Advertisement

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

08:38 AM Nov 24, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ವಿರುದ್ಧ ಶನಿವಾರ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನಟ ದರ್ಶನ್‌ ಪಟ್ಟಣಗೆರೆ ಶೆಡ್‌ ನಲ್ಲಿ ತನ್ನ ಸಹಚರರ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಆರೋಪಪಟ್ಟಿಯಲ್ಲಿ ಲಗತ್ತಿಸಿದ್ದಾರೆ. ಈ ಮೂಲಕ ನಟ ದರ್ಶನ್‌ಗೆ ಮತ್ತೂಂದು ಸಂಕಷ್ಟ ಎದುರಾಗಿದೆ.

Advertisement

ಪ್ರಕರಣ ಸಂಬಂಧ ಈಗಾಗಲೇ 4 ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು, ಇದೀಗ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. 35ಕ್ಕೂ ಹೆಚ್ಚು ಮಂದಿಯ ಸಾಕ್ಷಿಗಳು ಹಾಗೂ ಎಫ್ಎಸ್‌ಎಲ್‌ ಮತ್ತು ಇತರೆ ತಾಂತ್ರಿಕ ದಾಖಲೆಗಳು ಸೇರಿ 40ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೆಡ್‌ನ‌ಲ್ಲೇ 8 ಫೋಟೋಗಳು: ಈ ಹಿಂದೆ ದರ್ಶನ್‌ ಪರ ವಕೀಲರು, ರೇಣುಕಸ್ವಾಮಿ ಹತ್ಯೆ ವೇಳೆ ಪಟ್ಟಣಗೆರೆಯ ಜಯಣ್ಣನಿಗೆ ಸೇರಿದ ಶೆಡ್‌ನ‌ಲ್ಲಿ ನಟ ದರ್ಶನ್‌ ಇರಲಿಲ್ಲ ಎಂದು ವಾದಿಸಿದ್ದರು. ಆದರೆ, ಇದೀಗ ಪೊಲೀಸರು ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಕೊಲೆ ನಡೆದ ಶೆಡ್‌ನ‌ಲ್ಲಿ ನಟ ದರ್ಶನ್‌ ಮತ್ತು ಆತನ ನಾಲ್ಕೈದು ಮಂದಿ ಸಹಚರರು ತೆಗೆದುಕೊಂಡಿರುವ 8 ಫೋಟೋಗಳನ್ನು ಲಗತ್ತಿಸಿದ್ದಾರೆ.

ರೇಣುಕಸ್ವಾಮಿ ಜೂನ್‌ 8ರಂದು ಸಂಜೆ ಸುಮಾರು 6-8 ಗಂಟೆ ಅವಧಿಯಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ವರದಿ ನೀಡಿದ್ದರು. ಈ ಅವಧಿಯಲ್ಲಿ ದರ್ಶನ್‌ ಜತೆ ರಾಘವೇಂದ್ರ ಹಾಗೂ ಇತರೆ ಆರೋಪಿಗಳು ಶೆಡ್‌ನ‌ಲ್ಲೇ ಫೋಟೋ ತೆಗೆಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಪುನೀತ್‌ ಎಂಬಾತನೇ ಈ ಫೋಟೋ ತೆಗೆದು, ರಾಘವೇಂದ್ರ ಸೇರಿ ಕೆಲ ಆರೋಪಿಗಳ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ.

ಆದರೆ, ಕೃತ್ಯ ಬಯಲಿಗೆ ಬರುತ್ತಿದ್ದಂತೆ ಪ್ರಕರಣ 10ನೇ ಆರೋಪಿ ವಿನಯ್‌, ಪುನೀತ್‌ ಮೊಬೈಲ್‌ ಪಡೆದು ಎಲ್ಲವನ್ನು ಡಿಲೀಟ್‌ ಮಾಡಿದ್ದ. ಆದರೆ, ಇದೀಗ ಪುನೀತ್‌ ಮೊಬೈಲ್‌ ರಿಟ್ರೈವ್‌ ಮಾಡಲಾಗಿದ್ದು, 8 ಫೋಟೋ ಸಿಕ್ಕಿವೆ. ಈ ಎಲ್ಲಾ ಫೋಟೋಗಳನ್ನು ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕೃತ್ಯ ಎಸಗಿ ಮರಳುವಾಗ ತೆಗೆದ ಫೋಟೋಗಳು ಚಿತ್ರದುರ್ಗದ ರೇಣುಕಸ್ವಾಮಿ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿದ ಬಳಿಕ ನಟ ದರ್ಶನ್‌ ಅವರು ತಮ್ಮ ಮನೆ ಕಡೆ ಹೊರಟಿದ್ದರು. ಆಗ ಆರೋಪಿ ರಾಘವೇಂದ್ರ ಹಾಗೂ ಇತರರು, “ಬಾಸ್‌(ದರ್ಶನ್‌) ಒಂದು ಪೋಟೋ ತೆಗೆದುಕೊಳ್ಳೋಣ’ ಎಂದಿದ್ದಾರೆ. ಆಗ ಸ್ಥಳದಲ್ಲಿದ್ದ ಪುನೀತ್‌, ತನ್ನ ಮೊಬೈಲ್‌ನಿಂದ ದರ್ಶನ್‌ ಮತ್ತು ರಾಘವೇಂದ್ರ ಹಾಗೂ ಇತರರು ಇರುವ ಫೋಟೋ ತೆಗೆದಿದ್ದ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಜಾಮೀನು ಅರ್ಜಿ ನಾಡಿದ್ದಿಗೆ ಮುಂದೂಡಿಕೆ ಮತ್ತೂಂದೆಡೆ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನ.26ಕ್ಕೆ ಮುಂದೂಡಿದೆ. ಈ ಮಧ್ಯೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದರಿಂದ, ಜಾಮೀನು ಅರ್ಜಿ ವಿಚಾರಣೆಯನ್ನು ಇನ್ನಷ್ಟು ತಿಂಗಳು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗಾಗಿ ಇದು ದರ್ಶನ್‌ಗೆ ಮತ್ತೂಂದು ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next