ಬೆಂಗಳೂರು: ಬಡ್ಡಿ ಸಮೇತ ಸಾಲ ತೀರಿಸಿದ್ದರೂ ಐಡಿಬಿಐ ಬ್ಯಾಂಕ್ ನಮಗೆ ಇನ್ನೂ ಋಣಮುಕ್ತ ಪತ್ರ ನೀಡಿಲ್ಲ ಎಂದು ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್‌ಎಲ್) ಕಂಪನಿ ಹೈಕೋರ್ಟ್ ಸೋಮವಾರ ಆಕ್ಷೇಪಣೆ ಸಲ್ಲಿಸಿದೆ.
ಸಾಲ ಮರು ಪಾವತಿ ವಿವಾದಕ್ಕೆ ಸಂಬಂಧಿಸಿದಂತೆ ಐಡಿಬಿಐ ವಿರುದ್ಧ ಯುಎಸ್‌ಎಲ್ ಸಲ್ಲಿಸಿರುವ ಅರ್ಜಿಯು ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಯುಎಸ್‌ಎಲ್ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪಿ.ಚಿದಂಬರಂ, ಉದ್ಯಮಿ ವಿಜಯ ಮಲ್ಯ ಅವರು ಯುಎಸ್‌ಎಲ್ ಅಧ್ಯಕ್ಷರಾಗಿದ್ದಾಗ ತಮ್ಮದೇ ಒಡೆತನದ ಕಿಂಗ್‌ಫಿಷರ್ ಸಂಸ್ಥೆಗೆ ಐಡಿಬಿಐನಿಂದ ಸಾಲ ಪಡೆದಿದ್ದರು.
ಹಾಗಂತ ಈಗ ಆ ಸಾಲಕ್ಕೆ ಯುಎಸ್‌ಎಲ್‌ನ್ನು ಹೊಣೆ ಮಾಡುವುದು ಸರಿಯಲ್ಲ. ಅಷ್ಟಕ್ಕೂ ಕಂಪೆನಿಯು 650 ಕೋಟಿ ರೂ. ಸಾಲವನ್ನು ಈಗಾಗಲೇ ಬಡ್ಡಿಸಮೇತ ಹಿಂದಿರುಗಿಸಿದೆ. ಆದರೂ, ಐಡಿಬಿಐ ಬ್ಯಾಂಕ್ ಭದ್ರತಾ ಖಾತರಿ ವಾಪಸ್ ನೀಡದಿರುವುದು ಆಕ್ಷೇಪಾರ್ಹ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐಡಿಬಿಐ ಪರ ವಕೀಲರು, ಸಾಲ ನೀಡುವಾಗ ವಿಜಯ್ ಮಲ್ಯ ಯುಎಸ್‌ಎಲ್ ಕಂಪೆನಿಗೆ ಅಧ್ಯಕ್ಷರಾಗಿದ್ದರು. ಆ ಕಾರಣಕ್ಕಾಗಿಯೇ ಸಾಲ ನೀಡಲಾಗಿತ್ತು. ಕಿಂಗ್‌ಫಿಷರ್ ಸಂಸ್ಥೆಗೆ ನೀಡಿದ್ದ ಸಾಲಕ್ಕೆ ಯುಬಿಎಚ್‌ಎಲ್ ಕಾಪೋರೇಟ್ ಗ್ಯಾರಂಟಿ ನೀಡಿತ್ತು.
ಈಗ ಮಲ್ಯ ಅವರು ಆ ಸ್ಥಾನದಲ್ಲಿ ಇಲ್ಲ ಎಂಬ ಮಾತ್ರಕ್ಕೆ ಸಾಲದ ಹೊಣೆಯಿಂದ ನುಣಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಐಡಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.