ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದವು. ಗದಗ ಜಿಲ್ಲೆ ರಚನೆಯಾಗಿ ಆಗಸ್ಟ್ 24ಕ್ಕೆ 25ರ ಸಂಭ್ರಮ. ಜತೆಗೆ ಬರುವ ಅಕ್ಟೋಬರ್‌ಗೆ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ಮಹೇಶ ದಾಸರ ಅವರಿಗೂ ಜನ್ಮದಿನದ ಬೆಳ್ಳಿಹಬ್ಬದ ಸಡಗರ.
ಉಷಾ ಅವರು ಗದಗ-ಬೆಟಗೇರಿ ನಗರಸಭೆ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ(25 ರ್ಷ)ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2022ರ ಜನವರಿ 24ರಂದು ನಗರಸಭೆ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಉಷಾ ದಾಸರ ಅವರು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ, ಸಂಸದರಾದ ಶಿವಕುಮಾರ್ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಮಾರ್ಗದರ್ಶನ ಹಾಗೂ ಪತಿ ಮಹೇಶ ದಾಸರ ಅವರ ಸಹಕಾರದೊಂದಿಗೆ ಅವಳಿ ನಗರದ ಶ್ರೇಯೋಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಜನರಿಗೆ ಮೂಲಸೌಕರ್ಯ ಕಲ್ಪಿಸಿ ಕೊಡುವುದರೊಂದಿಗೆ ಸಾರ್ವಜನಿಕರ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.
ಉಷಾ ದಾಸರ ಅವರ ಮಾವ ಸಂಘಟನಾ ಚರುತರಾಗಿದ್ದ ವೆಂಕಟೇಶ ಭೀಮದಾಸ ದಾಸರ ಅವರು ತಮ್ಮ ಜೀವಿತಾವಧಿವರೆಗೂ ದಲಿತರ, ಶೋಷಿತರ ಧ್ವನಿಯಾಗಿದ್ದರು. ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಅದರಂತೆ ತಂದೆ ವೆಂಕಟೇಶ ದಾಸರ ಅವರು ಕೊಪ್ಪಳ ನಗರಸಭೆ 27ನೇ ವಾರ್ಡ್‌ನ ಸದಸ್ಯರಾಗಿದ್ದರು. ಸಂಘಟನೆ ಹಾಗೂ ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ಉಷಾ ಅವರು ಪ್ರಥಮ ಪ್ರಯತ್ನದಲ್ಲೇ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾಗಿದ್ದಾರೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದು, ಅವಳಿ ನಗರದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ.
ಡಿಪ್ಲೊಮಾನಲ್ಲಿ ಇಲೆಕ್ಟ್ರಾನಿಕ್ ಶಿಕ್ಷಣ ಪಡೆದಿರುವ ಉಷಾ ದಾಸರ ಅವರು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾಗಿ ಅಧಿ ಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಹಲವು ವರ್ಷಗಳಿಂದ ಮನೆ-ಮನೆಗೆ ಹೋಗಿ ಕಸ ಸಂಗ್ರಹಿಸುವ ನಗರಸಭೆ ವ್ಯಾಪ್ತಿಯ ಗಂಟೆ ಗಾಡಿಯ ಪೌರ ಕಾರ್ಮಿಕರಿಗಿದ್ದ 5,000 ರೂ. ವೇತನವನ್ನು 6,500 ರೂ.ಗೆ ಹೆಚ್ಚಳ ಮಾಡಿ ಪೌರ ಕಾರ್ಮಿಕರ ಮೇಲಿನ ಕಾಳಜಿ ತೋರಿಸಿದ್ದಾರೆ. ಪೌರ ಕಾರ್ಮಿಕರ ಸೇವೆಯನ್ನು ಗೌರವಿಸಿ ರûಾ ಬಂಧನದಂದು ಅವರಿಗೆ “ರಾಖೀ’ ಕಟ್ಟಿ ಸಹೋದರತೆಯ ಪ್ರೀತಿ ತೋರಿದ್ದಾರೆ. ಬೆಳ್ಳಂಬೆಳಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಪರಿಹರಿಸುವತ್ತ ಕಾರ್ಯಪ್ರವೃತ್ತರಾಗಿದ್ದಾರೆ. ಉಷಾರವರ ಪ್ರತಿಯೊಂದು ಕಾರ್ಯಕ್ಕೂ ಆಡಳಿತ ಪಕ್ಷದ ಸದಸ್ಯರು ಸಾಥ್ ನೀಡುತ್ತಿದ್ದು, ಆನೆ ಬಲಬಂದಂತಾಗಿದೆ.
ಕಳೆದ ಐದಾರು ವರ್ಷಗಳಿಂದ ಅವಳಿ ನಗರದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದ್ದರೂ ಕೆಲ ಲೋಪದೋಷಗಳಿಂದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ದೊರಕುತ್ತಿಲ್ಲ. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಉಷಾ ಅವರು ಮಗ್ನರಾಗಿದ್ದಾರೆ. ದಿನದ 24 ಗಂಟೆಗಳ ಕಾಲ ಜನರಿಗೆ ನೀರು ಸಿಗಬೇಕೆಂಬ ಮಹದಾಸೆ ಹೊಂದಿರುವ ಇವರು, ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗದಂತೆ ತಡೆಗಟ್ಟಲು ಕ್ರಮ ವಹಿಸುತ್ತಿದ್ದಾರೆ. ಮುಖ್ಯ ಪೈಪ್‌ಲೈನ್ ದುರಸ್ತಿ ನಡೆಯುತ್ತಿರುವ ಸ್ಥಳಗಳಿಗೆ ಕಾಲಕಾಲಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡುತ್ತಿದ್ದಾರೆ.
ಸುಮಾರು 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಎಸ್‌ಎಫ್‌ಸಿ, 15ನೇ ಹಣಕಾಸು ಹಾಗೂ ಮುಖ್ಯಮಂತ್ರಿ ಅಮೃತ ನಗರೋತ್ಥಾನ 4ನೇ ಹಂತದ 34 ಕೋಟಿ ರೂ. ವೆಚ್ಚದಲ್ಲಿ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರಗಳು ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಾರೆ. ಈಗಾಗಲೇ 15ನೇ ಹಣಕಾಸು ಯೋಜನೆಯಡಿ ಗದಗ ಮತ್ತು ಬೆಟಗೇರಿ ಭಾಗದಲ್ಲಿ ಗ್ಯಾಸ್ ಚಿತಾಗಾರ ನಿರ್ಮಿಸಲು ಕ್ರಮ ವಹಿಸಿದ್ದಾರೆ. ಅವಳಿ ನಗರದ ಸ್ವತ್ಛತೆಗಾಗಿ ಅಮೃತ ನಿರ್ಮಲನಗರ ಯೋಜನೆಯಡಿ 1 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ನಗರದ ಸ್ವತ್ಛತೆಗಾಗಿ ರೋಡ್ ಸ್ವಿಪಿಂಗ್ ಮತ್ತು ಜೆಟ್ಟಿಂಗ್ ವಾಹನಗಳಿಗೆ ಕಾರ್ಯಾದೇಶ ನೀಡಿದ್ದಾರೆ. ಸೆಂಟ್ರಲೈಜಡ್ ಕಂಟ್ರೋಲ್ ಮಾನಟ್ರಿಂಗ್ ಸಿಸ್ಟಂ(ಸಿಸಿಎಂಎಸ್) ಯೋಜನೆಯಡಿ ಹೊಸ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಅಮೃತ 2.0 ಯೋಜನೆಯಡಿ ಕೆರೆ, ಉದ್ಯಾನಗಳನ್ನು ಅಭಿವೃದ್ಧಿಗೊಳಿಸಲಿದ್ದಾರೆ.
ಜನರ ಸಂಪೂರ್ಣ ಸಹಕಾರದೊಂದಿಗೆ ಗದಗ-ಬೆಟಗೇರಿ ಅವಳಿ ನಗರದ ಸವಾಂìಗೀಣ ಅಭಿವೃದ್ಧಿಗೆ ಉಷಾ ಮಹೇಶ ದಾಸರ ಕಂಕಣಬದ್ಧರಾಗಿದ್ದಾರೆ.