Advertisement

ಗಬ್ಬೆದ್ದು ನಾರುತ್ತಿದೆ ಆದಿ ಉಡುಪಿ ಮಾರುಕಟ್ಟೆ ಶೌಚಾಲಯ

04:06 PM Jun 18, 2024 | Team Udayavani |

ಉಡುಪಿ: ದಿನಕ್ಕೆ ನೂರಾರು ಮಂದಿ ಭೇಟಿ ನೀಡುವ ಆದಿಉಡುಪಿಯ ಮೀನು ಮಾರುಕಟ್ಟೆಯ ಒಳಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ. ಶೌಚಾಲಯ ಕೊಠಡಿಗಳನ್ನು ಸ್ವತ್ಛಗೊಳಿಸದೆ ಹಲವಾರು ವರ್ಷಗಳೇ ಕಳೆದಂತಿದೆ. ಇದರ ಒಳಭಾಗದಲ್ಲಿ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್‌ ಬಾಟಲಿಗಳು ತುಂಬಿಕೊಂಡಿವೆ.ಗೋಡೆಗಳ ಬಣ್ಣವೂ ಮಾಸಿ ಹೋಗಿದ್ದು, ಜೇಡರ ಬಲೆಗಳು ಆವರಿಸಿಕೊಂಡಿವೆ.

Advertisement

ಸೊಳ್ಳೆಗಳ ಉತ್ಪತ್ತಿ ತಾಣ
ಈ ಶೌಚಾಲಯವು ಮಾರಕ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಶೌಚಾಲಯವು ಸುಸ್ಥಿತಿಯಲ್ಲಿಲ್ಲದ ಕಾರಣ ಮೀನು ಮಾರುಕಟ್ಟೆಗೆ ಬರುವ ಗ್ರಾಹಕರು, ವ್ಯಾಪಾರಸ್ಥರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇದರ ಒಳಪ್ರವೇಶಿಸುವುದೇ ಅಸಾಧ್ಯವಾಗಿದೆ. ಮುಖ್ಯವಾಗಿ ಶೌಚಾಲಯದ ಒಳಭಾಗದಲ್ಲಿ ನೀರು ನಿಂತಿದೆ.

ಎಲ್ಲರೂ ಅದರ ಮೇಲೆ ಶೌಚ ಮಾಡಿ ಹೋಗುತ್ತಿರುವುದರಿಂದ ಇದು ಸೊಳ್ಳೆ ಉತ್ಪಾದನ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿ 15ಕ್ಕೂ ಅಧಿಕ ಅಂಗಡಿಗಳಿದ್ದು, ಎಲ್ಲರೂ ಇದನ್ನೇ ಆಶ್ರಯಿಸಿಕೊಂಡಿದ್ದಾರೆ. ನಿರ್ವಹಣೆ ಬಗ್ಗೆ ಸ್ಥಳಿಯಾಡಳಿತಕ್ಕೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರೊಬ್ಬರು.

ನಗರಸಭೆಯಿಂದ ನೀರು ಪೂರೈಕೆ
ಈ ಮಾರುಕಟ್ಟೆಗೆ ನೀರು ಪೂರೈಕೆ ನಗರಸಭೆಯ ಮೂಲಕವೇ ನಡೆಯುತ್ತಿದೆ. ಬುಧವಾರ ಇಲ್ಲಿ ವಾರದ ಸಂತೆ ನಡೆಯುವ ವೇಳೆ ಹಾಗೂ ರವಿವಾರದಂದು ಅಧಿಕ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸೇರುತ್ತಾರೆ. ಆದರೂ ಇಲ್ಲಿನ ಶೌಚಾಲಯದ ಬಗ್ಗೆ ಸೂಕ್ತ ನಿರ್ವಹಣೆ ಮಾಡದಿರುವ ಕಾರಣ ಗಬ್ಬು ನಾತ ಮಾರುಕಟ್ಟೆಯ ಹೊರಭಾಗದವರೆಗೂ ವಿಸ್ತರಿಸಿ ಜನರೇ ಅಸಹ್ಯ ಪಟ್ಟುಕೊಳ್ಳುವಂತಾಗಿದೆ.

ಕೆಲವು ವರ್ಷಗಳ ಹಿಂದೆ ಶವ ಪತ್ತೆ
5 ವರ್ಷಗಳ ಹಿಂದೆ ಈ ಮಾರುಕಟ್ಟೆಯಲ್ಲಿದ್ದ ಶೌಚಗುಂಡಿಗೆ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿದ್ದರು. ಆದರೆ ಹಲವು ದಿನಗಳವರೆಗೂ ಯಾರಿಗೂ ತಿಳಿದಿರಲಿಲ್ಲ. ಅನಂತರ ಕೊಳೆತ ವಾಸನೆ ಬಂದು ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ
ಶವ ಪತ್ತೆಯಾಗಿತ್ತು. ಅನಂತರ ಕೆಲವು ಬಾರಿ ಸ್ಥಳೀಯಾಡಳಿತ ಇದರ ನಿರ್ವಹಣೆ ನೋಡಿಕೊಂಡಿತ್ತಾದರೂ ಈಗ ಮತ್ತೆ ಅದೇ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು.

Advertisement

ಶುಚಿತ್ವಕ್ಕೆ ಕ್ರಮ
ಈ ಹಿಂದೆ ನಡೆದ ಮಾತುಕತೆಯಂತೆ ಮಾರುಕಟ್ಟೆಯವರೇ ಅದರ ನಿರ್ವಹಣೆ ಮಾಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಮತ್ತೂಮ್ಮೆ ಅವರ ಬಳಿ ಚರ್ಚಿಸಲಾಗುವುದು. ಇಲ್ಲದಿದ್ದರೆ ನಗರಸಭೆಯ ಮೂಲಕವೇ ತ್ವರಿತವಾಗಿ ಇದರ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು.
-ರಾಯಪ್ಪ, ಪೌರಾಯುಕ್ತರು, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next