇ ಇಲ್ಲ, ಸರಿ ನಿದ್ದೆ ಮಾಡೋಣ ಎಂದು ಲೈಟ್ ಮಾಡಿದ ತತ್ ಕ್ಷಣ ಸೊಳ್ಳೆ ಪ್ರತ್ಯಕ್ಷ .ಅಬಾr ಸೊಳ್ಳೆಗಳೆ ! ಕುತಂತ್ರದಲ್ಲಿ ಶಕುನಿಗಿಂತಲೂ ಒಂದು ಕೈ ಮೇಲೆಯೇ. ಇವುಗಳು ಸಾಮಾನ್ಯವಲ್ಲ ಹೊಂಚು ಹಾಕಿ ಸಂಚು ಹೂಡಿ ರಕ್ತ ಹೀರುವ ರಕ್ತ ಪಿಪಾಸುಗಳು.
ಅದೇನೇ ಇರಲಿ ಜನ ಜೀವನಕ್ಕೆ ಮರಣ ಭಯವನ್ನು ನೀಡುವ ಇಂತಹ ಸೊಳ್ಳೆಗಳಿಂದ ಪಾರಾಗುವುದಂತೂ ಸದ್ಯದ ಪರಿಸ್ಥಿತಿಯಲ್ಲಿ ಅತೀ ಅಗತ್ಯವೇ ಆಗಿದೆ. ಅದರಲ್ಲೂ ಹಗಲಲ್ಲಿ, ಸಂಜೆಯ ವೇಳೆಯಲ್ಲಿ ಕಚ್ಚುವ ಸೊಳ್ಳೆಗಳಂತೂ ಮೋಸ್ಟ್ ಡೇಂಜರಸ್ ಎಂಬುದನ್ನು ನಾವೆಲ್ಲ ತಿಳಿದಿದ್ದೇವೆ. ಸೊಳ್ಳೆಗಳ ಆವಾಸಸ್ಥಾನವನ್ನು ಹುಡುಕಿ ನಿರ್ನಾಮವನ್ನು ಮಾಡಬೇಕಾದುದು ಎಲ್ಲ ನಾಗರೀಕರ ಕರ್ತವ್ಯ. ಇಲ್ಲದಿದ್ದರೆ ಸೊಳ್ಳೆಯ ಕಾಟಕ್ಕೆ ಬಲಿಯಾಗಬೇಕಾದೀತು ಎಚ್ಚರ!
ನಮ್ಮ ನಮ್ಮ ಮನೆಯಂಗಳದಲ್ಲಿ ಎಲ್ಲಾಂದರೂ ನೀರು ನಿಂತಿದೆಯೇ ಎಂಬುದನ್ನು ಗಮನಿಸುತ್ತಲೇ ಇರಬೇಕು .ಉದಾಹರಣೆಗೆ ಉಪಯೋಗಕ್ಕೆ ಬಾರದ ಟಯರ್ ಗಳು, ಪ್ಲಾಸ್ಟಿಕ್ ಬಾಟಲ್ ಗಳ ಒಳಗೆ ನೀರು ನಿಲ್ಲುವುದು ಸರ್ವೇ ಸಾಮಾನ್ಯ. ಆದ್ದರಿಂದ ಅಂತಹ ವಸ್ತಗಳಿಂದ ನೀರನ್ನು ಚೆಲ್ಲಿ ಮುಂದೆ ನೀರು ಬೀಳದಂತಹ ಪ್ರದೇಶಕ್ಕೆ ಅವುಗಳನ್ನು ರವಾನಿಸುವುದು ಉತ್ತಮ. ಮನೆಯಿಂದ ಹೊರಟ ಬಳಿಕವೂ ಅಷ್ಟೇ ಯಾರದ್ದಾದರೂ ಮನೆಯಂಗಳದಲ್ಲಿ, ಅಘಿವಾ ದಾರಿ ಬದಿಯಲ್ಲಿ ಯಾವುದಾದರೂ ವಸ್ತುವಿನೊಳಗೆ ನೀರು ನಿಂತಿದ್ದರೆ ನನಗೇನು ನನ್ನ ಮನೆಯಲ್ಲ ಎಂಬ ತಿರಸ್ಕಾರ ಭಾವವನ್ನು ತೋರದೇ ನನ್ನ ಸಮಾಜ ಎಂಬ ಉದಾತ್ತ ಭಾವದಿಂದ ಅವುಗಳನ್ನು ತೆರವುಗೊಳಿಸಿ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಬರುವಂತಹ ರೋಗವೂ ಕೂಡ ನಿಮ್ಮಿಂದಾಗಿ ತಪ್ಪುವ ಸಾಧ್ಯತೆ ಇದೆ. ರೋಗವು ನಮ್ಮನ್ನು ಭಾದಿಸುವ ಮುಂಚೆಯೇ ಜಾಗೃತರಾಗೋಣ, ಆರೋಗ್ಯವಂತರಾಗೋಣ.
-ವಿಕಾಸ್ ರಾಜ್ ಪೆರುವಾಯಿ
ವಿವಿ ಕಾಲೇಜು ಮಂಗಳೂರು