Advertisement

ಕಡಿಮೆ ಖರ್ಚು; ಮಣ್ಣಿಗೂ ಆರೋಗ್ಯಕ್ಕೂ ಪೂರಕ

11:10 PM May 13, 2020 | Sriram |

ಕೋಟ: ದಶಕಗಳ ಹಿಂದೆ‌ ರೈತರು ಸರಳ ಸಾವಯವ ವಿಧಾನದ ಮೂಲಕವೇ ಬೆಳೆಗಳಿಗೆ ತಗಲುವ ರೋಗಬಾಧೆಗಳನ್ನು ಹತೋಟಿ ಮಾಡುತ್ತಿದ್ದರು. ಆದರೆ ಆಧುನಿಕ ಕೃಷಿ ಪದ್ಧತಿಯ ಪರಿಣಾಮ ರಾಸಾಯನಿಕಯುಕ್ತ ಕೀಟನಾಶಕಗಳ ಬಳಕೆ ಹೇರಳವಾಯಿತು ಹಾಗೂ ಇದರಿಂದ ಕ್ಯಾನ್ಸರ್‌ ಮುಂತಾದ ಮಾರಕ ರೋಗಗಳಿಗೆ ತುತ್ತಾಗಬೇಕಾಯಿತು. ಈ ನಡುವೆ ಕೋಟ ಸಮೀಪದ ಕೋಟತಟ್ಟುವಿನ ಪ್ರಗತಿಪರ ಕೃಷಿಕ ಹರಿಕೃಷ್ಣ ಹಂದೆಯವರು ಸಾಂಪ್ರದಾಯಿಕ ಪದ್ಧತಿಯಂತೆ ರಾಸಾಯನಿಕ ರಹಿತವಾದ ಸಾವಯವ ಕೀಟನಾಶಕವನ್ನು ಅಭಿವೃದ್ಧಿಪಡಿಸಿ ಕಲ್ಲಂಗಡಿ ಬೆಳೆಯ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

Advertisement

ಏನಿದು ಸಾವಯವ ಕ್ರಿಮಿನಾಶಕ
ಹುಳಗಳ ಬಾಧೆ, ಬೆಳೆನಾಶ, ಫಲವತ್ತತೆ ಕೊರತೆಯನ್ನು ಹೊಗಲಾಡಿಸಲು ಮನೆಯಲ್ಲೇ ಸಿಗುವ ಮಜ್ಜಿಗೆ, ಗೋಮೂತ್ರ, ಹೊಗೆಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸುಗಳನ್ನು ಬಳಸಿ ಕೀಟನಾಶಕವನ್ನು ತಯಾರಿಸಿ ರೋಗ ಬಾಧೆಯನ್ನು ನಿಯಂತ್ರಿಸುವ ವಿಧಾನವೇ ಸಾವಯವ ಕ್ರಿಮಿನಾಶಕ ವಿಧಾನ. ಕಲ್ಲಂಗಡಿಯಲ್ಲಿ ಕಂಡು ಬರುವ ಗಂಟುಹುಳು ಬಾಧೆ, ಎಲೆ ಕೊಳೆತಕ್ಕೆ ಗೋಮೂತ್ರ, ಮಜ್ಜಿಗೆಯನ್ನು ಮಿಶ್ರಣ ಮಾಡಿ ರಾಸಾಯನಿಕ ರೀತಿಯಲ್ಲೇ ಗಿಡಗಳಿಗೆ ಸಿಂಪಡಿಸುವ ಮೂಲಕ ಯಶಸ್ಸು ಪಡೆಯಲಾಗುತ್ತಿದೆ ಹಾಗೂ ಎಲೆ ಮುರುಟುವಿಕೆ, ಮಣ್ಣಿನ ಫಲವತ್ತತೆ ಹೆಚ್ಚಿಸಲು ಹೊಗೆಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸುಗಳನ್ನು ಪುಡಿಮಾಡಿ ಕುದಿಸಿ ಕಷಾಯ ರೀತಿಯಲ್ಲಿ ಸಿದ್ಧಪಡಿಸಿ ಬೆಳೆಗಳಿಗೆ ಸಿಂಪಡಿಸಲಾಗುತ್ತದೆ.

ಕಡಿಮೆ ಖರ್ಚು- ಆರೋಗ್ಯಕ್ಕೆ ದುಷ್ಪರಿಣಾಮವಿಲ್ಲ
ಸಾವಯವ ಕ್ರಿಮಿನಾಶಕವನ್ನು ನೈಸರ್ಗಿಕವಾದ ವಸ್ತುಗಳ ಮೂಲಕ ತಯಾರು ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವಿಲ್ಲ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೂ ಬೆಳೆಗಳಿಗೆ ಹಾನಿ ಇಲ್ಲ. ರಾಸಾಯನಿಕ ವಿಧಾನದಲ್ಲಿ 10ಸಾವಿರ ರೂ ತಗಲುವ ವೆಚ್ಚ ಈ ವಿಧಾನದಲ್ಲಿ ಕೇವಲ 1ಸಾವಿರ ರೂ ಒಳಗೆ ಮುಗಿಯುತ್ತದೆ. ಇಳುವರಿ ಹೆಚ್ಚಿಸಲು ಮಣ್ಣಿನ ಫಲವತ್ತತೆ ಜಾಸ್ತಿ ಮಾಡಲು ಕೂಡ ಇದು ಸಹಕಾರಿ.

ಅಭಿವೃದ್ಧಿಪಡಿಸಿದರೆ ಉತ್ತಮ
ಇದೇ ಮಾದರಿಯ ಹಲವು ವಿಧಾನಗಳು ಶೂನ್ಯ ಬಂಡಾವಳ ಕೃಷಿಯಲ್ಲಿ ಪ್ರಯೋಗಿಸಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಹೆಚ್ಚಿನ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಇದೀಗ ಈ ರೈತರು ತಯಾರಿಸಿ ಶೇಕಡಾ 100ರಷ್ಟು ಯಶಸ್ಸು ಪಡೆದಿರುವ ವಿಧಾನವನ್ನು ಕೃಷಿ ವಿಜ್ಞಾನಿಗಳು ಸಂಶೋಧಿಸಿ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದಲ್ಲಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಳಿದೆ.

ಯಶಸ್ವಿ ವಿಧಾನ
ಗ್ರಾಮಾಂತರ ಭಾಗದಲ್ಲಿ ರಾಸಾಯನಿಕ ಬಳಕೆಗೆ ಮೊದಲು ಇಂತಹ ವಿಧಾನ ಹೆಚ್ಚು ಚಾಲ್ತಿಯಲ್ಲಿತ್ತು. ನಾನು ಹಾಗೂ ಒಂದಷ್ಟು ಮಂದಿ ರೈತ ಮಿತ್ರರು ಈ ರೀತಿಯ ಪ್ರಯೋಗಗಳನ್ನು ಈ ಭಾಗದಲ್ಲಿ ಮಾಡಿ ಯಶಸ್ವಿಯಾಗಿದ್ದೇವೆ. ಕಲ್ಲಂಗಡಿ ಬೆಳೆಗೆ ಇದು ಅತ್ಯಂತ ಸೂಕ್ತವಾಗಿದೆ. ಈ ಕುರಿತು ಇಲಾಖೆ ವತಿಯಿಂದ ಸಂಶೋಧನೆಗಳು ನಡೆದಲ್ಲಿ ಪೂರಕ.
-ಹರಿಕೃಷ್ಣ ಹಂದೆ, ಸಾವಯವ ವಿಧಾನ ಬಳಕೆ ಮಾಡಿದ ಕೃಷಿಕರು

Advertisement

ಸಂಶೋಧನೆ ನಡೆದಿದೆ
ಈ ರೀತಿಯ ಹಲವು ವಿಧಾನಗಳನ್ನು ಈಗಾಗಲೇ ಅನ್ವೇಷಣೆ ನಡೆಸಲಾಗಿದೆ. ಆದರೆ ಸಾವಯವ ವಿಧಾನದಲ್ಲಿ ತಯಾರಿಸಿದ ಕಿಮಿನಾಶಕಗಳು ಬೇಗ ಹಾಳಾಗುವುದು ಮತ್ತು ಹೆಚ್ಚು ಕಾಲ ಸಂಗ್ರಹಿಸಲು ಕಷ್ಟವಾಗುತ್ತದೆ. ರಾಸಾಯನಿಕಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಹೆಚ್ಚು ಬಳಕೆಯಲ್ಲಿಲ್ಲ. ಕಡಿಮೆ ಬೆಳೆ ಇರುವವರು ಮನೆಯಲ್ಲೇ ತಯಾರಿಸಿ ಉಪಯೋಗಿಸುವುದಾದರೆ ಸೂಕ್ತ.
-ಎಸ್‌.ಯು. ಪಾಟೀಲ್‌, ಸ.ಸಂ. ನಿರ್ದೇಶಕರು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next