ತಿರುವನಂತಪುರಂ: ವಿಷ ಸರ್ಪವನ್ನು ಬಳಸಿ ವಿಶೇಷ ಚೇತನ ಪತ್ನಿಯನ್ನು ಕೊಂದಿರುವ ಪ್ರಕರಣದಲ್ಲಿ ಪತಿಯನ್ನು ದೋಷಿ ಎಂದು ಕೇರಳ ಕೋರ್ಟ್ ತೀರ್ಪು ನೀಡಿದ್ದು, ಅಕ್ಟೋಬರ್ 13ರಂದು ಶಿಕ್ಷೆಯನ್ನು ಪ್ರಕಟಿಸುವುದಾಗಿ ತಿಳಿಸಿದೆ. ಭಾರತೀಯ ದಂಡ ಸಂಹಿತೆ ಕಲಂ 302, 307, 328, 201ರ ಅನ್ವಯ ಆರೋಪಿ ಸೂರಜ್ ನನ್ನು ದೋಷಿ ಎಂದು ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ: ಪ್ರಮುಖ ಪಂದ್ಯಕ್ಕೂ ಮೊದಲೇ ಆರ್ ಸಿಬಿ ತಂಡದಿಂದ ಹೊರನಡೆದ ಇಬ್ಬರು ಸ್ಟಾರ್ ಆಟಗಾರರು!
ಘಟನೆಯ ವಿವರ:ಕೊಲ್ಲಂ ಜಿಲ್ಲೆಯ ನಿವಾಸಿಯಾದ ಸೂರಜ್ ಮರು ಮದುವೆಯಾಗಲು ಬಯಸಿದ್ದು, ಇದಕ್ಕಾಗಿ ತನ್ನ ಪತ್ನಿ(ವಿಶೇಷ ಚೇತನ) ಉತ್ರಾಳನ್ನು ಕೊಲ್ಲಲು ಹಾವನ್ನು ಖರೀದಿಸಿದ್ದ. 2020ರ ಮೇ 7ರಂದು ಅಂಚಲ್ ನಲ್ಲಿರುವ ನಿವಾಸದಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಹಾವು ಕಚ್ಚಿದ ಕಾರಣ ಉತ್ರಾ ಸಾವನ್ನಪ್ಪಿರುವುದಾಗಿ ದಾಖಲಾಗಿತ್ತು.
ಆದರೆ ಉತ್ರಾ ಕುಟುಂಬದ ಸದಸ್ಯರು ಸೂರಜ್ ಮತ್ತು ಆತನ ಮನೆಯವರು ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ದೂರನ್ನು ದಾಖಲಿಸಿದ್ದರು. ಸೂರಜ್ ಬಂಧನದ ನಂತರ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ವಿಶೇಷ ಚೇತನ ಪತ್ನಿ ಉತ್ರಾಗೆ ನಿದ್ದೆ ಮಾತ್ರೆ ಕೊಟ್ಟ ಬಳಿಕ ವಿಷಸರ್ಪವನ್ನು ಬಿಟ್ಟು ಕಚ್ಚುವಂತೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದ ಕಾರಣ ಪೊಲೀಸರು ತಾಂತ್ರಿಕ ಸಾಕ್ಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದರು ಎಂದು ವರದಿ ಹೇಳಿದೆ. ಹಣದ ದುರಾಸೆಯೇ ಕೊಲೆಗೆ ಪ್ರಮುಖ ಕಾರಣಾಗಿತ್ತು. ಸೂರಜ್ ಮದುವೆ ವೇಳೆ ದೊಡ್ಡ ಮೊತ್ತದ ವರದಕ್ಷಿಣೆ ಮತ್ತು ಚಿನ್ನಾಭರಣ ಪಡೆದಿದ್ದ. ಆದರೆ ವಿಶೇಷ ಚೇತನ ಪತ್ನಿ ಉತ್ರಾಳನ್ನು ಕೊಂದು, ಮತ್ತೊಂದು ವಿವಾಹವಾಗುವ ಸಂಚು ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.