ಧಾರವಾಡ: ಧಾರವಾಡದ ಸಂಗೀತ ತನ್ನದೇ ಆದ ಶಕ್ತಿ ಹೊಂದಿದ್ದು, ಧಾರವಾಡವನ್ನು ಇಡೀ ದೇಶ ಮತ್ತು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಮಲ್ಲಿಕಾರ್ಜುನ ಮನಸೂರ ಸೇರಿದಂತೆ ಇಲ್ಲಿನ ಸಂಗೀತಗಾರರಿಗೆ ಸಲ್ಲುತ್ತದೆ ಎಂದು ಕವಿವಿ ಕುಲಪತಿ ಪ್ರೊ| ಕೆ.ಬಿ. ಗುಡಸಿ ಹೇಳಿದರು.
ಕವಿವಿಯು ಪದ್ಮವಿಭೂಷಣ ಡಾ| ಮಲ್ಲಿಕಾರ್ಜುನ ಮನಸೂರ ಸ್ಮರಣಾರ್ಥ ಲಲಿತಕಲಾ ಮತ್ತು ಸಂಗೀತ ಮಹಾವಿದ್ಯಾಲ ಯದಲ್ಲಿ “ಸಂಗೀತಜ್ಞರ ದಿನಾಚರಣೆ’ಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಯಶಸ್ವಿ ಸಂಗೀತಗಾರನ ಹಿಂದೆ ಕಠಿಣವಾದ ಪರಿಶ್ರಮ ಇದೆ. ಸಾಮಾನ್ಯ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನಸೂರ ಅವರು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ಸಂಗೀತವನ್ನು ಮನೋವೈಜ್ಞಾನಿಕ ಕ್ಷೇತ್ರದಲ್ಲಿ ಚಿಕಿತ್ಸೆ ನೀಡಲು ಕೂಡ ಸಂಗೀತವನ್ನು ಬಳಕೆ ಮಾಡಲಾಗುತ್ತದೆ ಎಂದರು.
ಕವಿವಿ ಪ್ರಸಾರಾಂಗದ ನಿರ್ದೇಶಕ ಡಾ| ಚಂದ್ರಶೇಖರ ರೊಟ್ಟಿಗವಾಡ ಮಾತನಾಡಿ, ಪಂಡಿತ ಮಲ್ಲಿಕಾರ್ಜುನ ಮನಸೂರ ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿ ಮುಡಿಪಾಗಿಟ್ಟು, ತಮ್ಮ ಸಂಗೀತದ ಸಾಧನೆಯಿಂದ ಧಾರವಾಡವನ್ನು ಜಗತ್ತಿಗೆ ಪರಿಚಯಿಸಿದರು. ಕವಿವಿ ಪ್ರಸಾರಂಗವು ಅನೇಕ ಮಹನೀಯರ ಹೆಸರಿನಲ್ಲಿ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕರ್ನಾಟಕ ಸಂಗೀತ ಕಾಲೇಜಿನ ಪ್ರಾಚಾರ್ಯ ಡಾ| ಶಾಂತಾರಾಮ ಹೆಗಡೆ ಮಾತನಾಡಿದರು. ಡಾ| ಸುಲಭಾದತ್ತ ನೀರಲಗಿ ಗಾಯನ ಪ್ರಸ್ತುತಪಡಿಸಿದರು. ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ| ಡಿ.ಬಿ. ಕರಡೋಣಿ, ಡಾ| ಎಸ್.ಸಿ. ಚೌಗಲಾ, ಉಪ ನಿರ್ದೇಶಕರಾದ ಡಾ| ಎನ್.ಸಿದ್ದಪ್ಪ, ಸಂಗೀತ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಡಾ|ಮಲ್ಲಿಕಾರ್ಜುನ ತರ್ಲಗಟ್ಟಿ, ಸಂಗೀತ ಕಲಾವಿದೆ ಸುಕನ್ಯಾ ಗುರುವ ಇನ್ನಿತರರಿದ್ದರು.