ಮಂಗಳೂರು: ಮಹಿಳೆಯರ ಶಕ್ತಿ ಸಾಮರ್ಥ್ಯ ಕುಟುಂಬಕ್ಕೆ ಸೀಮಿತವಾಗದೆ, ಉದ್ದಿಮೆಗಳ ಬೆಳವಣಿಗೆಗೆ, ತನ್ಮೂಲಕ ಆರ್ಥಿಕ ಅಭಿವೃದ್ಧಿಗೆ ವಿನಿಯೋಗವಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಶುಕ್ರವಾರ ದ.ಕ. ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಹಯೋಗದಲ್ಲಿ ಜಿ.ಪಂ. ಸಭಾಂಗಣದಲ್ಲಿ ಅಮೃತ್ ಸ್ವಸಹಾಯ ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಚೆಕ್ ವಿತರಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ ವಿವಿಧ ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ “ಅಮೃತ್’ ಹೆಸರಿನಲ್ಲಿ ಎಲ್ಲ ಇಲಾಖೆಗಳಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಸ್ತ್ರೀಶಕ್ತಿ ಸಂಘಟನೆಗಳು ವಿವಿಧ ಉದ್ದಿಮೆಗಳನ್ನು ಆರಂಭಿಸುವಂತೆ ಉತ್ತೇಜಿಸಲು ಬೀಜಧನ ಒದಗಿಸುವ ಕಾರ್ಯಕ್ರಮ ಈ ಪೈಕಿ ಒಂದು. ದ.ಕ. ಜಿಲ್ಲೆಯಲ್ಲಿ 185 ಸ್ತ್ರೀಶಕ್ತಿ ಸಂಘಟನೆಗಳಿಗೆ ತಲಾ 1 ಲಕ್ಷ ರೂ. ವಿತರಿಸಲಾಗುತ್ತದೆ. ಇದು ಸಾಲವಲ್ಲ; ಮರು ಪಾವತಿಯ ಪ್ರಮೇಯವಿಲ್ಲ. ಇದನ್ನು ಉದ್ಯಮಕ್ಕೆ ಮೂಲ ಬಂಡವಾಳವಾಗಿ ಬಳಸಬೇಕು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಜಿ.ಪಂ. ಸಿಇಒ ಡಾ| ಕುಮಾರ್ ಸ್ವಾಗತಿಸಿ, ಜಿಲ್ಲೆಯಲ್ಲಿ 5,200 ಸ್ವ ಸಹಾಯ ಗುಂಪುಗಳಿದ್ದು, 65,000 ಸದಸ್ಯರಿದ್ದಾರೆ. ಈ ಪೈಕಿ ಅಮೃತ ಸ್ವಸಹಾಯ ಉದ್ದಿಮೆ ಯೋಜನೆಗೆ 185 ಸ್ವ ಸಹಾಯ ಸಂಘಗಳನ್ನು ಆಯ್ಕೆ ಮಾಡುವುದು ಬಹಳ ಕಷ್ಟವಾಗಿತ್ತು. ಈ ಎಲ್ಲ ಸಂಘಗಳು ಆಹಾರ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆ ಪ್ರಾರಂಭಿಸುವ ಪ್ರಸ್ತಾವನೆ ಸಲ್ಲಿಸಿವೆ ಎಂದು ತಿಳಿಸಿದರು.
ತರಕಾರಿ ಕೃಷಿ
ಫಲಾನುಭವಿಗಳ ಪರವಾಗಿ ಕಡಬ ತಾಲೂಕಿನ ಉಜ್ವಲ ಸ್ತ್ರೀಶಕ್ತಿ ಗುಂಪಿನ ಸುನಿಲ ಅನಿಲ್ ಮಾತನಾಡಿ, ಗುಂಪಿನ ಸದಸ್ಯರು ಒಟ್ಟುಗೂಡಿ ಈಗಾಗಲೇ ತರಕಾರಿ ಬೆಳೆಸಿದ್ದಾರೆ.ಈ ಬೀಜಧನವನ್ನು ಉಪಯೋಗಿಸಿ ಇನ್ನೂ ಉತ್ತಮ ರೀತಿಯಲ್ಲಿ ಕೃಷಿ ಮಾಡಲಾಗುವುದು ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪಾಪ ಬೋವಿ ವೇದಿಕೆಯಲ್ಲಿದ್ದರು.
ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸರೋಜಿನಿ ಅವರು ವಂದಿಸಿದರು.
ರಾಜ್ಯದಲ್ಲಿ ಮೊದಲು
ಒಂದೇ ಜಿಲ್ಲೆಯಲ್ಲಿ 185 ಸ್ತ್ರೀಶಕ್ತಿ ಸಂಘಗಳಿಗೆ ತಲಾ 1 ಲಕ್ಷ ರೂ. ಬೀಜ ಧನ ಒದಗಿಸುತ್ತಿರುವುದು ರಾಜ್ಯದಲ್ಲಿಯೇ ಮೊದಲು ಎಂದು ಸಚಿವ ಸುನಿಲ್ ತಿಳಿಸಿದರು.