Advertisement

ಸಿರಿಧಾನ್ಯ ಬಳಸಿ ಆರೋಗ್ಯ ಗಳಿಸಿ

06:00 AM Jun 20, 2018 | |

ನಿಮ್ಮ ಆರೋಗ್ಯ ನಿಮ್ಮ ಅಡುಗೆಮನೆಯಲ್ಲಿ ಎಂಬ ಮಾತು ನೂರಕ್ಕೆ ನೂರು ನಿಜ. ನಾವು ಪ್ರತಿನಿತ್ಯ ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಕ್ಕಿ,ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ಸಾಮಾನ್ಯವಾಗಿ ಎಲ್ಲರೂ ಅಡುಗೆಯಲ್ಲಿ ಬಳಸುತ್ತೀರಿ. ಆದರೆ, ಹೆಚ್ಚಿನವರು ಸಿರಿಧಾನ್ಯಗಳ ಬಳಕೆಯನ್ನು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷಿಸುತ್ತಾರೆ. ಹೆಸರಿನಲ್ಲೇ ಸಿರಿ ಇರುವ ಧಾನ್ಯಗಳಿಂದ ಏನೇನು ಮಾಡಬಹುದು ಗೊತ್ತಾ?

Advertisement

ನವಣೆ ದೋಸೆ
ಬೇಕಾಗುವ ಸಾಮಗ್ರಿ: ನವಣೆ- 1ಕಪ್‌, ಉದ್ದಿನಬೇಳೆ- 1/4ಕಪ್‌, ಮೆಂತೆ-1ಚಮಚ, ತೆಳು ಅವಲಕ್ಕಿ-1/2ಕಪ್‌, ಉಪ್ಪು- 1ಚಮಚ

ಮಾಡುವ ವಿಧಾನ: ನವಣೆ, ಉದ್ದಿನಬೇಳೆ, ಮೆಂತೆಯನ್ನು ಒಟ್ಟಾಗಿ ಬೆರೆಸಿ ನೀರು ಹಾಕಿ ಚೆನ್ನಾಗಿ ತೊಳೆದು ಮೂರು ಗಂಟೆ ನೆನೆಸಿಡಿ.
ಅವಲಕ್ಕಿಯನ್ನು ತೊಳೆದು 15ನಿಮಿಷ ನೆನೆಸಿಟ್ಟರೆ ಸಾಕು. ನಂತರ ಎಲ್ಲವನ್ನೂ ಒಟ್ಟಿಗೆ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಹದಕ್ಕೆ ಬೇಕಾಗುವಷ್ಟು ನೀರು ಹಾಕಿದರೆ ಸಾಕು. ಈ ಹಿಟ್ಟನ್ನು ಸುಮಾರು 8-10 ಗಂಟೆಗಳ ಹುದುಗು ಬರಲು ಇಟ್ಟುಬಿಡಿ. ನಂತರ ಹಿಟ್ಟಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಗುಚಿ. ಈಗ ದೋಸೆ ಕಾವಲಿ ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಹೊಯ್ದು ದೋಸೆ ಹರಡಿ, ಮುಚ್ಚಳ ಮುಚ್ಚಿ ಬೇಯಿಸಿ. ಎರಡೂ ಕಡೆ ಬೇಯಿಸುವ ಅಗತ್ಯವಿಲ್ಲ. ತೆಂಗಿನಕಾಯಿ ಚಟ್ನಿ, ಪಲ್ಯದೊಂದಿಗೆ ತಿನ್ನಲುರುಚಿ.

ಸಾಮೆ ಪುಂಡಿಗಟ್ಟಿ
ಬೇಕಾಗುವ ಸಾಮಗ್ರಿ: ಸಾಮೆ- 1ಕಪ್‌, ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್‌- 1/4ಕಪ್‌, ತುರಿದ ತೆಂಗಿನಕಾಯಿ-1/2ಕಪ್‌, ನೀರು- 1ಕಪ್‌, ಉಪ್ಪು- 1ಚಮಚ. ಒಗ್ಗರಣೆಗೆಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಕರಿಬೇವು.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಹಾಕಿ ಬಿಸಿ ಮಾಡಿ. ಸಾಸಿವೆ ಸಿಡಿದ ನಂತರ ನೀರು ಸೇರಿಸಿ ಕುದಿಯಲು ಬಿಡಿ. ಆದಕ್ಕೆ ಕತ್ತರಿಸಿದ ಕ್ಯಾರೆಟ್‌, ತೆಂಗಿನತುರಿ ಸೇರಿಸಿ. 2-3 ನಿಮಿಷ ಕುದಿಯುತ್ತಿರಲಿ.
ಅಷ್ಟರಲ್ಲಿ ಸಾಮೆಯನ್ನು ತೊಳೆದು ತರಿತರಿಯಾಗಿ ನೀರು ಸೇರಿಸದೇ ರುಬ್ಬಿಕೊಳ್ಳಿ. ರುಬ್ಬಿದ ಸಾಮೆಯನ್ನು ಕುದಿಯುತ್ತಿರುವ ಒಗ್ಗರಣೆಗೆ
ಸೇರಿಸಿ, ಕೈಯಾಡಿಸುತ್ತಿರಿ. ಮಿಶ್ರಣ ಒಟ್ಟಾಗಿ ಮುದ್ದೆಯಂತಾಗಿ ಬರುವಾಗ ಒಲೆ ಆರಿಸಿ. ಅದು ಬೆಚ್ಚಗೆ ಇರುವಾಗಲೇ,
ಉಂಡೆಯಂತೆ ಮಾಡಿ ಇಡ್ಲಿ ಪಾತ್ರೆಯಲ್ಲಿ 15 ನಿಮಿಷ ಬೇಯಿಸಿ. ಕಾಯಿಚಟ್ನಿ, ಸಾಂಬಾರಿನೊಂದಿಗೆ ಸವಿಯಲು ರುಚಿ.

Advertisement

ಊದಲಿನ ಮೊಸರನ್ನ
ಬೇಕಾಗುವ ಸಾಮಗ್ರಿ: ಊದಲು- 1/2ಕಪ್‌, ನೀರು- 1.5ಕಪ್‌, ಗಟ್ಟಿಮೊಸರು- 1ಕಪ್‌, ಹಾಲು- 1/4ಕಪ್‌, ತುರಿದಕ್ಯಾರೆಟ್‌- 2ದೊಡ್ಡ ಚಮಚ, ಎಳೆ ಮುಳ್ಳುಸೌತೆ ತುಂಡುಗಳು- ಸ್ವಲ್ಪ, ಹಸಿರುದ್ರಾಕ್ಷಿ- ಕೆಲವು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಹಸಿಶುಂಠಿ – ಚಿಕ್ಕತುಂಡು, ಹಸಿಮೆಣಸು- 2, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಕರಿಬೇವು.

ಮಾಡುವ ವಿಧಾನ: ಊದಲನ್ನು ಸಾಕಷ್ಟು ನೀರು ಹಾಕಿ ತೊಳೆದು, ನೀರನ್ನು ಬಸಿದಿಡಿ. ಒಂದು ಪಾತ್ರೆಯಲ್ಲಿ ಒಂದೂವರೆ ಕಪ್‌ ನೀರು ಹಾಕಿ ಕುದಿಸಿ. ಅದು ಕುದಿಯುತ್ತಿರುವಾಗ ಬಸಿದಿಟ್ಟ ಊದಲನ್ನು ಸೇರಿಸಿ. ಮಂದ ಉರಿಯಲ್ಲಿ ಬೇಯಲು ಬಿಡಿ. ಊದಲು ಮೆತ್ತಗಾಗಿ, ಮುದ್ದೆಯಂತಾಗುವವರೆಗೆ ಬೇಯಲಿ. ಇದು 10-15ನಿಮಿಷ ತೆಗೆದುಕೊಳ್ಳಬಹುದು. ಬೆಂದ ಊದಲನ್ನು ತಣ್ಣಗಾಗಲು ಬಿಡಿ. ಈಗ ಇದಕ್ಕೆ ಮೊಸರು, ಹಾಲು, ಕ್ಯಾರೆಟ್‌ ತುರಿ, ಸೌತೆ ತುಂಡು, ದ್ರಾಕ್ಷಿ ಮತ್ತು ಉಪ್ಪನ್ನು ಸೇರಿಸಿ ಕಲಸಿ. ಕೊನೆಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಕತ್ತರಿಸಿದಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಊದಲಿನ ಮೊಸರನ್ನಕ್ಕೆ ಸೇರಿಸಿ. ರುಚಿ, ರುಚಿಯಾದ ಊದಲಿನ ಮೊಸರನ್ನವನ್ನು ಸವಿಯಿರಿ.

ಸಾಮೆಯ ಖೀರು
ಬೇಕಾಗುವ ಸಾಮಗ್ರಿ: ಸಾಮೆ- 1/2ಕಪ್‌, ನೀರು- 1ಕಪ್‌, ಗಟ್ಟಿಹಾಲು- 1.5ಕಪ್‌, ಸಕ್ಕರೆ-1/4 ಕಪ್‌, ತುಪ್ಪ- 1ಚಮಚ, ಏಲಕ್ಕಿಪುಡಿ- 1/4ಚಮಚ, ಕೇಸರಿದಳ, ಗೋಡಂಬಿ

ಮಾಡುವ ವಿಧಾನ: ಸಾಮೆಯನ್ನು ಸಾಕಷ್ಟು ನೀರು ಹಾಕಿ ತೊಳೆದು, ನೀರನ್ನು ಬಸಿದಿಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಡಂಬಿಯನ್ನು ಹುರಿದು ತೆಗೆದಿಡಿ. ನಂತರ ಉಳಿದ ತುಪ್ಪವನ್ನು ಹಾಕಿ ಸಾಮೆಯನ್ನು ಸ್ವಲ್ಪ ಹೊತ್ತು ಹುರಿಯಿರಿ. ಅದಕ್ಕೆ 1ಕಪ್‌ ನೀರು ಸೇರಿಸಿ ಮಂದ ಉರಿಯಲ್ಲಿ ಬೇಯಲು ಬಿಡಿ. ಸಾಮೆ ಮೆತ್ತಗಾಗಿ, ಮುದ್ದೆಯಂತಾಗುವವರೆಗೆ ಬೇಯಲಿ. ಇದು 10-15 ನಿಮಿಷ ತೆಗೆದುಕೊಳ್ಳಬಹುದು. ಈಗ ಇದಕ್ಕೆ ಹಾಲು ಸೇರಿಸಿ. ಹಾಲು ಕುದ್ದು ದಪ್ಪ ಆಗುವವರೆಗೆ ಕೈಯಾಡಿಸುತ್ತಿರಿ. ಈಗ ಸಕ್ಕರೆ ಸೇರಿಸಿ. ಕುದಿ ಬಂದ ಕೂಡಲೆ ಹಾಲಿನಲ್ಲಿ ನೆನೆಸಿದ ಕೇಸರಿದಳ, ಏಲಕ್ಕಿಪುಡಿ ಹಾಕಿ ಕೆಳಗಿಳಿಸಿ. ಸ್ವಾದಿಷ್ಟ ಸಾಮೆಯ ಖೀರನ್ನು ಸವಿಯಿರಿ.

ಸುಮನ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next