ವಾಡಿ: ವೈಯಕ್ತಿಕ ಶೌಚಾಲಯ ಸೌಕರ್ಯ ಹೊಂದುವುದರಿಂದ ಗ್ರಾಮಗಳು ಸ್ವತ್ಛತೆಯಿಂದ ಕೂಡಿರುವುದಲ್ಲದೆ, ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿ ಇರುತ್ತವೆ ಎಂದು ನಾಲವಾರ ವಲಯ ಬಿಆರ್‌ಪಿ ದತ್ತಪ್ಪ ಡೋಂಬಳೆ ಹೇಳಿದರು.
ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಆಕಾಶವಾಣಿ ರೇಡಿಯೋ ಕಾರ್ಯಕ್ರಮ ಹಾಗೂ ಜಿಪಂ ಸಿಇಒ ರೂಪಿತ ಸಿರಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಬಯಲು ಶೌಚಾಲಯ ಬಳಕೆಯೊಂದು ಅನಾಗರಿಕ ಪದ್ಧತಿಯಾಗಿದೆ. ದೈನಂದಿನ ಮನುಷ್ಯ ಜೀವನದ ನೈಸರ್ಗಿಕ ಕ್ರಿಯೆಗಳನ್ನು ಬಯಲಲ್ಲಿ ಮುಗಿಸುವುದರಿಂದ ಪರಿಸರ ಕಲುಷಿತಗೊಳ್ಳುತ್ತದೆ. ಅಲ್ಲದೇ ರೋಗಾಣುಗಳ ಜನನಕ್ಕೆ ಕಾರಣವಾಗುತ್ತದೆ ಎಂದರು.
ಅಕ್ಷರ ಜ್ಞಾನ ಸಂಪಾದಿಸಿರುವ ವಿದ್ಯಾರ್ಥಿನಿಯರು, ಮನೆಯಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗುವಂತೆ ಪೋಷಕರ ಮೇಲೆ ಒತ್ತಡ ಹಾಕಬೇಕು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಸ್ವತ್ಛ ಭಾರತ ಯೋಜನೆಯಡಿ ಗ್ರಾಪಂ ಮೂಲಕ ಸಹಾಯ ಧನ ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಹರೆಯದ ಹೆಣ್ಣು ಮಕ್ಕಳು ಬಯಲಿಗೆ ಹೋಗುವುದನ್ನು ತಡೆಯುವುದು ಮುಖ್ಯವಾಗಿದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ವಿವರಿಸಿದರು.
ಸಹ ಶಿಕ್ಷಕಿ ಯಶೋಧಾ ರೆಡ್ಡಿ ಮಾತನಾಡಿ, ಬಯಲು ಶೌಚಾಲಯದಿಂದ ಭೂ ಮಾಲಿನ್ಯ ಉಂಟಾಗುತ್ತದೆ. ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅನಾಗರಿಕ ಆಚರಣೆಗಳು ರದ್ದಾಗುತ್ತಿಲ್ಲ. ಮೂಲ ಸೌಕರ್ಯಗಳಿಂದ ಕೂಡಿರುವ ಗ್ರಾಮವು ಗ್ರಾಮಸ್ಥರ ಪ್ರಜ್ಞಾವಂತಿಕೆಗೆ ಸಾಕ್ಷಿಯಾಗುತ್ತದೆ ಎಂದರು.
ಮುಖ್ಯಶಿಕ್ಷಕ ಮಹಿಮೂದ್ ಪಾಶಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಬಸವರಾಜ ಗಂಜಿ, ಶಿಕ್ಷಕರಾದ ವೀರಣ್ಣ ಪಂಚಾಳ, ಜಗನ್ನಾಥಗೌಡ ಪಾಟೀಲ. ಶಿಕ್ಷಕಿ ಜಯಶ್ರೀ ಶಿರವಾಳ, ಶಾರದಾ ಗಾಯಕವಾಡ, ಶೈಲಶ್ರೀ, ಗ್ರಾಮದ ಮುಖಂಡ ಗಣೇಶ ಗುತ್ತೇದಾರ ಪಾಲ್ಗೊಂಡಿದ್ದರು. ಸ್ವಚ್ಚತಾ ಜಾಗೃತಿ ಕುರಿತು ಏರ್ಪಡಿಸಲಾಗಿದ್ದ ರೇಡಿಯೋ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಆಲಿಸಿದರು.