ಲಕ್ನೋ: ಕೋವಿಡ್ 19 ವೈರಸ್ ಕಾರಣದಿಂದ ದೇಶವ್ಯಾಪಿ ಲಾಕ್ ಡೌನ್ ವಿಧಿಸಿದ ಪರಿಣಾಮ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಕಳೆದ 45 ದಿನಗಳಲ್ಲಿ ದೇಶದ ವಿವಿಧ ಕಡೆಗಳಿಂದ ರಾಜ್ಯಕ್ಕೆ ವಾಪಾಸಾಗಿದ್ದಾರೆ.
ಹೀಗೆ ರಾಜ್ಯಕ್ಕೆ ವಾಪಾಸಾಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಕಾರ್ಯತತ್ಪರವಾಗಿದ್ದು ಈ ನಿಟ್ಟಿನಲ್ಲಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ.
ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಅವರು ಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ‘ದಿನಗೂಲಿ ನೌಕರರು, ಕಟ್ಟಡ ನಿರ್ಮಾಣ ಕಾರ್ಮಿಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಜನ ಇದೀಗ ರಾಜ್ಯಕ್ಕೆ ಮರಳಿದ್ದಾರೆ ಮತ್ತು ಈ ಸಂಖ್ಯೆ ಸರಿಸುಮಾರು 5 ಲಕ್ಷದಷ್ಟಿದೆ, ಇವರಿಗೆಲ್ಲಾ ರಾಜ್ಯದಲ್ಲೇ ಪರ್ಯಾಯ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆದೇಶ ನೀಡಿದ್ದಾರೆ’ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಇವರಲ್ಲಿ ಹೆಚ್ಚಿನವರನ್ನು ಕೃಷಿ ಕ್ಷೇತ್ರದಲ್ಲಿ ನಿಯೋಜನೆಗೊಳಿಸಲಾಗುವುದು. ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಇಲಾಖೆಗಳ ಕಾರ್ಯದರ್ಶಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ ಹಾಗೂ ಕೃಷಿ ಉತ್ಪಾದನಾ ಆಯುಕ್ತರು ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಗರ್ಭಿಣಿಯರಿಗೆ ಹಾಗೂ ಅವರ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಈಗಾಗಲೇ ತಲುಪಿಸುವ ಕೆಲಸ ನಡೆಯುತ್ತಿದೆ ಮತ್ತು ಇದಕ್ಕಾಗಿ ರಾಜ್ಯ ಸರಕಾರ ಈಗಾಗಲೇ 50,810 ಜನರನ್ನು ತೊಡಗಿಸಿಕೊಂಡಿದೆ ಮತ್ತು ಶನಿವಾರ ಒಂದೇ ದಿನದಂದು 12.78 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ ಮತ್ತು ಇವುಗಳನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ತೆರೆಯಲಾಗಿರುವ ಸಮುದಾಯ ಅಡುಗೆ ಮನೆಗಳಲ್ಲಿ ತಯಾರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಇದೇ ಸಂದರ್ಭದಲ್ಲಿ ಬೇರೆ ರಾಜ್ಯಗಳಿಂದ ರಾಜ್ಯದೊಳಗೆ ಬರುವ ವ್ಯಕ್ತಿಗಳನ್ನು ಕಡ್ಡಾಯ ಹೋಂ ಕ್ವಾರೆಂಟೈನ್ ಮಾಡುವಲ್ಲಿಯೂ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂಬ ಮಾಹಿತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ನೀಡಿದ್ದಾರೆ.