ಲಕ್ನೋ: ಯಾವುದೇ ಕಚೇರಿ, ಕಾರ್ಖಾನೆಗಳಲ್ಲಿ ಹೆಣ್ಣು ಮಕ್ಕಳಿಗೆ ಬೆಳಗ್ಗೆ 6 ಗಂಟೆಗಿಂತ ಮೊದಲು ಮತ್ತು ಸಂಜೆ 7 ಗಂಟೆಯ ಅನಂತರ ಕೆಲಸ ಮಾಡುವಂತೆ ಹೇರಿಕೆ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ.
ಒಂದು ವೇಳೆ ಈ ನಿಗದಿತ ಅವಧಿಗಿಂತ ಹೆಚ್ಚಿನ ಅವಧಿಗೆ ಮಹಿಳೆಯರು ಕಚೇರಿಗಳಲ್ಲಿ, ಕಾರ್ಖಾ ನೆಗಳಲ್ಲಿ ಮುಂದುವರಿಯ ಬೇಕಾದ ಅಗತ್ಯತೆ ಕಂಡುಬಂದರೆ ಆ ಮಹಿಳಾ ಉದ್ಯೋಗಿಗಳಿಗೆ ಆ ಸಂಸ್ಥೆಯ ಮಾಲಕರು ಅಥವಾ ವ್ಯವಸ್ಥಾಪಕರು ರಾತ್ರಿಯ ಊಟ ನೀಡಬೇಕು,
ಕೆಲಸ ಮುಗಿದ ಅನಂತರ ಅವರಿಗೆ ಮನೆಗೆ ತೆರಳಲು ಸೂಕ್ತ ವಾಹನ ಸೌಕರ್ಯ ಕಲ್ಪಿಸಬೇಕು ಹಾಗೂ ಕಚೇರಿಯಲ್ಲಿ ಇರುವವರೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕೆಲಸದ ಸ್ಥಳದಲ್ಲಿ 4ಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಮಾತ್ರವೇ ಅವರಿಗೆ ಆ ಸಮಯದಲ್ಲಿ ಕೆಲಸಕ್ಕೆ ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ನಾಲ್ಕಕ್ಕಿಂತ ಕಡಿಮೆ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿರುವ ಎಲ್ಲ ಮಹಿಳೆಯರ ಅಭಿವೃದ್ಧಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತ ಗೊಳಿಸಿದ್ದು, ಆ ಹಿನ್ನೆಲೆಯಲ್ಲಿ ಇದು ಮಹಿಳೆಯರ ಸುರಕ್ಷತೆಗಾಗಿ ಕೈಗೊಳ್ಳಲಾಗಿರುವ ಹೊಸ ನಿರ್ಧಾರ ಎಂದು ಹೇಳಲಾಗಿದೆ.
ಇದಿಷ್ಟೇ ಅಲ್ಲ, ಮಹಿಳೆಯರು ಕೆಲಸ ಮಾಡುವ ಯಾವುದೇ ಕಚೇರಿಗಳಲ್ಲಿ ಅವರಿಗೆ ಅತ್ಯವಶ್ಯವಾದ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾದ ವಾಶ್‌ರೂಂಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು, ಸ್ವತ್ಛವಾದ ಕುಡಿಯುವ ನೀರಿನ ಸೌಕರ್ಯ, ಅವರು ಕೆಲಸ ಮಾಡುವ ಜಾಗದಲ್ಲಿ ಸೂಕ್ತ ಬೆಳಕಿನ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಲಾಗಿದೆ.