Advertisement

ಸಾಮಾಜಿಕ ಜಾಲತಾಣ ಧನಾತ್ಮಕವಾಗಿ ಬಳಸಿ: ನವೀನ್‌ ಕುಮಾರ್‌ ಪುತ್ರಕಳ

07:35 AM Jul 05, 2018 | |

ಕಾಸರಗೋಡು: ಜಗತ್ತು ವೇಗವಾಗಿ ಬದಲಾಗುತ್ತಿರುವಾಗ ಆ ಬದಲಾವಣೆಗಳನ್ನು ಅರಿತುಕೊಂಡು ಅದರೊಂದಿಗೆ ಹೆಜ್ಜೆ ಹಾಕದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಗೆಲುವನ್ನು ಪಡೆಯಬೇಕಿದ್ದರೆ ಹೊಸ ಹೊಸ ವಿಷಯಗಳಿಗೆ  ತೆರೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳನ್ನು ಧನಾತ್ಮಕವಾಗಿ  ಬಳಸಿಕೊಳ್ಳುವ ಮೂಲಕ ನಾವು ಬೆಳೆಯುವುದಕ್ಕೆ ಸಾಧ್ಯ. ಉದ್ಯೋಗ ಮಾಹಿತಿಗೆ ಸಂಬಂಧಿಸಿದ ಹಲವು ಜಾಲತಾಣಗಳು ಇಂದು ಲಭ್ಯವಿವೆ. ಅವುಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಬೆಳ್ಳೂರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಅಧ್ಯಾಪಕ ನವೀನ್‌ ಕುಮಾರ್‌ ಪುತ್ರಕಳ ಅಭಿಪ್ರಾಯಪಟ್ಟರು.

Advertisement

ಅವರು ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು  ಇದರ ಆಶ್ರಯದಲ್ಲಿ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆದ ಮೂರನೇ ಉದ್ಯೋಗ ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕೇರಳದ ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರ, ಪಾಲಾ^ಟ್‌, ಕಲ್ಲಿಕೋಟೆ, ತೃಶ್ಶೂರು, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ತಿಳಿಸಿದ ಅವರು ನಮ್ಮ ನಾಡಿನ ವಿಶೇಷತೆಗಳ ಆಳವಾದ ಅರಿವು ನಮಗೆ ಇರಬೇಕಾದುದು ಅತ್ಯಗತ್ಯ ಎಂದರು.

ಅಭ್ಯಾಸಕ್ಕೆಂದೇ ಸಮಯ ಮೀಸಲಿಡಿ: ಸೌಮ್ಯಾ
ಉದ್ಯೋಗ ಮಾಹಿತಿ ಶಿಬಿರದ ಸಹಸಂಚಾಲಕಿ ಸೌಮ್ಯಾ ಕುರುಮುಜ್ಜಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ನಿಯಮಿತವಾದ ಅಭ್ಯಾಸ ಬೇಕು. ದಿನದಲ್ಲಿ ಒಂದಷ್ಟು   ಸಮಯವನ್ನು ಇದಕ್ಕಾಗಿ ಮೀಸಲಿರಿಸಬೇಕು. ಹಾಗಾದರೆ ಯಶಸ್ಸನ್ನು ಪಡೆಯುವುದು ಕಷ್ಟವಲ್ಲ ಎಂದರು. ಕೇರಳದ ಪ್ರಮುಖ  ವ್ಯಕ್ತಿಗಳು, ಅವರಿಗೆ ಲಭಿಸಿದ ಪ್ರಶಸ್ತಿಗಳು, ವಿಶೇಷ ದಿನಗಳು ಮೊದಲಾದ ವಿಷಯಗಳ ಬಗ್ಗೆ ಮಾಹಿತಿ  ನೀಡಿದ   ಅವರು   ಸಂಕೇತಗಳ   ಮೂಲಕ ಅವುಗಳನ್ನು ಹೇಗೆ ನೆನಪಿರಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು.

ಶಿಬಿರದ ಕೊನೆಯಲ್ಲಿ ಆಯ್ದ ಶೀಬಿರಾರ್ಥಿಗಳಿಂದ ತರಗತಿಯ ಅವಲೋಕನ ನಡೆಸಲಾಯಿತು. ಸಂಯೋಜಕ  ಮಹೇಶ ಏತಡ್ಕ,  ಬಳಗದ ಕೋಶಾಧಿಕಾರಿ ವಿನೋದ್‌ ಕುಮಾರ್‌ ಸಿ.ಎಚ್‌. ಅವರು ಶಿಬಿರದ ಯಶಸ್ಸಿನ ಬಗೆಗೆ ಸಂತೋಷ ವ್ಯಕ್ತಪಡಿಸಿ ಪೂರ್ಣವಾದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಸಿರಿಚಂದನ ಕನ್ನಡ ಯುವಬಳಗದ  ಮಾರ್ಗದರ್ಶಕ ಡಾ| ರತ್ನಾಕರ ಮಲ್ಲಮೂಲೆ, ಅಧ್ಯಕ್ಷ ರಕ್ಷಿತ್‌ ಪಿ. ಎಸ್‌., ಉಪಾಧ್ಯಕ್ಷ ಪ್ರಶಾಂತ್‌ ಹೊಳ್ಳ, ಜತೆ ಕಾರ್ಯದರ್ಶಿ ಸೌಮ್ಯ ಪ್ರಸಾದ್‌, ಸದಸ್ಯರಾದ ಧನೇಶ್‌ ಕೋಟೆಕಣಿ, ಶ್ರದ್ಧಾ  ನಾಯರ್ಪಳ್ಳ, ಜಯಪ್ರಕಾಶ ಪಳ್ಳತಡ್ಕ, ಶಿವಪ್ರಸಾದ್‌  ಮೈಲಾಟಿ, ಮೋಹಿತ್‌, ಕಾರ್ತಿಕ್‌ ಪಡ್ರೆ, ಸುಬ್ರಹ್ಮಣ್ಯ ಹೇರಳ ಮತ್ತಿತರರು ನೇತೃತ್ವ ನೀಡಿದರು.

Advertisement

ಶಿಬಿರ ನಡೆಸಲು ಸ್ಥಳಾವಕಾಶ ನೀಡಿ ಉಪಾಹಾರದ  ವ್ಯವಸ್ಥೆ   ಮಾಡಿದ ಗುರು ಪ್ರಸಾದ್‌ ಕೋಟೆಕಣಿ ಮತ್ತು ಬಳಗ ದವರಿಗೆ ಬಳಗದ ಸದಸ್ಯೆ ಶ್ರದ್ಧಾ ನಾಯರ್ಪಳ್ಳ ಕೃತಜ್ಞತೆ ಸಲ್ಲಿಸಿದರು. 

ಕಣ್ಣೂರು ವಿ.ವಿ. ಬಿ.ಎ. ಕನ್ನಡ ಪದವಿ ಪರೀಕ್ಷೆಯಲ್ಲಿ  ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಬಳಗದ ಸದಸ್ಯರಾದ ಸುನೀತಾ ಮಯ್ಯ ಹಾಗೂ ಅನುರಾಧಾ ಕೆ. ಅವರನ್ನು  ಯುವಬಳಗದ ಮಾರ್ಗದರ್ಶಕ ಡಾ| ರತ್ನಾಕರ ಮಲ್ಲಮೂಲೆ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next