ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿನ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವುದಕ್ಕೆ ವರ್ಲ್ಡ್ ವೈಡ್ ವೆಟರ್ನರಿ ಸರ್ವೀಸಸ್ (ವಿಶ್ವ ಪಶು ವೈದ್ಯಕೀಯ ಸೇವಾ ಸಂಸ್ಥೆ)ನ ಆ್ಯಪ್ ಬಳಸಲು ಪಾಲಿಕೆ ಮುಂದಾಗಿದೆ.
ಬಿಬಿಎಂಪಿಯುವಿಶ್ವವೈದ್ಯಕೀಯ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಗರದಲ್ಲಿನ ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿರುವ ಮಾಹಿತಿಯನ್ನು ಆ್ಯಪ್ ಮೂಲಕ ದಾಖಲು ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ನಾಗರಬಾವಿ ಹಾಗೂ ಹಾರೋಹಳ್ಳಿ ವಾರ್ಡ್‌ಗಳಲ್ಲಿ ಪ್ರಾರಂಭಿಸಿದೆ.
ಪಾಲಿಕೆವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಸುವ ಯೋಜನೆ ಪ್ರಾರಂಭಿಸಿದ್ದು, ಇದು ಯಶಸ್ವಿಯಾದರೆ ಉಳಿದ ವಾರ್ಡ್‌ಗಳಲ್ಲೂ ಇದೇ ಮಾದರಿ ಮುಂದುವರಿಸುವ ಚಿಂತನೆ ಇದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ನಾಯಿಗಳಿಗೆ ಪ್ರತಿ ವರ್ಷ ರೇಬಿಸ್ ಚುಚ್ಚುಮದ್ದು ನೀಡಬೇಕಾಗುತ್ತದೆ. ಮೊದಲ ಬಾರಿ ನಾಯಿಗಳಿಗೆ ಎಬಿಸಿ (ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಇದಾದ ಮೇಲೂ ಪ್ರತಿ ವರ್ಷ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಮೊದಲ ಬಾರಿ ನೀಡಿದ ನಂತರ ಎರಡನೇ ಬಾರಿ ಲಸಿಕೆ ನೀಡುವಾಗ ಕೆಲವೊಮ್ಮೆ ಗೊಂದಲ ಸೃಷ್ಟಿಯಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಆ್ಯಪ್ ಬಳಸಿ ಯಾವ ಭಾಗದಲ್ಲಿ ನಾಯಿಗಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಮ್ಯಾಪಿಂಗ್ ಮಾಡಲಾಗುತ್ತಿದೆ. ಈ ವಾರ್ಡ್‌ಗಳಲ್ಲಿ ಯಶಸ್ವಿಯಾದರೆ ಉಳಿದ ವಾರ್ಡ್ ಗಳಲ್ಲೂ ವಿಸ್ತರಣೆ ಮಾಡಲಾಗುವುದು ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಎಸ್. ಶಶಿಕುಮಾರ್ ಉದಯವಾಣಿಗೆ ತಿಳಿಸಿದರು.
ಸಾರ್ವಜನಿಕರಲ್ಲೂ ಜಾಗೃತಿಗೆ ಚಿಂತನೆ: ನಗರದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದ ಮೇಲೆ ವಿಶ್ವ ವೈದ್ಯಕೀಯ ಸೇವಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಆ್ಯಪ್ ಬಳಸಿ ಆ ನಿರ್ದಿಷ್ಟ ಭಾಗವನ್ನು ಮ್ಯಾಪಿಂಗ್ ಮಾಡಲಾಗುತ್ತದೆ. ಇದರಿಂದ ಯಾವ ಪ್ರದೇಶದಲ್ಲಿ ರೇಬಿಸ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಸಿಗಲಿದೆ. ಅಲ್ಲದೆ, ರೇಬಿಸ್ ಚುಚ್ಚುಮದ್ದು ನೀಡುವ ವೇಳೆಯೇ ಆ ಪ್ರದೇಶದಲ್ಲಿ ಯಾರಿಗಾದರೂ ನಾಯಿ ಕಚ್ಚಿದೆಯೇ ಎಂಬ ಬಗ್ಗೆಯೂ ಪಾಲಿಕೆ ಪರಿಶೀಲನೆ ನಡೆಸಲಿದ್ದು, ಅವರಿಗೂ ಚುಚ್ಚುಮದ್ದು ನೀಡುವುದು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪಾಲಿಕೆ ಯೋಜನೆ ರೂಪಿಸಿಕೊಂಡಿದೆ.
ಚುಚ್ಚುಮದ್ದು ನೀಡುವ ಅಗತ್ಯವೇನು?: ನಗರದಲ್ಲಿ ಪ್ರತಿ ವರ್ಷ ಅಂದಾಜು 15 ಜನ ರೇಬಿಸ್ (ಹುಚ್ಚುನಾಯಿ ಕಡಿತ)ದಿಂದ ಸಾವನ್ನಪ್ಪುತ್ತಿದ್ದಾರೆ. ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದರೆ, ಆ ನಾಯಿ ಯಾರಿಗಾದರೂ ಕಚ್ಚಿದರೂ ಅವರು ತೀರ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಕಡಿಮೆ. ಹೀಗಾಗಿ, ರೇಬಿಸ್ ಚುಚ್ಚುಮದ್ದು ನೀಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ವರ್ಷವೂ ಸೆ. 28ಕ್ಕೆ ವಿಶ್ವ ರೇಬಿಸ್ ರೋಗ ತಡೆ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಪಾಲಿಕೆಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಚೇತರಿಕೆ: ನಗರದಲ್ಲಿ ಒಂದು ತಿಂಗಳಲ್ಲಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡುವ ಪ್ರಮಾಣದಲ್ಲೂ ತುಸು ಚೇತರಿಕೆ ಕಂಡಿದೆ. ಕೋವಿಡ್ ಸೋಂಕು ಭೀತಿಯಿಂದಾಗಿ ನಾಯಿಗಳ ಎಬಿಸಿಗೆ ಹಿನ್ನೆಡೆ ಉಂಟಾಗಿತ್ತು. ಇದೀಗ ಮತ್ತೆ ಎಬಿಸಿ ಪ್ರಕ್ರಿಯೆಗಳು ಪ್ರಾರಂಭವಾಗಿದೆ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಇನ್ನೂ ಹಿನ್ನಡೆ: ಬೊಮ್ಮನಹಳ್ಳಿಯಲ್ಲಿ ಉಳಿದ ವಲಯಗಳಷ್ಟೂ ಎಬಿಸಿ ಆಗಿಲ್ಲ. ಉಳಿದ ವಲಯಗಳಲ್ಲಿ ಎಬಿಸಿ ತುಸು ಚೇತರಿಕೆ ಕಂಡಿದೆಯಾದರೂ, ಬೊಮ್ಮನಹಳ್ಳಿ ವಲಯದಲ್ಲಿ ಎಬಿಸಿ ಪ್ರಮಾಣ ಶೂನ್ಯದಲ್ಲೇ ಮುಂದುವರಿದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಡಾ. ಎಸ್. ಶಶಿಕುಮಾರ್ ಅ. 1ರಿಂದ ಬೊಮ್ಮನಹಳ್ಳಿಯಲ್ಲಿ ನಾಯಿಗಳ ಎಬಿಸಿ ಪ್ರಕ್ರಿಯೆ ಕಾರ್ಯಾರಂಭವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.