ವಾಷಿಂಗ್ಟನ್ : ಅಮೆರಿಕನ್ ನೌಕಾ ಪಡೆಯ ಮಹಿಳಾ ಸಹೋದ್ಯೋಗಿಗಳು, ಹಿರಿಯ ಯೋಧರು ಹಾಗೂ ಇತರ ಕೆಲವು ಅಪರಿಚಿತ ಮಹಿಳೆಯರ ನಗ್ನ ಫೋಟೋಗಳನ್ನು ರಹಸ್ಯ ಫೇಸ್ ಬುಕ್ ಪೇಜಿಗೆ ಅಪ್‌ಲೋಡ್ ಮಾಡಿ ಹಂಚಿಕೊಂಡ ವರದಿಗಳು ಬಹಿರಂಗವಾಗಿರುವುದನ್ನು ಅನುಸರಿಸಿ ಅಮೆರಿಕನ್ ನೌಕಾ ಪಡೆ ಇದೀಗ ಈ ಲಜ್ಜೆಗೇಡಿ ಪ್ರಕರಣದ ತನಿಖೆಯನ್ನು ಕೈಗೊಂಡಿದೆ.
ನೌಕಾ ಪಡೆಯ ಮಹಿಳಾ ಸಹೋದ್ಯೋಗಿಗಳಿಗೆ ಹಾಗೂ ಇತರ ಮಹಿಳೆಯರಿಗೆ ಗೊತ್ತಾಗದಂತೆಯೇ ಅವರ ಪುರುಷ ಸಹೋದ್ಯೋಗಿಗಳು ಕದ್ದು ಮುಚ್ಚಿ ತೆಗೆದ, ನಗ್ನ ಫೋಟೋಗಳನ್ನು ಕೆಲವು ನೌಕಾ ಪಡೆ ಯೋಧರು “ಮೆರೈನ್ಸ್ ಯುನೈಟೆಡ್’ ಎಂಬ ರಹಸ್ಯ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು. ಈ ಫೇಸ್ ಬುಕ್ ಪೇಜಿಗೆ ಕರ್ತವ್ಯದಲ್ಲಿರುವ, ನಿವೃತ್ತರಾಗಿರುವ ನೌಕಾ ಪಡೆ ಸಿಬಂದಿಗಳು ಮಾತ್ರವಲ್ಲದೆ ಬ್ರಿಟಿಷ್ ರಾಯಲ್ ಮೆರೈನ್ಸ್‌ನ ಸಿಬಂದಿಗಳು ಕೂಡ ಸದಸ್ಯತ್ವವನ್ನು ಹೊಂದಿದ್ದಾರೆ.
ಫೇಸ್ ಬುಕ್ ಗೆ ಅಪ್‌ಲೋಡ್ ಮಾಡಲಾಗಿರುವ ನಗ್ನ ಫೋಟೋಗಳಲ್ಲಿನ ಹಲವಾರು ಅಮೆರಿಕನ್ ನೌಕಾ ಪಡೆ ಮಹಿಳಾ ಸಿಬಂದಿಗಳನ್ನು ಗುರುತಿಸಲಾಗಿದೆ. ಈ ಫೋಟೋಗಳಿಗೆ ಅಶ್ಲೀಲ ಟೀಕೆ-ಟಿಪ್ಪಣಿಗಳನ್ನೂ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇವಲ್ ಕ್ರಿಮಿನಲ್ ಇನ್‌ವೆಸ್ಟಿಗೇಟಿವ್ ಸರ್ವಿಸ್ ಇದೀಗ ಈ ಲಜ್ಜೆಗೇಡಿ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಫೇಸ್ ಬುಕ್‌ನಲ್ಲಿನ ಈ ನಗ್ನ ಫೋಟೋಗಳ ಕೊಂಡಿಯನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿರುವ ಅಮೆರಿಕನ್ ನೌಕಾ ಪಡೆಯ ಗುತ್ತಿಗೆದಾರನೊಬ್ಬನನ್ನು ತತ್‌ಕ್ಷವೇ ಅಮಾನತು ಮಾಡಲಾಗಿದೆ. ಪ್ರಕೃತ ಬಿರುಸಿನಿಂದ ಸಾಗುತ್ತಿರುವ ತನಿಖೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಮೆರೈನ್ ಕಾರ್ಪ್ ನ ಕಮಾಂಡೆಂಟ್ ಜನರಲ್ ರಾಬರ್ಟ್ ಬಿ ನೆಲ್ಲರ್ ನಿರಾಕರಿಸಿದ್ದಾರೆ.
“ನಮ್ಮ ನೌಕಾಪಡೆಯ ಯಾವುದೇ ಸಿಬಂದಿಯನ್ನು ಆನ್‌ಲೈನ್ ಅಥವಾ ಬೇರೆ ಯಾವುದೇ ಕಡೆ ಯಾವುದೇ ರೀತಿಯಲ್ಲಿ ಗುರಿ ಇರಿಸವುದು ಸರಿಯಲ್ಲ; ಸದಭಿರುಚಿಯದ್ದೂ ಅಲ್ಲ; ಈ ಕೃತ್ಯ ಇತರರ ಬಗ್ಗೆ ತಮ್ಮಲ್ಲಿನ ಅಗೌರವದ ಸೂಚಕವಾಗಿದೆ’ ಎಂದವರು ಹೇಳಿಕೆ ನೀಡಿದ್ದಾರೆ.
ನೌಕಾ ಪಡೆ ಮಹಿಳಾ ಸಿಬಂದಿಗಳ ನಗ್ನ ಫೋಟೋಗಳನ್ನು ರಹಸ್ಯ ಫೇಸ್ ಬುಕ್ ಪೇಜಿಗೆ ಅಪ್‌ಲೋಡ್ ಮಾಡಲಾಗಿರುವುದನ್ನು ಮೊತ್ತ ಮೊದಲು ವರದಿ ಮಾಡಿದ್ದು ಸೆಂಟರ್ ಫಾರ್ ಇನ್‌ವೆಸ್ಟಿಗೇಟಿವ್ ರಿಪೋರ್ಟಿಂಗ್ ಸಂಸ್ಥೆ. ನೌಕಾ ಪಡೆಯ ಹಿರಿಯ ಯೋಧ ಥಾಮಸ್ ಬ್ರೆನನ್ ಅವರು ನಡೆಸುತ್ತಿರುವ ಲಾಭದ ಉದ್ದೇಶವಿಲ್ಲದ ಸುದ್ದಿ ಸಂಸ್ಥೆ ದಿ ವಾರ್ ಹಾರ್ , ಈ ಅನೈತಿಕ ಅಕ್ರಮ ಚಟುವಟಿಕೆಗಳನ್ನು ಬಹಿರಂಗಪಡಿಸಿತ್ತು.