ಡೆಹ್ರಾಡೂನ್: ಸುಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಅಕ್ಷಯ ತೃತೀಯ ದಿನವಾಗಿರುವ ಮಂಗಳವಾರ ಚಾಲನೆ ನೀಡಲಾಗಿದೆ.
ಯಾತ್ರೆಯ ಆರಂಭಿಕ ಹಂತವಾಗಿ, ಉತ್ತರ ಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಹಾಗೂ ಯಮುನೋತ್ರಿ ದೇಗುಲಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ಗಂಗೋತ್ರಿ ದೇಗುಲವನ್ನು ಬೆಳಗ್ಗೆ 11.15ಕ್ಕೆ ಹಾಗೂ ಯಮುನೋತ್ರಿ ದೇಗುಲದ ಪ್ರವೇಶ ದ್ವಾರವನ್ನು 12.15ಕ್ಕೆ ತೆರೆಯಲಾಗಿದೆ.
ಚಾರ್‌ಧಾಮ್ ಯಾತ್ರೆಯ ಇನ್ನೆರಡು ಯಾತ್ರಾ ಸ್ಥಳಗಳಾದ ಕೇದಾರನಾಥ ದೇಗುಲವನ್ನು ಮೇ 6, ಬದ್ರಿನಾಥ್ ದೇಗುಲವನ್ನು ಮೇ 8ರಂದು ತೆರೆಯಲಾಗುತ್ತದೆ.
ಮಂಗಳವಾರ ಭಕ್ತಾದಿಗಳಿಗಾಗಿ ತೆರೆಯಲ್ಪಟ್ಟ ಗಂಗಾ ಮತ್ತು ಯಮುನಾ ದೇಗುಲಗಳಲ್ಲಿ ಇಬ್ಬರೂ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು. ದೇವತೆಗಳ ಮೂರ್ತಿಗಳನ್ನು ಅಲಂಕೃತಗೊಂಡಿದ್ದ ಪಲ್ಲಕ್ಕಿಗಳಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಈ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಂಡಿದ್ದ ಪುರೋಹಿತರು ಸ್ತೋತ್ರಗಳನ್ನು ಪಠಿಸುತ್ತಿದ್ದರು.
2019ರ ನಂತರದಲ್ಲಿ ಇದೇ ಮೊದಲ ಬಾರಿಗೆ ಚಾರ್‌ಧಾಮ್ ಯಾತ್ರೆಯನ್ನು ಆರಂಭಿಸಲಾಗಿದ್ದು, ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಆದರೂ, ದೇಗುಲಗಳಿಗೆ ಭೇಟಿ ನೀಡುವ ಭಕ್ತರ ದಿನಂಪ್ರತಿ ಸಂಖ್ಯೆಗೆ ಮಿತಿ ಹೇರಲಾಗಿದೆ.